ಸಮುದ್ರದಲ್ಲಿ ಅರ್ಧ ಮುಳುಗಿದ್ದ ಗಿಲ್ ನೆಟ್ ಬೋಟು ಎರ್ಮಾಳು ಬಡಾದಲ್ಲಿ ಸುರಕ್ಷಿತ ದಡಕ್ಕೆ
ಮೀನುಗಾರಿಕೆ ಮಾಡುತ್ತಿದ್ದ 6 ಜನರನ್ನು ರಕ್ಷಿಸಿದ ಭಾರತೀಯ ಕರಾವಳಿ ಕಾವಲು ಪಡೆ
(Padubidri) ಪಡುಬಿದ್ರಿ: ಕಳೆದ ಸೋಮವಾರ ಮಲ್ಪೆ ಬಂದರಿನಿಂದ ಹೊರಟಿದ್ದ ಗಿಲ್ ನೆಟ್ ಮೀನುಗಾರಿಕಾ ದೋಣಿಯಲ್ಲಿ ಅಪಾಯದಲ್ಲಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಗಿಲ್ ನೆಟ್ ದೋಣಿಯು ಶುಕ್ರವಾರ ಸಂಜೆ ಎರ್ಮಾಳು ಬಡಾದಲ್ಲಿ ದಡ ಸೇರಿದೆ.
ಮಲ್ಪೆಯಲ್ಲಿ ಕಳೆದ ಸೋಮವಾರ ಬೆಳಿಗ್ಗೆ 9 ಗಂಟೆಗೆ ಗಿಲ್ ನೆಟ್ ದೋಣಿಯು ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿತ್ತು. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ದೋಣಿಯ ತಳಭಾಗದಿಂದ ನೀರು ಸೋರಿಕೆಯಾಗುತ್ತಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿತ್ತು. ನೀರನ್ನು ಹೊರಹಾಕುವ ಪ್ರಯತ್ನ ನಡೆಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಾರತೀಯ ಕರಾವಳಿ ಕಾವಲು ಪಡೆ ಸಹಾಯವಾಣಿಗೆ ಕರೆ ಮಾಡಿ ನೆರವು ಕೋರಲಾಯಿತು.
ಮಾಹಿತಿ ಪಡೆದ ತಕ್ಷಣ ಕೋಸ್ಟ್ ಗಾರ್ಡ್ ಹಡಗು ಸಂಜೆ ಸುಮಾರು 4 ಗಂಟೆಗೆ ಸ್ಥಳಕ್ಕೆ ಧಾವಿಸಿ, ಅಪಾಯದಲ್ಲಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿತು. ಅಪಘಾತಕ್ಕೊಳಗಾದ ಗಿಲ್ ನೆಟ್ ದೋಣಿಯನ್ನು ಎಳೆದುಕೊಂಡು ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದನ್ನು ಸಮುದ್ರದಲ್ಲೇ ಬಿಟ್ಟು ರಕ್ಷಣಾ ಕಾರ್ಯ ಪೂರ್ಣಗೊಳಿಸಲಾಗಿತ್ತು.
ಈ ಬೋಟ್ ಶುಕ್ರವಾರ ಮಧ್ಯಾಹ್ನದ ವೇಳೆ ಎರ್ಮಾಳು ಬಡಾ ಸಮುದ್ರ ತೀರದಲ್ಲಿ ದಡ ಸೇರಿದೆ.
ಹೆಜಮಾಡಿ ಪಿಎಸ್‌ಐ ಪುಷ್ಪಾ ಅವರ ಮಾರ್ಗದರ್ಶನದಲ್ಲಿ ಅಬ್ದುಲ್ ರಝಾಕ್, ಪುನೀತ್, ಕರಾವಳಿ ರಕ್ಷಣಾ ಬಳಗದ ತೀರ್ಥ, ರಾಜೇಶ್ ಹಾಗೂ ಇತರರ ಸಹಕಾರದಿಂದ ದೋಣಿಯನ್ನು ದಡಕ್ಕೆ ತರಲಾಯಿತು.

