
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ : ಸಹಕಾರ ಸಪ್ತ ಸಂಭ್ರಮದ ಸಮಾರೋಪ, ಬಹುಮಾನ ವಿತರಣಾ ಕಾರ್ಯಕ್ರಮ
ಸಮಾಜಮುಖಿ ಕಾರ್ಯಕ್ರಮಗಳು ಸಹಕಾರ ಸಪ್ತ ಸಂಭ್ರಮಲ್ಲಾಗಿದೆ: ಜಯಕರ ಶೆಟ್ಟಿ ಇಂದ್ರಾಳಿ

(ಚಿತ್ರ ಕೃಪೆ: ರವಿ ಡಿಜಿಟಲ್ಸ್, ಪಡುಬಿದ್ರಿ)
(Padubidri) ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಗಳ ಜಂಟಿ ಆಶ್ರಯದಲ್ಲಿ ಆಯೋಜಿತ ಅಂತಾರಾಷ್ಟ್ರೀಯ ಸಹಕಾರ ವರ್ಷ – 2025 ರ ಸಹಕಾರ ಸಪ್ತ ಸಂಭ್ರಮ ಕಾರ್ಯಕ್ರಮದ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ಸಹಕಾರ ಸಪ್ತ ಸಂಭ್ರಮ ಕಾರ್ಯಕ್ರಮವುಅಭೂತಪೂರ್ವ ಮತ್ತು ಅರ್ಥಪೂರ್ಣ ವಾಗಿ ಮೂಡಿ ಬಂದಿದೆ. ಪ್ರಕೃತಿಯ ಋಣ ಸಂದಾಯ ನಾವು ಮಾಡಲೇ ಬೇಕಿದೆ ಎಂಬುದನ್ನು ಅರಿತಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘವು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನೊಳಗೊಂಡ ಸತತ ಎಂಟು ದಿನಗಳ ಕಾರ್ಯದಲ್ಲಿ ಸಮಸ್ತ ಸಮಾಜವನ್ನು ಸೇರಿಸಿಕೊಂಡು ಮಾಡಿರುವುದು ಸಹಕಾರಿಗಳಿಗೆ ಹೆಮ್ಮೆ ಎಂದರು.
ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಸಹಕಾರ ರತ್ನ ಕೆ. ನಾರಾಯಣ ಬಲ್ಲಾಳ್ ಮಾತನಾಡಿ, ಪಡುಬಿದ್ರಿ ಸೊಸೈಟಿ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿದೆ. ಇನ್ನಷ್ಟು ಉತ್ತಮ ಕಾರ್ಯಗಳು ಇನ್ನಷ್ಟು ಮೂಡಿಬರಲಿ ಎಂದರು.
ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಮಾಜಿ ತಾ. ಪಂ. ಸದಸ್ಯ ನವೀನ್ ಚಂದ್ರ ಜೆ. ಶೆಟ್ಟಿ, ಟಿಎಪಿಸಿಎಂಎಸ್‌ನ ನಿರ್ದೇಶಕ ಗಂಗಾಧರ ಶೆಟ್ಟಿ ಮಾತನಾಡಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಎಚ್. ಪುತ್ರನ್, ಕಾರ್ಯಕ್ರಮ ಸಂಚಾಲಕ ನಿಖಿಲ್ ವೇದಿಕೆಯಲ್ಲಿದ್ದರು.
ತೀರ್ಪುಗಾರರ ಪೈಕಿ ರಮೇಶ್ ಕಲ್ಮಾಡಿ ವಿವಿಧ ಸಂಘಗಳ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ನಡೆದ ಪರಿಸರ ಕುರಿತಾದ ಸಾಂಸ್ಕೃತಿಕ ಸ್ಪರ್ಧೆಳ ಕುರಿತಾಗಿ ಅಭಿಪ್ರಾಯವನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಸಹಕರಿಸಿದ ರವಿರಾಜ್ ಎನ್. ಕೋಟ್ಯಾನ್ ಅವರನ್ನು ಸಮ್ಮಾನಿಸಲಾಯಿತು.
ಸ್ಪರ್ಧಾ ವಿಜೇತ ಸಹಕಾರ ಸಂಘಗಳ ತಂಡಗಳಲ್ಲಿ ಪೆರ್ಡೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘವು 25, ೦೦೦ ರೂ ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನವನ್ನು ಪಡೆಯಿತು. ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸಂಸ್ಥೆಯು 20, ೦೦೦ ರೂ. ಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಮಂದಾರ್ತಿ ಸೇವಾ ಸಹಕಾರಿ ಸಂಘವು 15, ೦೦೦ರೂ. ಗಳೊಂದಿಗೆ ತೃತೀಯ ಸ್ಥಾನವನ್ನು ಗಳಿಸಿತು.
ಸ್ಥಳೀಯ ತಂಡಗಳಲ್ಲಿ ಯುವವಾಹಿನಿ ಪಡುಬಿದ್ರಿ ಘಟಕ 25, ೦೦೦ರೂ. ಗಳೊಂದಿಗೆ ಪ್ರಥಮ ಸ್ಥಾನ, ಕರಾವಳಿ ಫ್ರೆಂಡ್ಸ್ ತೆಂಕ ಎರ್ಮಾಳು ದ್ವಿತೀಯ ಸ್ಥಾನದೊಂದಿಗೆ 20, ೦೦೦ ನಗದು ಬಹುಮಾನವನ್ನು ಗಳಿಸಿತು.
ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿ, ಈ ಕಾರ್ಯಕ್ರಮದ ಯಶಸ್ಸಿನಿಂದಾಗಿ ತಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಿರುವುದಾಗಿ ಹೇಳಿದರು.
ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ವಂದಿಸಿದರು.

