ಅಥಣಿ : ದೇಸಾಯಿ ಸರ್ಕಲ್ ದತ್ತ ಮಂದಿರ ಕಾಂಪ್ಲೆಕ್ಸ್ ಎದುರಿದೆ ಅಪಾಯಕಾರಿ ಚರಂಡಿ
ಪುರಸಭೆ, ತಹಶೀಲ್ದಾರರಿಗೆ ಮತ್ತೆ ಮನವಿ, ತಕ್ಷಣದ ಕ್ರಮಕ್ಕೆ ಆಗ್ರಹ
(Athani) ಅಥಣಿ : ಅಥಣಿ ಪಟ್ಟಣದ ಅತ್ಯಂತ ಜನನಿಬಿಡ ಪ್ರದೇಶವಾದ ದೇಸಾಯಿ ಸರ್ಕಲ್ ಎದುರಿಗಿರುವ ದತ್ತ ಮಂದಿರ ಕಾಂಪ್ಲೆಕ್ಸ್ ಮುಂಭಾಗದಲ್ಲಿರುವ ಬೃಹತ್ ಚರಂಡಿಯ ಮುಚ್ಚಳಿಕೆ ಸಂಪೂರ್ಣವಾಗಿ ಮುರಿದುಬಿದ್ದು ಬಲಿಪೀಠವಾಗಿ ಮಾರ್ಪಟ್ಟಿದ್ದರೂ, ಪುರಸಭೆ ಹಾಗೂ ತಾಲೂಕು ಆಡಳಿತ ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹೋರಾಟಗಾರ ಸಾಮಾಜಿಕ ಹಾಗೂ ಮಹೇಶ್ ಎಮ್ ಶರ್ಮಾ ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.), ರಾಜ್ಯ ಮಾಧ್ಯಮ ವಕ್ತಾರರು ಮಾತನಾಡಿ, ಈ ಅಪಾಯಕಾರಿ ಸ್ಥಿತಿಯ ಕುರಿತು ದಿನಾಂಕ 04.03.2023 ರಂದೇ ಪುರಸಭೆ ಕಾರ್ಯಾಲಯಕ್ಕೆ ಲಿಖಿತ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿತ್ತು. ಆದರೆ, ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಇಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ಅಥಣಿ ತಹಶೀಲ್ದಾರರಿಗೆ ಮತ್ತೊಮ್ಮೆ ಮನವಿ ಪತ್ರ ಸಲ್ಲಿಸಿ ತಕ್ಷಣ ಹೊಸ ಚರಂಡಿ ನಿರ್ಮಾಣ ಹಾಗೂ ದೃಢವಾದ ಮುಚ್ಚಳಿಕೆ ಅಳವಡಿಕೆಗೆ ಆಗ್ರಹಿಸಲಾಗಿದೆ.
ಕಾಂಪ್ಲೆಕ್ಸ್ ನಲ್ಲಿ ಜೆರಾಕ್ಸ್ ಅಂಗಡಿಗಳು, ಹೋಟೆಲ್, ಮೆಡಿಕಲ್ ಶಾಪ್ ಹಾಗೂ ಹಲವಾರು ವಾಣಿಜ್ಯ ಮಳಿಗೆಗಳಿದ್ದು, ದಿನನಿತ್ಯ ನೂರಾರು ಗ್ರಾಹಕರು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ.
ಮುರಿದುಬಿದ್ದ ಗಟರ್ ಮುಚ್ಚಳಿಕೆಯಿಂದಾಗಿ ಈಗಾಗಲೇ ಹಲವು ಹಿರಿಯ ನಾಗರಿಕರು ಮತ್ತು ಮಹಿಳೆಯರು ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಮಳೆ ಪ್ರಾರಂಭವಾಗಿರುವುದರಿಂದ ಚರಂಡಿಯ ಸಿಮೆಂಟ್ ಮುಚ್ಚಳಿಕೆ ಸಂಪೂರ್ಣವಾಗಿ ಹಸಿಯಾಗಿ, ಯಾವುದೇ ಕ್ಷಣದಲ್ಲಿ ಒಳಗಡೆ ಕುಸಿದುಬೀಳುವ ಅಪಾಯದಲ್ಲಿದೆ.
ಯಾವುದೇ ಅನಾಹುತ ಅಥವಾ ಜೀವಹಾನಿ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ತಹಶೀಲ್ದಾರರು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

