ಕಾರ್ನಾಡು ಸಿ ಎಸ್ ಐ ಶಾಲೆ : ಪರಿಸರ ದಿನಾಚರಣೆ, ಗಿಡ ನೆಡುವ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ
ಕಾರ್ಯಕ್ರಮ ಉದ್ಘಾಟಿಸಿದ ಯುವ ನ್ಯಾಯವಾದಿ ಕು. ಸಮೀಕ್ಷಾ ಭಾಸ್ಕರ ಹೆಗ್ಡೆ
(Mulki) ಮುಲ್ಕಿ : ಲಯನ್ಸ್ ಕ್ಲಬ್ ಮುಲ್ಕಿ, ಸಿ.ಎಸ್.ಐ ಆಂಗ್ಲ ಮಾಧ್ಯಮ ಶಾಲೆ ಮತ್ತು ಅರಣ್ಯ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಪರಿಸರ ದಿನಾಚರಣೆ, ಗಿಡ ನೆಡುವ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರವು ಕಾರ್ನಾಡು ಸಿ.ಎಸ್.ಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮುಲ್ಕಿಯ ಯುವ ನ್ಯಾಯವಾದಿ ಕು. ಸಮೀಕ್ಷಾ ಭಾಸ್ಕರ ಹೆಗ್ಡೆಯವರು ಸಸಿಯನ್ನು ನೆಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಮಾತಾಡಿದ ಅವರು, ಪರಿಸರ ದಿನಾಚರಣೆ ಒಂದು ದಿನದ ಆಚರಣೆಯಾಗದೆ, ದಿನನಿತ್ಯ ಪರಿಸರದ ಕಾಳಜಿ ಆಗಬೇಕಿದೆ. ಪ್ರಕೃತಿಯನ್ನು ನಾವು ಉಳಿಸಿದರೆ ನಾವು ಉಳಿದಂತೆ. ಈಗಿನ ತಾಪಮಾನ ಏರಿಕೆ, ಹವಾಮಾನ ವೈಪರಿತ್ಯಕ್ಕೆ ಮನುಷ್ಯನ ಅತಿ ಅಸೆಯೇ ಕಾರಣವಾಗಿದೆ. ಕೈಗಾರಿಕೆಗಳ ಸಂಖ್ಯೆ ಜಾಸ್ತಿಯಾಗುವುದರಿಂದ ಪರಿಸರ ಮಾಲಿನ್ಯ ಉಂಟಾಗಿ ಹಲವಾರು ರೋಗಗಳು ಬರುವ ಸಾಧ್ಯತೆಯಿದೆ. ಗಿಡಗಳನ್ನು ನೆಡುವ ಮೂಲಕ ಆರೋಗ್ಯಪೂರ್ಣ ಪರಿಸರಕ್ಕಾಗಿ ನಾವು ಪ್ರಯತ್ನಿಸೋಣ ಎಂದರು
ಸನ್ಮಾನ : ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅನ್ವಿತಾ, ದಿಯಾ, ಪೂರ್ವಿ ಎಚ್ ಪೂಜಾರಿ, ಶ್ರಾವ್ಯರನ್ನು ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ರೋಶ್ನಿಯನ್ನು ಸನ್ಮಾನಿಸಲಾಯಿತು.
ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ.ಎಂ. ಮಾತನಾಡಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಸ್ವಚ್ಛತೆಗೆ ಆದ್ಯತೆ ನೀಡೋಣ. ದೇವರು ನೀಡಿದ ಸುಂದರ ಪ್ರಕೃತಿಯನ್ನು ಉಳಿಸಿ ಬೆಳೆಸುವ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರೆ. ವಿಲಿಯಮ್ ಕುಂದರ್ ವಹಿಸಿದ್ದರು.
ವೇದಿಕೆಯಲ್ಲಿ ಸದಾಶಿವ ಹೊಸದುರ್ಗ, ಪ್ರೊ. ಸ್ಯಾಮ್ ಮಾಬೆನ್, ಶಾಲಾ ಸಂಚಾಲಕರಾದ ರಂಜನ್ ಜತ್ತನ್ನ, ಮುಖ್ಯ ಶಿಕ್ಷಕಿ ಶಾಂತಿ ಸುಹಾಸಿನಿ ಉಪಸ್ಥಿತರಿದ್ದರು.
ತರಗತಿವಾರು ವಿದ್ಯಾರ್ಥಿಗಳಿಗೆ ಗಿಡ ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಶಾಂತಿ ಸುಹಾಸಿನಿ ಸ್ವಾಗತಿಸಿದರು. ಎಲಿಜಬೆತ್ ಪುಷ್ಪಲತಾ ಸನ್ಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕಿಯರಾದ ರೇಷ್ಮಾ ಮತ್ತು ಧನ್ಯ ಕಾರ್ಯಕ್ರಮ ನಿರ್ವಹಿಸಿದರು. ಆಶಾ ವಂದಿಸಿದರು.

