ಪಾದೂರು ಯೋಜನಾ ಹೋರಾಟ : ಕಾಂಗ್ರೇಸ್ ಕೃಪಾಪೋಷಿತ ರಾಜಕೀಯ ದೊಂಬರಾಟ: ಲೇವಡಿ
ಮಜೂರು ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಮಾಜಿ ಸದಸ್ಯರಿಂದ ಪತ್ರಿಕಾಗೋಷ್ಠಿ
(Kaup) ಕಾಪು: ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಗ್ರಾಮದಲ್ಲಿನ ಕಚ್ಚಾತೈಲ ಸಂಗ್ರಹಣಾ ಘಟಕ ಪಾದೂರು ಐಎಸ್ಪಿಆರ್ಎಲ್ 2 ನೇ ಹಂತದ ಯೋಜನೆಯ ಗುತ್ತಿಗೆದಾರರಾದ ಖಾಸಗಿ ಕಂಪೆನಿ ವಿರುದ್ಧ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಪಾದೂರು ಉಳಿಸಿ-ಪರಿಸರ ರಕ್ಷಿಸಿ ಹೋರಾಟ ಕಾಂಗ್ರೇಸ್ ಕೃಪಾಪೋಷಿತ ಸಂಪೂರ್ಣ ರಾಜಕೀಯ ಆಧಾರಿತ ದೊಂಬರಾಟ ನಡೆದಿದೆ ಎಂದು ಮಜೂರು ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಮಾಜಿ ಸದಸ್ಯರು ಕಾಪು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂದೀಪ್, 2ನೇ ಹಂತದ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಗೊಡಿದೆ. ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಹಾಗೂ ಈಗಿನ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಹೋರಾಟ ನಡೆಸಿ ಭೂ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಆ ಸಂದರ್ಭದಲ್ಲಿ ಧ್ವನಿ ಎತ್ತದ ನಕಲಿ ಹೋರಾಟಗಾರರು ಎಲ್ಲಿದ್ದರು ಎಂದು ಅವರು ಪ್ರಶ್ನಿಸಿದರು.
ಅಧಿಕಾರದ ಆಸೆಯಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಎಲ್ಲಾ ಅಭಿವೃದ್ದಿಗೆ ಅಡ್ಡಗಾಲು ಹಾಕುವ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ನೇತೃತ್ವದ ಕಾಂಗ್ರೆಸ್ನ ನಕಲಿ ಹೋರಾಟ ಬೀದಿ ನಾಟಕ ಎಂದು ಕಟಕಿಯಾಡಿದ್ದಾರೆ.
ಕ್ರಶರ್ ಪರವಾನಿಗೆ ನೀಡಲು ಜಿಲ್ಲಾಧಿಕಾರಿ ಹಾಗೂ ಗಣಿ ಭೂ ವಿಜ್ಞಾನ ಇಲಾಖೆಗೆ ಸೊರಕೆಯವರು ಒತ್ತಡ ಹೇರುತ್ತಿದ್ದಾರೆ ಎಂದೂ ಅವರು ಆರೋಪಿಸಿದರು.
ನಕಲಿ ಹೋರಾಟ: ಪಾದೂರು ಉಳಿಸಿ – ಪರಿಸರ ರಕ್ಷಿಸಿ ಸಮಿತಿಯ ಸ್ವಯಂ ಘೋಷಿತ ಅಧ್ಯಕ್ಷರು ೨ನೇ ಹಂತದ ಯೋಜನೆಯ ಭೂ ವ್ಯವಹಾರ ಹಾಗೂ ಸಮಿತಿಯ ಕಾರ್ಯದರ್ಶಿ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು ಕಂಪೆನಿಯಲ್ಲಿ ಗುತ್ತಿಗೆ ಪಡೆಯಲು ಪ್ರಯತ್ನಿಸಿದ್ದಾರೆ. ಇವರಿಬ್ಬರೂ ಪಾದೂರು ಗ್ರಾಮಸ್ಥರಲ್ಲ. ಆದರೂ ನಕಲಿ ಹೋರಾಟ ಸಮಿತಿ ರಚಿಸಿದ್ದಾರೆ ಎಂದು ಆರೋಪಿಸಿದರು.
ಸಾಬೀತುಪಡಿಸಿ ಇಲ್ಲವೇ ಪ್ರಮಾಣ ಮಾಡಿ: ಕಾಪು ಶಾಸಕರು ಹಾಗೂ ಶಾಸಕರ ಪುತ್ರನ ವಿರುದ್ಧ ಕಲ್ಲಿನ ವ್ಯವಹಾರ ಮಾಡುತ್ತಿದ್ದಾರೆ ಎಂಬ ಸುಳ್ಳು ಆಪಾದನೆ ಮಾಡಿರುವ ಬೈರಂಪಳ್ಳಿ ಸಂತೋಷ ಹಾಗೂ ಮಾಜಿ ಶಾಸಕರಾದ ಸೊರಕೆಯವರು 24 ಗಂಟೆಯೊಳಗೆ ದಾಖಲೆಗಳೊಂದಿಗೆ ಆರೋಪ ಸಾಬಿತು ಮಾಡಬೇಕು. ಇಲ್ಲವಾದಲ್ಲಿ ಕಾಪು ಮಾರಿಯಮ್ಮನ ಸನ್ನಿಧಾನದಲ್ಲಿ ಅಥವಾ ಅವರು ನಂಬುವ ಯಾವುದೇ ದೇವಸ್ಥಾನಕ್ಕೆ ಬಂದು ಆರೋಪ ಹೌದು ಎಂದು ಪ್ರಮಾಣ ಮಾಡಬೇಕು. ಶಾಸಕರನ್ನು ಕರೆತರುವ ಜವಾಬ್ದಾರಿ ನಮ್ಮದು ಎಂದು ಅವರು ಒತ್ತಾಯಿಸಿದರು.
ಎರಡು ದಶಕಗಳ ಹೋರಾಟ: ಪಾದೂರು ಗ್ರಾಮದ ಹೋರಾಟ ಇಂದು ನಿನ್ನೆಯದಲ್ಲ. 2 ದಶಕದ ಹೋರಾಟ. ೧ನೇ ಹಂತದ ಯೋಜನೆಯ ಸುರೇಶ್ ಶೆಟ್ಟಿಯವರ ನೇತೃತ್ವದಲ್ಲಿ ಹಾಗೂ ಗೌರವ ಅಧ್ಯಕ್ಷತೆಯಲ್ಲಿ ಪಾದೂರು ಕಳತ್ತೂರು ಜನಜಾಗೃತಿ ಸಮಿತಿ ಆ ಸಮಯದಲ್ಲಿ ರಾಜಕೀಯದಲ್ಲಿ ಇಲ್ಲದೇ ಇದ್ದರೂ ಊರಿನ ಮೇಲಿನ ಅಭಿಮಾನಕ್ಕೆ ಸಮಿತಿ ರಚನೆ ಮಾಡಿ ಲಕ್ಷಾಂತರ ರೂ.ಗಳನ್ನು ತನ್ನ ಕೈಯಿಂದ ವ್ಯಯಿಸಿ ನಿರಂತರ ಹೋರಾಟ ನಡೆಸಿ ನ್ಯಾಯ ಒದಗಿಸುವಲ್ಲಿ ಶ್ರಮಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರು ೮ ವರ್ಷಗಳ ನಿರಂತರ ಹೋರಾಟ ನಡೆಸಿ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ ಸುಮಾರು ೩ ಕೋಟಿಯಷ್ಟು ತೆರಿಗೆ ಹಣ ವಸೂಲಿ ಮಾಡಿ ಪಾದೂರು ಅಭಿವೃದ್ಧಿಗೆ ವಿನಿಯೋಗಿಸಿರುತ್ತೇವೆ ಎಂದರು.
ಮಜೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರುಗಳಾದ ಪ್ರಸಾದ್ ಶೆಟ್ಟಿ ವಳದೂರು, ಶರ್ಮಿಳಾ ಜೆ ಆಚಾರ್ಯ, ಮಾಜಿ ಉಪಾಧ್ಯಕ್ಷರುಗಳಾದ ಮಧುಸೂಧನ್ ಸಾಲ್ಯಾನ್, ಮಂಜುಳಾ ಆಚಾರ್ಯ, ಸಹನಾ ತಂತ್ರಿ ಹಾಗೂ ಮಾಜಿ ಸದಸ್ಯೆ ವನಿತಾ ಉಪಸ್ಥಿತರಿದ್ದರು.

