ಅಥಣಿ ತಾಲೂಕಿನ ಕೆನಾಲ್ ನೀರಿನ ಅವ್ಯವಸ್ಥೆ, ಅಧಿಕಾರಿಗಳ ನಿರ್ಲಕ್ಷ್ಯ
ಮಾಜಿ ಶಾಸಕ ಶಹಜಾನ್ ಆಕ್ರೋಶ, ರೈತರೊಂದಿಗೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ
(Athani) ಅಥಣಿ: ಅಥಣಿ ತಾಲೂಕಿನಲ್ಲಿ ಭೀಕರ ಬರಗಾಲ ಆವರಿಸಿದ್ದು, ಜನಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ತತ್ತರಿಸುವಂತಾಗಿದೆ. ಇಂತಹ ಸಂಕಷ್ಟದ ವೇಳೆಯಲ್ಲೂ ಕೆನಾಲ್ ನೀರಿನ ಸರಿಯಾದ ನಿರ್ವಹಣೆ ಮಾಡದೆ ನೀರು ಮತ್ತು ವಿದ್ಯುತ್ ಪೋಲು ಮಾಡುತ್ತಿರುವ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಮಾಜಿ ಶಾಸಕರಾದ ಶಹಜಾನ್ ಡೊಂಗರಗಾಂವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಅವರು, ಅಥಣಿ ತಾಲೂಕಿನಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಮುಂಗಾರು ಬೆಳೆ ಹಾನಿಯಾಗಿದ್ದರೂ, ಸರ್ಕಾರ ಇದುವರೆಗೂ ತಾಲೂಕಿನ ಪೂರ್ವ ಹಾಗೂ ಉತ್ತರ ಭಾಗವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸದಿರುವುದು ಅತ್ಯಂತ ವಿಷಾದಕರ ಸಂಗತಿ ಎಂದರು.
ತಮ್ಮ ಶಾಸಕಾವಧಿಯ ಕೆಲಸಗಳನ್ನು ಸ್ಮರಿಸಿದ ಅವರು, ನಾವು ಅಧಿಕಾರದಲ್ಲಿದ್ದಾಗ ಸತತ ಬರಗಾಲ ಬಿದ್ದಾಗಲೂ ಕುಡಿಯುವ ನೀರು, ಉದ್ಯೋಗ ಸೃಷ್ಟಿ ಹಾಗೂ ಧನಕರುಗಳಿಗೆ ಗೋಶಾಲೆಗಳನ್ನು ತೆರೆದು ಮೇವು ಪೂರೈಸಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೆವು. ಮಾಜಿ ಸಿಎಂ ಎಸ್.ಎಂ. ಕೃಷ್ಣ ಹಾಗೂ ಅಂದಿನ ನೀರಾವರಿ ಸಚಿವ ಎಚ್. ಕೆ. ಪಾಟೀಲ್ ಅವರ ಅವಧಿಯಲ್ಲಿ ಹಿಪ್ಪರಗಿ ಬ್ಯಾರೇಜ್ ಯೋಜನೆಯನ್ನು ಪೂರ್ಣಗೊಳಿಸಲಾಯಿತು. ಅಥಣಿಯ ಒಣಭೂಮಿ ಭಾಗಕ್ಕೆ ನೀರು ತಲುಪಿಸಲು ‘ಕರಿಮಸೂತಿ ಏತ ನೀರಾವರಿ ಯೋಜನೆ’ಯನ್ನು ಮಂಜೂರು ಮಾಡಿಸಿ, ಶೇ. 60ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿದ್ದೆವು” ಎಂದು ವಿವರಿಸಿದರು.
ನೀರು ಮತ್ತು ವಿದ್ಯುತ್ ಪೋಲು: ಸರ್ಕಾರ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ, ಹೆಚ್ಚಿನ ವಿದ್ಯುತ್ ಬಳಸಿ ಕೆನಾಲ್‌ಗೆ ನೀರು ಹರಿಸುತ್ತಿದ್ದರೂ, ಆ ನೀರು ಕಟ್ಟಕಡೆಯ ಗ್ರಾಮಗಳ ರೈತರಿಗೆ ತಲುಪುತ್ತಿಲ್ಲ.ಕೆನಾಲ್ ನೀರು ಹಳ್ಳಗಳಿಗೆ ಸೇರಿ, ಅಲ್ಲಿಂದ ಮತ್ತೆ ಪುನಃ ನದಿಗೆ ಹರಿದು ಹೋಗುತ್ತಿದೆ. ಇದರಿಂದ ನೂರಾರು ಕೋಟಿ ಮೌಲ್ಯದ ನೀರು ಮತ್ತು ವಿದ್ಯುತ್ ವ್ಯರ್ಥವಾಗುತ್ತಿದೆ.
ಐಗಳಿ, ಅರಟಾಳ್, ಬಾಡಗಿ, ಪಡತರವಾಡಿ ಸೇರಿದಂತೆ ಪೂರ್ವ ಭಾಗದ ಸಾಲು ಸಾಲು ಗ್ರಾಮಗಳು ಇಂದಿಗೂ ನೀರಿನಿಂದ ವಂಚಿತವಾಗಿವೆ.
ಪೂರ್ವ ಭಾಗದ ಕೆಲವು ಗ್ರಾಮಗಳನ್ನು ‘ಸಫರಿಂಗ್ ವಿಲೇಜ್‌ಗಳು’ (ನೀರು ಪೂರೈಸಲು ಕಷ್ಟಕರವಾದ ಪ್ರದೇಶಗಳು) ಎಂದು ನೆಪ ಹೇಳಿ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ.
ಉಪವಾಸ ಸತ್ಯಾಗ್ರಹದ ಎಚ್ಚರಿಕೆ:
ಈ ಎಲ್ಲಾ ಅವ್ಯವಸ್ಥೆಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ನೇರ ಕಾರಣ. ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ, ನೀರು ಪೋಲಾಗುವುದನ್ನು ತಡೆಯಬೇಕು. ಬೇಜವಾಬ್ದಾರಿ ತೋರಿದ ನೀರಾವರಿ ಇಲಾಖೆಯ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಒಂದು ವೇಳೆ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ತಾಲೂಕಿನ ಸಂಕಷ್ಟದಲ್ಲಿರುವ ರೈತರನ್ನು ಒಗೂಡಿಸಿಕೊಂಡು ಉಗ್ರ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಮಾಜಿ ಶಾಸಕರಾದ ಶಹಜಾನ್ ಡೊಂಗರಗಾಂವ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

