ಶಾಂಭವಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ
ಕಂಬಳ ಸಂಘಟಕ ವಾಮಂಜೂರು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ ಆಳ್ವ ಮೃತ ಯುವಕ
(Padubidri) ಪಡುಬಿದ್ರಿ : ಔತಣ ಕೂಟಕ್ಕೆಂದು ತೆರಳಿದ ಯುವಕ ಮನೆಗೆ ಬಾರದೆ ಮುಲ್ಕಿ ಬ್ರಿಡ್ಜ್ ಬಳಿ ಕಾರು ನಿಲ್ಲಿಸಿ ಕಾಣೆಯಾದ ವ್ಯಕ್ತಿಯ ಮೃತ ದೇಹ ಪಡುಬಿದ್ರಿ ಠಾಣಾ ವ್ಯಾಪ್ತಿಯ ಶಾಂಭವಿ ನದಿಯಲ್ಲಿ ಪತ್ತೆಯಾಗಿದೆ.
ಕಾಣೆಯಾದ ವ್ಯಕ್ತಿ ಉದ್ಯಮಿ, ಕಂಬಳ ಸಂಘಟಕ ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ (25) ಎಂದು ತಿಳಿದು ಬಂದಿದೆ.
ನ.5 ರಂದು ರಾತ್ರಿ 9 ಗಂಟೆಯ ಸುಮಾರಿಗೆ ತನ್ನ ಸ್ನೇಹಿತರುಗಳೊಂದಿಗೆ ತಿರುವೈಲ್ ಸಮೀಪದ ಮನೆಯೊಂದರಲ್ಲಿ ಔತಣಕೂಟ ಮುಗಿಸಿ ನ.6ರಂದು 2 ಗಂಟೆಯ ಸುಮಾರಿಗೆ ಕಾರಿನಲ್ಲಿ ಮನೆಗೆ ಹೋಗುವುದಾಗಿ ತಿಳಿಸಿ, ಹೊರಟವರು ವಾಪಾಸ್ಸು ಮನೆಗೆ ಬಾರದೇ ಇದ್ದು, ದೂರವಾಣಿ ಕರೆಮಾಡಿ ಸಂಪರ್ಕಿಸಿದಾಗ ಯಾವುದೇ ಮಾಹಿತಿ ದೊರಕಲಿಲ್ಲ.
ನಂತರ ಅಭೀಷೇಕನ ಸ್ನೇಹಿತರುಗಳಿಗೆ ಹೆಜಮಾಡಿ ಗ್ರಾಮದ ಮುಲ್ಕಿ ಬ್ರಿಡ್ಜ್ ಬಳಿ ರಾ.ಹೆ 66 ಮಂಗಳೂರು-ಉಡುಪಿ ರಸ್ತೆಯ ಎಡಬದಿಯಲ್ಲಿ ಅಭಿಷೇಕ ಆಳ್ವನ ಕಾರು ಕಂಡು ಬಂದಿದೆ. ಆತನ ಅಣ್ಣ ಮತ್ತು ಸ್ನೇಹಿತರೆಲ್ಲ ಸೇರಿ ಹೆಜಮಾಡಿ, ಮುಲ್ಕಿ ಕಡೆಗಳಲ್ಲಿ ಹುಡಕಿದರೂ ಎಲ್ಲಿಯೂ ಅಭಿಷೇಕ ಪತ್ತೆಯಾಗಿರಲಿಲ್ಲ.
ಈ ಬಗ್ಗೆ ಅಭಿಷೇಕ ಆಳ್ವ ಅವರ ಅಣ್ಣ ಅಭಯ ಆಳ್ವ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ಶುಕ್ರವಾರ ಶಾಂಭವಿ ನದಿ ಕಿನಾರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಕಂಬಳ ಪ್ರೇಮಿಯಾಗಿದ್ದ ಅಭಿಷೇಕ್ ಆಳ್ವರವರು ತಂದೆಯ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು.

