• Home  
  • ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಸಂಭ್ರಮದ ಮೋಂತಿಫೆಸ್ಟ್ ಆಚರಣೆ (Festive Montifest celebration at Shirva Arogya Mata Temple)
- fastival

ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಸಂಭ್ರಮದ ಮೋಂತಿಫೆಸ್ಟ್ ಆಚರಣೆ (Festive Montifest celebration at Shirva Arogya Mata Temple)

Share:  ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಸಂಭ್ರಮದ ಮೋಂತಿಫೆಸ್ಟ್ ಆಚರಣೆ  ಹೊಸ ಬೆಳೆಯ ಆಶೀರ್ವಾದ, ಹೂಗಳ ಅರ್ಪಣೆ ಹಾಗೂ ಕುಟುಂಬದ ಒಗ್ಗಟ್ಟಿನ ಹಬ್ಬ   (Shirva) ಶಿರ್ವ, ಸೆ. 8: ಕರಾವಳಿ ಕರ್ನಾಟಕದ ಕಥೋಲಿಕ್ ಸಮುದಾಯದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬವಾದ ಮೋಂತಿ ಫೆಸ್ತ್ ಅನ್ನು ಆರೋಗ್ಯ  ಮಾತಾ ದೇವಾಲಯದಲ್ಲಿ ಇಂದು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.   ಕನ್ಯಾ ಮರಿಯಮ್ಮನವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ ಮೋಂತಿ ಫೆಸ್ತ್, ಕರಾವಳಿ ಕಥೋಲಿಕ್ ಸಮುದಾಯದ ಧಾರ್ಮಿಕ ನಂಬಿಕೆಯೊಂದಿಗೆ […]

  (Shirva) ಶಿರ್ವ, ಸೆ. 8: ಕರಾವಳಿ ಕರ್ನಾಟಕದ ಕಥೋಲಿಕ್ ಸಮುದಾಯದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬವಾದ ಮೋಂತಿ ಫೆಸ್ತ್ ಅನ್ನು ಆರೋಗ್ಯ  ಮಾತಾ ದೇವಾಲಯದಲ್ಲಿ ಇಂದು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

  ಕನ್ಯಾ ಮರಿಯಮ್ಮನವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ ಮೋಂತಿ ಫೆಸ್ತ್, ಕರಾವಳಿ ಕಥೋಲಿಕ್ ಸಮುದಾಯದ ಧಾರ್ಮಿಕ ನಂಬಿಕೆಯೊಂದಿಗೆ ಕೃಷಿ ಪರಂಪರೆ, ಕುಟುಂಬದ ಒಗ್ಗಟ್ಟು ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಸೆದುಕೊಂಡಿರುವ ವಿಶಿಷ್ಟ ಹಬ್ಬವಾಗಿದೆ. ಹೊಸ ಬೆಳೆಯ ಹಬ್ಬ ‘ನೊವೆಂ’ಹಾಗೂ ಹೆಣ್ಣು ಮಗುವಿನ ದಿನ ಎಂಬ ವಿಶೇಷ ಮಹತ್ವವೂ ಈ ಆಚರಣೆಗೆ ಇದೆ.

   ಶಿರ್ವ ಸಾವುದು ಅಮ್ಮನವರ ಚರ್ಚ್‌ನಲ್ಲಿ ಸಂಭ್ರಮದ ಮೋಂತಿ ಫೆಸ್ತ್ ಅಂಗವಾಗಿ ಬೆಳಗ್ಗೆ 8 ಗಂಟೆಗೆ  ಪೂಜ್ಯ  ಹಿಲರಿ ರಂಗಮಂಟಪದಿಂದ ಭವ್ಯ ಮೆರವಣಿಗೆಯಲ್ಲಿ ಹೊಸ ತೆನೆಯನ್ನು ಆಶೀರ್ವದಿಸಿ, ಸಾಂಪ್ರದಾಯಿಕ ವಾದ್ಯದೊಂದಿಗೆ ಮಕ್ಕಳು ಹಾಗೂ ಭಕ್ತರು ಹೂಗಳನ್ನು ಹಿಡಿದು ಭಾಗವಹಿಸಿ, ಬಾಲ ಮರಿಯಮ್ಮನವರಿಗೆ ಭಕ್ತಿಪೂರ್ವಕವಾಗಿ ಹೂಗಳ ಅರ್ಪಣೆ ಸಲ್ಲಿಸಿದರು.

  ಕೊಂಕಣಿ ಭಕ್ತಿಗೀತೆಗಳು ಹಾಗೂ ಪ್ರಾರ್ಥನೆಗಳೊಂದಿಗೆ ನಡೆದ ಈ ಧಾರ್ಮಿಕ ಕಾರ್ಯಕ್ರಮವು ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

  ಮೆರವಣಿಗೆ ನಂತರ ಚರ್ಚಿನಲ್ಲಿ ವಿಶೇಷ  ಪವಿತ್ರ ಬಲಿ  ಪೂಜೆಯನ್ನು ಚರ್ಚಿನ ಪ್ರಧಾನ ಧರ್ಮ ಗುರುಗಳಾದ ಅತೀ ವಂದನೀಯ  ಚಾರ್ಲ್ಸ್ ಮಿನೇಜಸ್ ರವರು, ಸಹಾಯಕ ಧರ್ಮಗುರುಗಳಾದ  ವಂದನೀಯ ಅನಿಲ್  ರೋಡ್ರಿಗಸ್, ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲರಾದ  ವಂದನೀಯ  ರೋಲ್ವಿನ್  ಅರನ್ನ ರವರು  ಧಾರ್ಮಿಕ  ವಿಧಿವಿಧಾನಗಳು ಭಕ್ತಿಭಾವದಿಂದ ನಡೆಸಿದರು.

 ಹೊಸ ಬೆಳೆಗೆ ಆಶೀರ್ವಾದ

ಮೋಂತಿ ಫೆಸ್ತ್‌ನ ಪ್ರಮುಖ ಸಂಪ್ರದಾಯವಾದ ‘ನೊವೆಂ’ ಅಂಗವಾಗಿ ಹೊಸದಾಗಿ ಕೊಯ್ಲು ಮಾಡಿದ ಭತ್ತದ ತೆನೆಗಳನ್ನು ಹಾಗೂ ಮನೆಯಲ್ಲಿ ಬೆಳೆದ ಹೊಸ ತರಕಾರಿಗಳನ್ನು ಅರ್ಪಿಸಲಾಯಿತು. ಬಳಿಕ ಭಕ್ತರು ಈ ಆಶೀರ್ವದಿಸಿದ ಹೊಸ ಬೆಳೆಯನ್ನು ಮನೆಗೆ ಕೊಂಡೊಯ್ದು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳುವುದು ಸಂಪ್ರದಾಯವಾಗಿದೆ. ಹೊಸ ಬೆಳೆಯನ್ನು ಸಿಹಿ ತೆಂಗಿನ ಹಾಲಿನೊಂದಿಗೆ ಬೆರೆಸಿ ಸೇವಿಸುವ ಪದ್ಧತಿ ಪ್ರಕೃತಿ ಹಾಗೂ ರೈತರ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿದೆ. ಪ್ರಮುಖವಾಗಿ ಬಲಿ ಪೂಜೆಯ ನಂತರ ಹೊಸ ಆಶೀರ್ವದಿಸಿದ ತೆನೆಯನ್ನು ಪಾಯಸದಲ್ಲಿ ಬೆರೆಸಿ ಎಲ್ಲಾ ಬಂದ ಭಕ್ತಾದಿಗಳಿಗೆ ಪ್ರಸಾದ ರೀತಿಯಲ್ಲಿ ಹಂಚಲಾಯಿತು 9 ದಿನದ ನೋವೇನದಲ್ಲಿ ಹೂವನ್ನು ಅರ್ಪಿಸಿದ ಮಕ್ಕಳಿಗೆ ಹಾಗೂ ಭಕ್ತರಿಗೆ ದಾನಿಗಳಿಂದ ಕಬ್ಬುಗಳನ್ನು ವಿತರಿಸಲಾಯಿತು.

ಮಕ್ಕಳು ಹಾಗೂ ಕುಟುಂಬಸ್ಥರು ಸಂಭ್ರಮದಿಂದ ಪ್ರಸಾದ ಸ್ವೀಕರಿಸಿ ಹಬ್ಬದ ಸಂತೋಷವನ್ನು ಹಂಚಿಕೊಂಡರು.

ಕುಟುಂಬದ ಒಗ್ಗಟ್ಟಿನ ಹಬ್ಬ

ಮೋಂತಿ ಫೆಸ್ತ್‌ನ್ನು ಕುಟುಂಬದ ಹಬ್ಬ ಎಂದೂ ಕರೆಯಲಾಗುತ್ತದೆ. ಹಬ್ಬದ ದಿನ ಮನೆಗಳಲ್ಲಿ ವಿವಿಧ ಬಗೆಯ ಸಸ್ಯಾಹಾರಿ ಖಾದ್ಯಗಳನ್ನು ಸಿದ್ಧಪಡಿಸಿ, ಕುಟುಂಬದವರೆಲ್ಲರೂ ಒಟ್ಟಾಗಿ ಬಾಳೆ ಎಲೆಯಲ್ಲಿ ಊಟ ಮಾಡುವ ‘ನೊವೆಂ ಜೆವನ್’ ಸಂಪ್ರದಾಯಕ್ಕೆ ವಿಶೇಷ ಮಹತ್ವವಿದೆ. ಹಿರಿಯರು ಹಾಗೂ ಕಿರಿಯರು ಒಂದಾಗಿ ಸೇರಿ ಊಟ ಮಾಡುವ ಮೂಲಕ ಕುಟುಂಬ ಬಾಂಧವ್ಯವನ್ನು ಗಟ್ಟಿಗೊಳಿಸಲಾಗುತ್ತದೆ.

  ಬಾಲ ಮರಿಯಮ್ಮನವರ ಜನ್ಮದಿನವನ್ನು ಸ್ಮರಿಸುವ ಈ ದಿನ ಹೆಣ್ಣು ಮಗುವಿನ ಗೌರವ, ರಕ್ಷಣೆ, ಶಿಕ್ಷಣ ಹಾಗೂ ಸಮಾನ ಅವಕಾಶಗಳ ಮಹತ್ವವನ್ನು ಸಾರುವ ದಿನವಾಗಿಯೂ ಆಚರಿಸಲಾಗುತ್ತದೆ. ಕುಟುಂಬ ಮತ್ತು ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವ ಸಂದೇಶವನ್ನು ಈ ಹಬ್ಬ ಸಾರುತ್ತದೆ.

   ಧಾರ್ಮಿಕ ಭಕ್ತಿ, ಹೊಸ ಬೆಳೆಯ ಸಂಭ್ರಮ, ಕುಟುಂಬದ ಒಗ್ಗಟ್ಟು ಮತ್ತು ಹೆಣ್ಣು ಮಗುವಿನ ಗೌರವ ಈ ನಾಲ್ಕು ಮೌಲ್ಯಗಳನ್ನು ಒಟ್ಟುಗೂಡಿಸುವ ಮೋಂತಿ ಫೆಸ್ತ್ ಕರಾವಳಿಯ ವಿಶಿಷ್ಟ ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕವಾಗಿ ಮತ್ತೊಮ್ಮೆ ಕಂಗೊಳಿಸಿತು.

  ಇದರ ಅಂಗವಾಗಿ ಬಲಿ ಪೂಜೆಯ ಗೀತೆಗಳನ್ನು ಹಾಗೂ ಎಲ್ಲಾ ಬಲಿ ಪೂಜೆ ವಿಧಿ ವಿಧಾನಗಳನ್ನು ಹೆಣ್ಣು ಮಕ್ಕಳಿಂದ  ಆಚರಿಸಲಾಯಿತು.

  ಈ ಸಂದರ್ಭದಲ್ಲಿ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಜೂಲಿಯನ್  ರೋಡ್ರಿ ಗಸ್, ಕಾರ್ಯದರ್ಶಿಗಳಾದ ಗಿಲ್ಬರ್ಟ್ ಪಿಂಟೋ, ಆಯೋಗದ ಸಂಚಾಲಕಿಯಾದ ಶಾಲಿನಿ ಕೋರ್ಡ, ಕತೋಲಿಕ್ ಸಭಾ ಉಡುಪಿ ಪ್ರಾಂತ್ಯದ ಅಧ್ಯಕ್ಷರಾದ ಮೆಲ್ವಿನ್ ಅರನ್ನ, ಆರ್ಥಿಕ ಮಂಡಳಿಯ ಸದಸ್ಯರು, ಪಾಲನಾ ಮಂಡಳಿಯ ಸದಸ್ಯರು, 32 ವಾಳೆಯ ಗುರಿಕಾರರು ಹಾಗೂ ಸರಿಸುಮಾರು 2000 ಭಕ್ತಾದಿಗಳು ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.