ಶಿರ್ವ ಸಹಕಾರಿ ಸಂಘದ ನಿಯೋಗದಿಂದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ
ನಬಾರ್ಡ್ ಸಂಸ್ಥೆಯು ಕೃಷಿಕರಿಗಾಗಿ ನೀಡುವ ಸಾಲದ ಮಿತಿ ನಿಗದಿ ಸಡಿಲಕ್ಕೆ ಸಂಸದರಿಗೆ ಮನವಿ
(Shirva) ಶಿರ್ವ: ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ ಯವರ ನೇತೃತ್ವದಲ್ಲಿ ಉಡುಪಿ – ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಯಿತು.
ಪ್ರಸಕ್ತ ಸಾಲಿನಲ್ಲಿ ನಬಾರ್ಡ್ ಸಂಸ್ಥೆಯು ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ MKCC ಸಾಲದ ಮಿತಿ ನಿಗದಿಪಡಿಸಲು ವಿಧಿಸಿದ ಷರತ್ತುಗಳ ಅನ್ವಯ ಈ ಹಿಂದಿನ ಮೊತ್ತದ ಸಾಲವನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಕಾರ್ಯವ್ಯಾಪ್ತಿಯ ಮಲ್ಲಿಗೆ ಕೃಷಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಈ ಹಿಂದಿನಂತೆಯೇ ಸಾಲ ವಿತರಿಸಲು ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವರಿಕೆ ಮಾಡುವಂತೆ ಸಂಸದ ಕೋಟ ಶ್ರೀನೀವಾಸ ಪೂಜಾರಿಯವರಲ್ಲಿ ವಿನಂತಿಸಲಾಯಿತು.
ನಿಯೋಗದಲ್ಲಿ ಸಂಘದ ಉಪಾಧ್ಯಕ್ಷ ವೀರೇಂದ್ರ ಪಾಟ್ಕರ್, ನಿರ್ದೇಶಕರಾದ ಉಮೇಶ್ ಆಚಾರ್ಯ ಮತ್ತು ಹರಿಣಾಕ್ಷ ಶೆಟ್ಟಿಯವರು ಉಪಸ್ಥಿತರಿದ್ದರು.

