ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಜಾಗೃತ ಚಿಂತನ ಮಂಥನ ಸಮಾಗಮ
(Kaup) ಕಾಪು : ವಿಶ್ವಕರ್ಮ ಸಮಾಜವನ್ನು ಒಗ್ಗೂಡಿಸಿಕೊಂಡು ಆಸರೆಯಾಗಿ ವಿಶ್ವಬ್ರಾಹ್ಮಣ ಸಮುದಾಯ ಸಾಮರ್ಥ್ಯಾಭಿವೃದ್ಧಿ ಸಮಿತಿಯು ಬೆಳೆದು ನಿಲ್ಲಲಿ ಎಂದು ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಾಪು ಗಣೇಶ ಆಚಾರ್ಯ ಹೇಳಿದರು.
ಅವರು ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ವಿಶ್ವಬ್ರಾಹ್ಮಣ ಸಮುದಾಯ ಸಾಮರ್ಥ್ಯಾಭಿವೃದ್ಧಿ ಸಮಿತಿ ಕಾಪು ವತಿಯಿಂದ ನಡೆದ ಜಾಗೃತ ಚಿಂತನ ಮಂಥನ ಸಮಾಗಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತಿ, ಪತ್ರಕರ್ತ ಚಂದ್ರಶೇಖರ ಮಂಡೆಕೋಲು ಮಾತನಾಡಿ, ಹಿಂದು ಧರ್ಮಕ್ಕೆ ವೇದವೇ ಪ್ರಮಾಣ. ಋಗ್ವೇದದಲ್ಲಿ ಉಲ್ಲೇಖಿತ ವಿಶ್ವಕರ್ಮನು ಸೃಷ್ಟಿಕರ್ತನು. ಅಂತಹ ವಿಶ್ವಕರ್ಮ ಸಮುದಾಯದ ಶಿಲ್ಪಿಗಳ ಹೃದಯದಲ್ಲಿ ಪಡಿಮೂಡಿದ ಬಿಂಬವು ದೇವರಾಗಿ ಕೋಟ್ಯಾಂತರ ಭಕ್ತರ ದೇವರಾಗಿ ನಿಲ್ಲುವನು. ವಾಸ್ತು ತಜ್ಞನ ನೆಪದಲ್ಲಿ ಪ್ರಾಚೀನ ಪರಂಪರೆಯ ಶಿಲ್ಪಿಗಳಿಗೆ ಮಾನ್ಯತೆ ನೀಡದಿರುವುದು ಹಿಂದು ಧರ್ಮಕ್ಕೆ ಅವಮಾನ ಮಾಡಿದಂತೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇಂತಹ ಅವಮಾನಗಳ ವಿರುದ್ಧ ಜಾಗೃತ ಮನಸ್ಥಿತಿಯನ್ನು ವಿಶ್ವಕರ್ಮರು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವಬ್ರಾಹ್ಮಣ ಸಮುದಾಯ ಸಾಮರ್ಥ್ಯಾಭಿವೃದ್ಧಿ ಸಮಿತಿ ಸಂಚಾಲಕ ಕಾಪು ಶ್ರೀಕಾಂತ ಬಿ. ಆಚಾರ್ಯ ಮಾತನಾಡಿ, ಸಂಘಟನಾತ್ಮಕವಾಗಿ ಆಸರೆಯಾಗುವ ಮೂಲಕ ಸಮಾಜದ ನಡುವಿನ ಕಂದಕವನ್ನು ಸರಿದೂಗಿಸುವ ಕೆಲಸ ಸಂಘಟನೆಯಿಂದ ಆಗಲಿದೆ. ಸಮಸ್ಯೆಗಳ ವಿರುದ್ಧ ಹೋರಾಟದ ಮೂಲಕ ಸಮಾಜಕ್ಕೆ ಬೆನ್ನೆಲುಬಾಗಿ ಕಾರ್ಯೋನ್ಮುಖವಾಗಲಿದ್ದು, ರಾಜಕೀಯವಾಗಿಯೂ ಸಮಾಜದ ಸ್ಥಾನಮಾನ ಗಟ್ಟಿಗೊಳಿಸುವ ಪ್ರಯತ್ನ ನಡೆಸಲಾಗುತ್ತದೆ ಎಂದರು.
ಸಿನೆಮಾ ನಟ, ರಂಗ ನಿರ್ದೇಶಕ, ಸಾಹಿತಿ ಬಾಸುಮ ಕೊಡಗು ಲಾಂಚನ ಬಿಡುಗಡೆಗೊಳಿಸಿದರು.
ಶಿಲ್ಪ ರತ್ನಾಕರ ಬಿರುದು ಪ್ರಧಾನ: ಸಮಾರಂಭದಲ್ಲಿ ಸ್ವರ್ಣ ಶಿಲ್ಪಿಗಳಾದ ಕಿಶನ್ ಆಚಾರ್ಯ ಕೋಟೇಶ್ವರ, ನಾಗರಾಜ ಆಚಾರ್ಯ ಪೆರ್ಡೂರು, ಅರವಿಂದ ಆಚಾರ್ಯ ಗರಡಿ ಮಜಲು, ಕಾಷ್ಠ ಶಿಲ್ಪಿ ಕಾರ್ತಿಕ ಆಚಾರ್ಯ ಇನ್ನ, ಶಿಲಾ ಶಿಲ್ಪಿ ನಾಗೇಶ್ ಆಚಾರ್ಯ ಅಜ್ಜರಕಾಡು ಅವರಿಗೆ ಶಿಲ್ಪ ರತ್ನಾಕರ ಬಿರುದು ಪ್ರಧಾನ ಮಾಡಲಾಯಿತು.
ಕಲಾ ರತ್ನಾಕರ ಪುರಸ್ಕಾರ : ಸ್ವರ್ಣ ವಿನ್ಯಾಸಕಾರ ಪಿ. ಗೋವಿಂದ ಆಚಾರ್ಯ ಕಾಪು, ದಾರು ಶಿಲ್ಪಿ ಪುಟ್ಟಣ್ಣ ಆಚಾರ್ಯ ಇನ್ನಂಜೆ, ಸುಬ್ರಾಯ ಆಚಾರ್ಯ ಇನ್ನಂಜೆ, ಜನಾರ್ದನ ಆಚಾರ್ಯ ಕಲ್ಯಾಲು, ಕಮ್ಮಾರಿಕೆ ರವೀಂದ್ರ ಆಚಾರ್ಯ ಕೊಪ್ಪಲಂಗಡಿ, ಲೋಹ ಶಿಲ್ಪಿ ಪ್ರಭಾಕರ ಆಚಾರ್ಯ ಬಿಳಿಯಾರು, ನಾಟಕ ರಂಗ ದಿವಾಕರ ಕಟೀಲು, ನಾಟಕ, ಯಕ್ಷಗಾನ ಕು. ಪಲ್ಲವಿ ಕೊಡಗು ಕಟಪಾಡಿ, ಕುಣಿತ ಭಜನೆ ಗುರು ಶ್ರೀಧರ ಆಚಾರ್ಯ ಪಾದೆಬೆಟ್ಟು ಅವರಿಗೆ ಕಲಾ ರತ್ನಾಕರ ಪುರಸ್ಕಾರ ನೀಡಲಾಯಿತು.
ಸೇವಾರತ್ನ ಪುರಸ್ಕಾರ : ಬಾಲಕೃಷ್ಣ ಆಚಾರ್ಯ ಬೆಳಪು, ಜಯರಾಮ ಆಚಾರ್ಯ ಕೊಪ್ಪಲಂಗಡಿ, ವಿಜಯ ಆಚಾರ್ಯ ಉಚ್ಚಿಲ, ಡಾ. ಮಿಥುನ್ ಎಸ್. ಪುಷ್ಕರ್ ಮಲ್ಲಾರ್, ದಿನೇಶ್ ಆಚಾರ್ಯ ಕಾಪು, ಸಂದೀಪ್ ಆರ್.ಬಿ., ಚಂದ್ರಯ್ಯ ಆಚಾರ್ಯ ಮಲಂಗೋಳಿ, ವಾದಿರಾಜ್ ಆಚಾರ್ಯ ಇನ್ನಂಜೆ, ರವೀಂದ್ರ ಶರ್ಮ, ರತ್ನಾಕರ ಆಚಾರ್ಯ ಪಳ್ಳಿ ನಿಂಜೂರು ಅವರಿಗೆ ಸೇವಾರತ ಪುರಸ್ಕಾರ ಪ್ರಧಾನಿಸಲಾಯಿತು.
ವಿಶೇಷ ಅಭಿನಂದನೆಯಡಿ ಮಾರಿಗುಡಿಗಳ ಗೊಂಬೆ ರಚನೆ ಮಾಡುವ ಗಂಗಾಧರ ಆಚಾರ್ಯ ಕಾಪು, ವಾಮನ ಆಚಾರ್ಯ ಉಳಿಯಾರಗೋಳಿ, ಮಂಜುನಾಥ ಆಚಾರ್ಯ ಉಳಿಯಾರಗೋಳಿ, ಯುವ ಪ್ರತಿಭೆಗಳಾದ ಪ್ರದೀಪ್ ಆಚಾರ್ಯ, ಶ್ರೀನಿಧಿ ಪ್ರಸಾದ್, ಚಲನಚಿತ್ರ ನಾಯಕ ನಟ ಕರುಣಾಕರ ಆಚಾರ್ಯ ಉದ್ಯಾವರ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಮಾರಾಳಿ, ಕುತ್ಯಾರು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಆಚಾರ್ಯ ಮುಕ್ರುಗುತ್ತು, ಯುವ ಭಾಷಣಗಾರ್ತಿ ಕವಿತಾ ಮುದೂರು, ಪುರೋಹಿತ್ ದಿವಾಕರ ಅಗ್ನಿಹೋತ್ರಿ ಬಂಟಕಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡುಬಿದ್ರಿ ವಲಯಾಧ್ಯಕ್ಷ ಭುಜಂಗ ಆಚಾರ್ಯ, ನಾಗಲಿಂಗಸ್ವಾಮಿ ಯುವಕ ಸೇವಾದಳದ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಕೈಪುಂಜಾಲು, ಶ್ರೀ ಕಾಳಿಕಾ ಮಹಿಳಾ ಮಂಡಳಿ ಅಧ್ಯಕ್ಷೆ ರೇಖಾ ಶ್ರೀಕಾಂತ್ ಆಚಾರ್ಯ ಇದ್ದರು.
ಅದ್ವಿತಾ ವಿ. ಆಚಾರ್ಯ ಮರ್ಣೆ ಪ್ರಾರ್ಥಿಸಿದರು. ಸುರೇಶ ಆಚಾರ್ಯ ಮಂಚಕಲ್ಲು ಸ್ವಾಗತಿಸಿದರು. ಧಾರ್ಮಿಕ ಚಿಂತಕ ದಾಮೋದರ ಶರ್ಮ ನಿರೂಪಿಸಿ, ವಂದಿಸಿದರು.
ಉದ್ಘಾನೆಯ ಸಂದರ್ಭ ಸಮುದಾಯದ 108 ದಂಪತಿ ಮತ್ತು 108 ವ್ಯಕ್ತಿಗಳಿಂದ ಒಟ್ಟು 216 ದೀಪ ಪ್ರಜ್ವಲನೆಗೈಯಲಾಯಿತು.

