ಕಟಪಾಡಿ : ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿ ಹಣ ನೀಡದೆ ಪರಾರಿಯಾದ ಕಾರು ಚಾಲಕ
ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ಸ್ ಕಾರಿನಲ್ಲಿ ಬಂದ ಮೂವರು ಯುವಕರು
(Kaup) ಕಾಪು : ಕಾರು ಚಾಲಕ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿಕೊಂಡು ಹಣ ನೀಡದೆ ಪರಾರಿಯಾದ ಘಟನೆ ಕಾಪು ತಾಲೂಕಿನ ಶಂಕರಪುರದ ಸುಭಾಷ್ ನಗರದಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ನಲ್ಲಿ ಘಟಿಸಿದೆ.
ಮೂವರು ಯುವಕರು ಸುಭಾಷ್ ನಗರದಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ಗೆ ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ಸ್ ಕಾರಿನಲ್ಲಿ ಆಗಮಿಸಿ, ಫುಲ್ ಟ್ಯಾಂಕ್ ಡೀಸೆಲ್ ತುಂಬಿಸುವಂತೆ ಸಿಬ್ಬಂದಿಗೆ ತಿಳಿಸಿದ್ದರು. ಬಂಕ್ ಸಿಬ್ಬಂದಿ ಒಟ್ಟು 4,711 ರೂ. ಮೌಲ್ಯದ ಡೀಸೆಲ್ ತುಂಬಿಸಿದ್ದಾರೆ. ಬಳಿಕ ಬಿಲ್ ಮಾಡುವಂತೆ ಹೇಳಿ, ಯಾವುದೇ ಹಣ ಪಾವತಿಸದೆ ಕಾರನ್ನು ಅತಿ ವೇಗದಲ್ಲಿ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.
ಕಾರಿನೊಳಗಿದ್ದ ಮೂವರು ಯುವಕರು ತುಳು ಭಾಷೆಯನ್ನು ಸರಾಗವಾಗಿ ಮಾತನಾಡುತ್ತಿದ್ದರು ಎಂದು ಸಿಬ್ಬಂದಿ ಮಾಹಿತಿ ನೀಡಿದ್ದರು.
ಯುವಕರು ಮದ್ಯಪಾನ ಮಾಡಿದ್ದಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಟಿಂಟ್ ಗ್ಲಾಸ್ ಅಳವಡಿಸಿದ್ದ ಕಾರಿನೊಳಗೆ ಮದ್ಯದ ಬಾಟಲಿ ಇದ್ದುದಾಗಿ ಸಿಬ್ಬಂದಿ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಕಾರಿನ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸದ ಕಾರಣ ವಾಹನದ ಗುರುತು ಪತ್ತೆ ಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಕುರಿತು ಪೆಟ್ರೋಲ್ ಬಂಕ್ ಸಿಬ್ಬಂದಿ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

