ಕಾರ್ಕಳ : ಸಮಾನ ಮನಸ್ಕ ಮಹಿಳಾ ಸಂಘಟನೆಗಳಿಂದ ಮಹಿಳಾ ದಿನಾಚರಣೆ
ಕಾರ್ಯಕ್ರಮ ಉದ್ಘಾಟಿಸಿದ ಸುಗಮ್ಯ ಜಿಲ್ಲಾ ಕೋಶಾಧಿಕಾರಿ ಹಿಲ್ಡಾ ಫೆರ್ನಾಂಡಿಸ್
(Karkala)ಕಾರ್ಕಳ : ಕಾರ್ಕಳ ತಾಲೂಕು ಸಮಾನ ಮನಸ್ಕ ಮಹಿಳಾ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರ್ಕಳ ಜಾಮಿಯ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಯಿತು.
ಜಮಾಅತೆ ಇಸ್ಲಾಮೀ ಹಿಂದ್, ಸುಗಮ್ಯ, ಲಯನ್ಸ್, ಇಂಚರ, ಕೊರಗ, ಸಂಪದ ಮತ್ತು ಜೈನ ಮಹಿಳಾ ಸಂಘಟನೆಗಳ ಒಕ್ಕೂಟದ ಸಂಗಾತಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಗಮ್ಯ ಜಿಲ್ಲಾ ಒಕ್ಕೂಟದ ಕೋಶಾಧಿಕಾರಿ ಹಿಲ್ಡಾ ಫೆರ್ನಾಂಡಿಸ್ ಸಂವಿಧಾನ ಪೀಠಿಕೆಯನ್ನು ಓದಿಸಿದರು.
ಇಂಚರ ತಾಲೂಕು ಒಕ್ಕೂಟದ ಸದಸ್ಯೆಯರು ಪ್ರಾರ್ಥನಾ ಗೀತೆ ಹಾಡಿದರು.
ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಹುಮೈರಾ ರವರು “ನೆರೆಕರೆಯ ಹಕ್ಕುಗಳು” ಎಂಬ ವಿಷಯ ಮಂಡಿಸಿದರು.
ಜನಸೇವೆಯಲ್ಲಿ ತೊಡಗಿರುವ ಆರು ಸಮುದಾಯದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕ್ರೈಸ್ತ ಸಮುದಾಯದಿಂದ ಲಿಡಿಯಾ ಫೆರ್ನಾಂಡಿಸ್, ಮುಸ್ಲಿಮ್ ಸಮುದಾಯದಿಂದ ಶಂಷಾದ್, ಬಿಲ್ಲವ ಸಮುದಾಯದಿಂದ ಶ್ರೀಮತಿ ಲೀಲಾ ಎನ್ ಪೂಜಾರಿ, ಕೊರಗ ಸಮುದಾಯದಿಂದ ಕುಮಾರಿ ಅನಿತಾ, ಜೈನ ಸಮುದಾಯದಿಂದ ಶ್ರೀಮತಿ ಶರ್ಮಿಳಾ ಜೈನ್ ಹಾಗೂ ಲಯನ್ ಶ್ರೀಮತಿ ವಸಂತಿ ಪ್ರಥ್ವಿರಾಜ್ ರವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ವ್ಯಕ್ತಿ ಪರಿಚಯವನ್ನು ಡಾ. ಅಫ್ಸಾರುಲ್ ಹುದಾ, ಶ್ರೀಮತಿ ಮೀನಾ ಸಿಂಥಿಯ, ಶ್ರೀಮತಿ ವೀಣಾ ಹರೀಶ್, ಶ್ರೀಮತಿ ತುಳಸಿ ಪೂರ್ಣೇಶ್, ಕುಮಾರಿ ಶ್ರೇಯಾ, ಶ್ರೀಮತಿ ಸುನೀತಾ ಶೆಟ್ಟಿ ಯವರು ನೆರವೇರಿಸಿದರು.
ಮುಖ್ಯ ಅತಿಥಿ ಸಿ ಎಂ ಜೆ ಎಫ್ ಲಯನ್ ಸಪ್ನಾ ಸುರೇಶ್ ರವರು ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡಿದರು.
ಸಂಪದ ಉಡುಪಿಯ ನಿರ್ದೇಶಕ ಫಾದರ್ ರೆಜಿನಾಲ್ಡ್ ಪಿಂಟೊ ಮತ್ತು ಸಂಯೋಜಕರಾದ ಸ್ಟಾನ್ಲೀ ಫೆರ್ನಾಂಡಿಸ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಒಟ್ಟು 150 ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಮಾಅತೆ ಇಸ್ಲಾಮಿ ಹಿಂದ್ ಕಾರ್ಕಳದ ಕಾರ್ಯಕರ್ತೆ ಝಬೀನ್ ರವರು ಸ್ವಾಗತಿಸಿದರು. ಸಂಪದ ಉಡುಪಿಯ ಕಾರ್ಯಕರ್ತೆ ಐರಿನ್ ನೊರೋಹ್ನ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ವಿಶ್ವನಾಥ್ ಪಾಟ್ಕರ್ ವಂದಿಸಿದರು.

