ಬಸ್ ನಿಲ್ದಾಣದಲ್ಲಿ ಯುವತಿಯ ಬರ್ಬರ ಹತ್ಯೆ: ಹಂತಕನ ಗುರುತು ಪತ್ತೆ
ಬಂಟ್ವಾಳ ತಾಲೂಕು ಕಕ್ಕಪದವಿನ ಮೈರಾ ಮಹಮ್ಮಾಯಿ ನಿವಾಸಿ ಲಾವಣ್ಯ ಕೊಲೆಯಾದ ದುರ್ದೈವಿ
(Bantwala) ಬಂಟ್ವಾಳ: ಜನನಿಬಿಡ ಪ್ರದೇಶದಲ್ಲೇ ಯುವತಿಯೋರ್ವಳನ್ನು ದುಷ್ಕರ್ಮಿಯೋರ್ವ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಬಿ.ಸಿ. ರೋಡಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದಿದೆ.
ಹಾಡಹಗಲೇ ಎಲ್ಲರ ಕಣ್ಣೆದುರೇ ಯುವತಿಯನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಕೊಚ್ಚಿ ಹತ್ಯಗೈದ ಕೃತ್ಯ ನಾಗರೀಕ ಸಮಾಜವನ್ನು ತಲೆತಗ್ಗಿಸುವಂತೆ ಮತ್ತು ತೀವ್ರ ಆಘಾತವನ್ನುಂಟು ಮಾಡಿದೆ.
ಕೊಲೆಗೀಡಾದ ಯುವತಿಯನ್ನು ಬಂಟ್ವಾಳ ತಾಲೂಕು ಕಕ್ಕಪದವಿನ ಮೈರಾ ಮಹಮ್ಮಾಯಿ ನಿವಾಸಿ ಬಾಲಕೃಷ್ಣ ಗೌಡ ಅವರ ತೃತೀಯ ಪುತ್ರಿ ಲಾವಣ್ಯ ( 22) ಎಂದು ಗುರುತಿಸಲಾಗಿದೆ. ಇವರು ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್ ವೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಈಕೆ ಇಲ್ಲಿ ನಸ್೯ ಕೆಲಸ ಮಾಡುತ್ತಿದ್ದಾಳೆ.
ನಡೆದಿದ್ದೇನು?
ಲಾವಣ್ಯ ಅವರು ಕಕ್ಕಪದವು ಕಡೆಗೆ ತೆರಳಲೆಂದು ಸಂಜೆ ಬಿ.ಸಿ. ರೋಡಿನ ಕೆಎಸ್ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಬಂದು ಕುಳಿತಿದ್ದರು. ಈ ವೇಳೆ ತನ್ನ ಪಕ್ಕದಲ್ಲೇ ಕುಳಿತಿದ್ದ ಯುವಕನ ಬಗ್ಗೆ ಆತಂಕಗೊಂಡು, ತಕ್ಷಣವೇ ತಮ್ಮ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ, “ನನ್ನ ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ” ಎಂದು ಭಯದಿಂದಲೇ ತಿಳಿಸಿದ್ದರು.
ಆತಂಕಗೊಂಡ ಯುವತಿ ತಕ್ಷಣವೇ ಬಸ್‌ನಿಂದ ಕೆಳಗಿಳಿದಿದ್ದಾರೆ. ಆದರೆ, ಅವಳನ್ನೇ ಬೆನ್ನಟ್ಟಿಕೊಂಡು ಬಂದ ದುಷ್ಕರ್ಮಿ, ತಾನು ಬ್ಯಾಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಹರಿತವಾದ ಮಾರಕಾಸ್ತ್ರವನ್ನು ಹೊರಗೆಳೆದಿದ್ದಾನೆ. ಇದನ್ನು ಕಂಡು ದಿಕ್ಕೆಟ್ಟ ಯುವತಿ ಪ್ರಾಣಭಯದಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಎಲ್ಲರ ಸಮ್ಮುಖದಲ್ಲೇ ಹಿಂಬದಿಯಿಂದ ಆಕೆಯ ಮೇಲೆ ಮಾರಕ ದಾಳಿ ನಡೆಸಿದ್ದಾನೆ.
ಮಚ್ಚಿನೇಟಿಗೆ ನೆಲಕ್ಕುರುಳಿಬಿದ್ದಿದ್ದು, ಮತ್ತೆ ಆಕೆಯ ತಲೆಭಾಗಕ್ಕೆ ಕೊಚ್ಚಿದ್ದಾನೆ. ತೀವ್ರವಾಗಿ ಗಾಯಗೊಂಡ ಯುವತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಆರೋಪಿ ಕೃತ್ಯ ಎಸಗಿದ ತಕ್ಷಣ ಮಚ್ಚನ್ನು ಸ್ಥಳದಲ್ಲೆ ಎಸೆದು ಪರಾರಿಯಾಗಿದ್ದಾನೆ.
ಸ್ಥಳದಲ್ಲಿ ಆತಂಕದ ವಾತಾವರಣ:
ಜನರು ತುಂಬಿದ್ದ ಬಸ್ ನಿಲ್ದಾಣದಲ್ಲೇ ಇಂತಹ ಭೀಕರ ದುಷ್ಕೃತ್ಯ ನಡೆದಿದ್ದರಿಂದ ಕೆಲಕಾಲ ಸಾರ್ವಜನಿಕರಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ದಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿ ಯಶುಕುಮಾರ್, ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಆರೋಪಿಯ ಗುರುತು ಪತ್ತೆ:
ಪೊಲೀಸ್ ಅಧಿಕಾರಿಗಳು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕೃತ್ಯ ನಡೆಸಿದ ಹಂತಕನ ಗುರುತು ಪತ್ತೆ ಹಚ್ಚಿದ್ದು, ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ನಿವಾಸಿ ಚೇತನ್ ಎಂದು ಹೆಸರಿಸಲಾಗಿದೆ.
ಈತನು ಯುವತಿಯ ದೂರದ ಸಂಬಂಧಿ ಹಾಗೂ ಯುವತಿಯನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಹಂತಕ ಚೇತನ್ ಕೃತ್ಯದ ಬಳಿಕ ಪರಾರಿಯಾಗಿರುವ ದೃಶ್ಯವನ್ನು ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಂತಕ ಚೇತನ್ ಬಸ್ ನಿಲ್ದಾಣದ ಹೊರಭಾಗದಲ್ಲಿ ವಾಹನವನ್ನು ನಿಲುಗಡೆಗೊಳಿಸಿ ಆಕೆಯನ್ನು ಹಿಂಬಾಲಿಸಿ ಬಂದಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದು, ಕೃತ್ಯದ ನಂತರ ಅದೇ ವಾಹನದಲ್ಲಿ ಪರಾರಿಯಾಗಿರುವ ಗುಮಾನಿ ಇದೆ.
ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದಾರೆ.
ಮಾಜಿ ಸಚಿವ ಬಿ. ರಮಾನಾಥ ರೈ ಸಹಿತ ಹಲವಾರು ಪ್ರಮುಖರು ಆಸ್ಪತ್ರೆಗಾಗಮಿಸಿ ಕುಟುಬಸ್ಥರಿಗೆ ಸಾಂತ್ವನ ಹೇಳಿದರು. ಎಸ್ಪಿಯವರೊಂದಿಗೂ ಘಟನೆಯ ಕುರಿತು ಚರ್ಚಿಸಿ ,ಅರೋಪಿಯ ಬಂಧನಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.

