ಬೆಳಪು : ಸ್ನಾತಕೋತ್ತರ ಕೇಂದ್ರಕ್ಕೆ ಬಿಡುಗಡೆಯಾದ ರೂ. 7.80 ಕೋಟಿ ರೂ. ಬೇರೆ ಕೆಲಸಕ್ಕೆ
ವಿಶ್ವವಿದ್ಯಾಲಯವೇ ಇದರ ಜವಾಬ್ದಾರ : ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್
(Padubidri) ಪಡುಬಿದ್ರಿ: ಬೆಳಪುವಿನಲ್ಲಿ ಸ್ನಾತಕೋತ್ತರ ಕೇಂದ್ರಕ್ಕೆ ಬಿಡುಗಡೆಯಾದ ರೂ. 7.80 ಕೋಟಿ ಹಣವನ್ನು ಬೇರೆ ಕೆಲಸಕ್ಕೆ ಉಪಯೋಗಿಸಿರುವುದು ಅಪರಾಧ. ಸರಕಾರ ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ಹಣವನ್ನು ಬೆಳಪುವಿನ ಕೇಂದ್ರದ ಕಾಮಗಾರಿಗೆ ಮರಳಿಸಬೇಕು. ಸರಕಾರ ಇದರ ಜವಾಬ್ದಾರಿ ಹೊರಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯವೇ ಇದರ ಜವಾಬ್ದಾರಿಯನ್ನು ಹೊರಬೇಕು ಎಂದು ಕುಲಪತಿಗಳಿಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಸೂಚಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕವಾಗಿ ಅನುಷ್ಠಾನಗೊಳ್ಳುತ್ತಿರುವ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮದ ಸಂಶೋಧನಾ ಕೇಂದ್ರ ಕಟ್ಟಡ ಕಾಮಗಾರಿಗಳನ್ನು ಶನಿವಾರ ವೀಕ್ಷಿಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಬೆಳಪುವಿನಲ್ಲಿ ನಿರ್ಮಾಣಗೊಂಡಿರುವ ಮಂಗಳೂರು ವಿಶ್ವವಿದ್ಯಾನಿಯದ ಕಟ್ಟಡದಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಪ್ರಾರಂಭಿಸಿ ಅದರೊಂದಿಗೆ ಗಾಂಧಿ ಸಂಶೋಧನಾ ಕೇಂದ್ರ ಜೋಡಣೆ ಮಾಡಿಕೊಂಡು ಅಡ್ವಾನ್ಸ್ ರಿಸರ್ಚ್ ಸೆಂಟರ್ ಸಮಾನಾಂತರವಾಗಿ ಮಾಡಲು ಎಲ್ಲ ಸೌಲಭ್ಯಗಳು ಇವೆ. ಈ ಬಗ್ಗೆ ಪ್ರಯತ್ನ ನಡೆಸಲಾಗುವುದು. ಸಂಶೋಧನೆ ಆಗಬೇಕಾದರೆ ಬಂಡವಾಳ ಬೇಕು. ಸಂಶೋಧನಾ ಕೇಂದ್ರ ಹೆಸರು ಮಾತ್ರ ಇದ್ದರೆ ಆಗದು. ಈ ನಿಟ್ಟಿನಲ್ಲಿ ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸಬೇಕಾಗಿದೆ.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಬೆಳಪು ಕೇಂದ್ರವನ್ನು ಗಾಂಧಿ ಸಯನ್ಸ್ ರೀಸರ್ಚ್ ಸೆಂಟರ್ ಆಗಿ ಪರಿವರ್ತಿಸಬೇಕು. ಉಳಿದ ಕಾಮಗಾರಿಗೆ ತಕ್ಷಣ ಅನುದಾನ ಬಿಡುಗಡೆಗೊಳಿಸಬೇಕು. ಗಾಂಧಿ ಅಧ್ಯಯನ ಕೇಂದ್ರವನ್ನಾಗಿಸಲು ವಿನಯಕುಮಾರ್ ಸೊರಕೆ ನೀಡಿದ ಸಲಹೆಯನ್ನು ಪರಿಗಣಿಸಿ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸುಧಾಕರ್ ಹೇಳಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮಂಗಳೂರು ವಿವಿ ಉಪಕುಲಪತಿ ಪ್ರೊ. ಪಿ.ಎಲ್.ಧರ್ಮ ಅಭಿಪ್ರಾಯ ಮಂಡಿಸಿದರು.
ರಾಜ್ಯ ಗೃಹ ಮಂಡಳಿಯ ಎಇಇ ಸಹನಾ, ಬೆಳಪು ಸ್ನಾತಕೋತ್ತರ ಕೇಂದ್ರದ ೮ ಬ್ಲಾಕ್ಗಳಲ್ಲಿ ನಿರ್ವಹಿಸಲಾದ ಕಾಮಗಾರಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ಶೇ.೮೨ರಷ್ಟು ಕಾಮಗಾರಿಗಳು ಮುಕ್ತಾಯಗೊಂಡಿದೆ. ಅನುದಾನ ಬಿಡುಗಡೆಯಾದರೆ ಉಳಿದ ಕಾಮಗಾರಿಗಳನ್ನು ತಕ್ಷಣ ನಡೆಸಲಾಗುವುದು ಎಂದರು.
ಮಂಗಳೂರು ವಿವಿ ರಿಜಿಸ್ಟಾರ್ ರಾಜು ಮೊಗವೀರ ಯೋಜನೆಯ ವಿವರ ನೀಡಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಮ್. ಎ. ಗಫೂರ್, ಕಾಪು ಪ್ರಭಾರ ತಹಸೀಲ್ದಾರ್ ಪ್ರದೀಪ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.

