ಏ. 4 : ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ 75 ರ ಅಮೃತ ಮಹೋತ್ಸವ
ಪರಮ ಪೂಜ್ಯ ಶ್ರೀ ಶ್ರೀ ವಿಭುಧೇಶ ತೀರ್ಥ ಶ್ರೀಪಾದರು ಕಟ್ಟಿದ ಚೊಚ್ಚಲ ಸಂಸ್ಥೆ
(Adamaru) ಅದಮಾರು : ಪರಮ ಪೂಜ್ಯ ಶ್ರೀ ಶ್ರೀ ವಿಭುಧೇಶ ತೀರ್ಥ ಶ್ರೀಪಾದರು ಕಟ್ಟಿದ ಚೊಚ್ಚಲ ಸಂಸ್ಥೆ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ.
ಶಿಲೆ ಕಲ್ಲಿನ ಅಪರೂಪದ ಕಲ್ಲಿನ ಕಮಾನು ಇರುವ ವಿಶೇಷ ಶಾಲೆ ಇದು. 1950 ರಲ್ಲಿ ಶಿಲೆಕಲ್ಲಿನಿಂದಲೇ ಕಟ್ಟಿದ ಕಟ್ಟಡ ಇರುವ ಈ ಶಾಲೆಯು 75 ವಸಂತಗಳನ್ನು ಕಂಡರೂ ಹಾಗೆಯೇ ಇದೆ. ಇದು ಪೂಜ್ಯ ವಿಭುಧೇಶ ಶ್ರೀಗಳ ದೂರದೃಷ್ಟಿಗೆ ಜ್ವಲಂತ ಸಾಕ್ಷಿ. ಹಳ್ಳಿಯ ಜನರಿಗೆ ಡೆಲ್ಲಿಯ ಸವಲತ್ತನ್ನು ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿದ ಕೀರ್ತಿ ಶ್ರೀಪಾದರದ್ದಾಗಿದೆ.
ಮಧ್ವಾಚಾರ್ಯರ ಪೂರ್ಣಪ್ರಜ್ಞ ಎಂಬ ವಿಶಿಷ್ಟ ಹೆಸರು ಈ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ. ಇಂದು ಈ ಅದಮಾರು ಪೂರ್ಣಪ್ರಜ್ಞ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದ ಲಕ್ಷಾಂತರ ಹಳೆ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದು ಸುಂದರ ಬದುಕನ್ನು ಸಾಗಿಸುತ್ತಿದ್ದಾರೆ. ಪ್ರಜ್ಞಾವಂತ ನಾಗರಿಕರ ನಿರ್ಮಾಣ ಮಾಡುವ, ಸುಜ್ಞಾನಿಗಳನ್ನು ಬೆಳೆಸುವ ಈ ಸಂಸ್ಥೆಗೆ ಹಳೆ ವಿದ್ಯಾರ್ಥಿಗಳೇ ದೊಡ್ಡ ಆಧಾರ ಸ್ತಂಭ.
ಅದಮಾರಿಂದ ಪ್ರಾರಂಭವಾದ ಸ್ವಾಮೀಜಿಯವರ ಶಿಕ್ಷಣ ಕ್ರಾಂತಿ ರಾಜಧಾನಿ ಡೆಲ್ಲಿಯ ತನಕ ಮುಂದುವರಿಯಿತು. ವಿಜ್ಞಾನ ಮತ್ತು ಇಂಗ್ಲಿಷ್ ಗೆ ವಿಶೇಷ ಒತ್ತು ಕೊಡುತ್ತಿದ್ದ ಪೂಜ್ಯ ವಿಬುಧೇಶ ಶ್ರೀಗಳು ಪೂರ್ಣಪ್ರಜ್ಞದ ಹಳೆವಿದ್ಯಾರ್ಥಿ ಒಬ್ಬನಾದರೂ ನೊಬೆಲ್ ಪ್ರಶಸ್ತಿಗೆ ಭಾಜನರಾಗಬೇಕು ಎಂಬ ಮಹಾನ್ ಕನಸು ಕಂಡವರು. ತದನಂತರದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾಗೂ ಪ್ರಸ್ತುತ ಅಧ್ಯಕ್ಷರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಪೂರ್ಣಪ್ರಜ್ಞ ಸಂಸ್ಥೆಗಳನ್ನು ಶಿಕ್ಷಣದ ಹೆಮ್ಮರವಾಗಿ ಬೆಳೆಸಿದ್ದಾರೆ. ಈಗ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಒಟ್ಟು 50ರ ಗಡಿ ದಾಟಿದೆ.
ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳು ಕೂಡ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯದೊಂದಿಗೆ ಕೆಜಿ ಯಿಂದ ಪಿಯುಸಿ ತನಕ 1500ಕ್ಕೂ ಮಿಕ್ಕಿ ಮಕ್ಕಳಿಗೆ ಸುಜ್ಞಾನ ಬಿತ್ತುವ ಜ್ಞಾನ ಕಾಶಿಯಾಗಿ ಮಾರ್ಪಟ್ಟಿದೆ. ಸುಂದರ ಪರಿಸರದ ಈ ವಿಶಿಷ್ಟ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯನ್ನು ಕಣ್ತುಂಬಿಕೊಳ್ಳುವ ಸದವಕಾಶ ಈಗ ಮತ್ತೆ ಸಿಕ್ಕಿದೆ.
ಅಮೃತ ಮಹೋತ್ಸವ ಕಾರ್ಯಕ್ರಮ
ಏಪ್ರಿಲ್ 4ರ ಶನಿವಾರ ಒಂದು ದಿನದ ವಿಜೃಂಭಣೆಯ ಅಮೃತ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಅದಮಾರು ವಿದ್ಯಾ ಸಂಸ್ಥೆಯಲ್ಲಿ ಜರಗಲಿದೆ. ಹಿಂದಿನ ಅದಮಾರಿಗೂ ಇಂದಿನ ಅದಮಾರಿಗೂ ಇರುವ ವ್ಯತ್ಯಾಸ, ಹಳೆ ಬೇರು ಹೊಸ ಚಿಗುರು ಸೇರಿರಲು ಮರಸೊಬಗು ಎಂಬಂತೆ ಹಳೆ ವಿದ್ಯಾರ್ಥಿಗಳು ಪ್ರಸಕ್ತ ವಿದ್ಯಾರ್ಥಿಗಳು ಊರ ಪರವೂರ ಮಹನೀಯರು ಸಂಸ್ಥೆಯ ನಿವೃತ್ತ ಹಾಗೂ ಪ್ರಸಕ್ತ ಶಿಕ್ಷಕರು ಒಟ್ಟಾಗಿ ಈ ವಿಜೃಂಭಣೆಯ ಅಮೃತ ಮಹೋತ್ಸವ ಕಾರ್ಯಕ್ರಮ ನೋಡಬೇಕೆಂಬುದು ನಮ್ಮೆಲ್ಲರ ಆಸೆ.
ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವದ ಪ್ರಯುಕ್ತ ಸುಜ್ಞಾನ ಮಂದಿರ ಎಂಬ ನೂತನ ಕಟ್ಟಡವನ್ನು ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಲೋಕಾರ್ಪಣೆ ಮಾಡಲಿದ್ದಾರೆ ಪ್ರಜ್ಞಾಮೃತ ಪ್ರದರ್ಶನಿಯನ್ನು ಪರಮ ಪೂಜ್ಯ ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ.
ಖ್ಯಾತ ಆಕಾಶ ಕ್ಷಿಪಣಿಯ ಪ್ರವರ್ತಕರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅತಿ ವಿಶಿಷ್ಟ ವಿಜ್ಞಾನಿ ಡಾ. ಪ್ರಹ್ಲಾದ ರಾಮರಾವ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಜೆ ಎಮ್ ತಾರಾಲಯದ ಡಾ. ಗುರುಪ್ರಸಾದ್, ಸಂಶೋಧಕರಾದ ವಿನಾಯಕ ಪತ್ತಾರ್, ಉಡುಪಿ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಹಾಗೂ ಶಾಸಕರಾದ ಗುರ್ಮೆ ಶ್ರೀ ಸುರೇಶ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.
ಅದಮಾರು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ರೂಪಿಸಲ್ಪಟ್ಟ ಪ್ರಜ್ಞಾಮೃತ ಪ್ರದರ್ಶನಿ ವಸ್ತು ಪ್ರದರ್ಶನ ಏಪ್ರಿಲ್ 4, 5ಹಾಗೂ 6 ರ ತನಕ ಸಾರ್ವಜನಿಕರಿಗೆ ನೋಡಲು ಅವಕಾಶವಿದೆ.
ಭಾರತದ ಖ್ಯಾತ ಬಾಹ್ಯಾಕಾಶ ಸಂಸ್ಥೆ ಇಸ್ರೋ ದಿಂದ ವಿಶೇಷ ಬಸ್ಸು “space on Wheels” ಅದಮಾರಿಗೆ ಬರಲಿದೆ. ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯದ ಅನೇಕ ಖಗೋಳ ಶಾಸ್ತ್ರಕ್ಕೆ ಸಂಬಂಧಪಟ್ಟ ವಿಜ್ಞಾನ ವಸ್ತು ಪ್ರದರ್ಶನಗಳು ಇಲ್ಲಿ ನೋಡಲು ಸಿಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಸಾಭಿವ್ಯಂಜನ, ಕೃಷ್ಣಂ ವಂದೇ ಜಗದ್ಗುರುಂ ನೃತ್ಯ ರೂಪಕ, ರಾಜ್ಯ ಪ್ರಶಸ್ತಿ ವಿಜೇತ ತುಳು ನಾಟಕ ಪರಮಾತ್ಮೆ ಪಂಜುರ್ಲಿ ಮೂಡಿ ಬರಲಿದೆ. ಬೆಳಿಗ್ಗೆ 9.30 ರಿಂದ ರಾತ್ರಿ 10 ಗಂಟೆಯ ತನಕ ಕಾರ್ಯಕ್ರಮ ಜರಗಲಿದೆ.
1950ರಿಂದ ತೊಡಗಿ ಇಲ್ಲಿಯ ತನಕದ ಸಂಸ್ಥೆಯ ಹಳೆವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕೆಲಸ ಮಾಡಲಾಗಿದೆ. ಯಾರಾದರೂ ಬಿಟ್ಟು ಹೋಗಿದ್ದರೆ ಇದನ್ನೇ ಆಮಂತ್ರಣವೆಂದು ತಿಳಿದು ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಕಾರ್ಯಕ್ರಮದ ಸಂಘಟಕರು ಮನವಿ ಮಾಡಿದ್ದಾರೆ.

