ಪ್ರಥಮ ಪೂಜಿತ ಗಣೇಶನ ಜನನಕ್ಕೆ ಮೂಲ ಕಾರಣ ಈ ಮಹರ್ಷಿಯ ಶಪಥ!
ಗಣೇಶ ಚತುರ್ಥಿ ಪ್ರಯುಕ್ತ ಮೈಸೂರಿನ ಸಾಯಿ ಚನ್ನಪ್ಪರಾಜು ರವರಿಂದ ವಿಶೇಷ ಲೇಖನ (A special article by Sai Channapparaju from Mandya on the occasion of Ganesh Chaturthi.)
ದುರ್ವಾಸ ಮಹರ್ಷಿಗಳ ತಪಸ್ಸು, ಐರಾವತನ ಭಕ್ತಿ ಮತ್ತು ಗಜಮುಖ ಗಣಪತಿಯ ಆವಿರ್ಭಾವದ ಅದ್ಭುತ ಹಿನ್ನೆಲೆ
ಯುಗಯುಗಗಳಿಂದ ವಿಶ್ವವಂದಿತನಾಗಿ, ವಿಘ್ನವಿನಾಶಕನಾಗಿ, ಅಗ್ರಪೂಜೆಗೆ ಅರ್ಹನಾಗಿ ಆರಾಧಿಸಲ್ಪಡುತ್ತಿರುವ ಗಣಪತಿ ತತ್ತ್ವ ಅನಾದಿಕಾಲದಿಂದಲೇ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ದೇಶ–ಕಾಲಗಳ ಎಲ್ಲೆಗಳನ್ನು ಮೀರಿ ಓಂಕಾರ ಸ್ವರೂಪವಾಗಿ ಸರ್ವವ್ಯಾಪಿಯಾಗಿರುವ ಗಣೇಶ ತತ್ತ್ವವು ಕೇವಲ ಒಂದು ದೇವತಾ ಆರಾಧನೆಯಲ್ಲ, ಅದು ಜ್ಞಾನ, ಬುದ್ಧಿ, ವಿವೇಕ, ಶಕ್ತಿ ಮತ್ತು ವಿಘ್ನನಿವಾರಣೆಯ ಸಂಕೇತವೂ ಹೌದು.
ಆದರೆ ಒಂದು ಕುತೂಹಲಕಾರಿ ಪ್ರಶ್ನೆ ಸಹಜವಾಗಿ ಮೂಡುತ್ತದೆ. *ಗಜಮುಖನಾದ ಗಣಪತಿ ಹೇಗೆ ಆವಿರ್ಭವಿಸಿದ? ಆತನಿಗೆ ಏಕೆ ಅಗ್ರಪೂಜೆ? ಆನೆಯ ಮುಖವೇ ಆತನಿಗೆ ಹೇಗೆ ದೊರೆಯಿತು?*
ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದಾಗ ದುರ್ವಾಸ ಮಹರ್ಷಿಗಳ ತಪಸ್ಸು, ಐರಾವತನ ಭಕ್ತಿ ಮತ್ತು ಪಾರ್ವತಿದೇವಿಯ ಅನುಗ್ರಹವನ್ನು ಒಳಗೊಂಡ ಅದ್ಭುತ ಕಥನ ನಮ್ಮ ಮುಂದೆ ತೆರೆದುಕೊಳ್ಳುತ್ತದೆ.
ಗಣಪತಿ ಜನನಕ್ಕೂ ಮುನ್ನ ದೈವ ಹೆಣೆದ ಸನ್ನಿವೇಶ
ಗಜಾನನ, ವಕ್ರತುಂಡ, ಹೇರಂಬ, ಲಂಬೋದರ, ಉಮಾಸುತ, ಮಹೇಶ್ವರಪುತ್ರ, ಗಣನಾಥ… ಹೀಗೆ ನೂರಾರು ಹೆಸರುಗಳಿಂದ ಕರೆಯಲ್ಪಡುವ ಗಣಪತಿಯ ಆವಿರ್ಭಾವದ ಹಿಂದೆ ಮಹರ್ಷಿಯೊಬ್ಬರ ಉಗ್ರ ತಪಸ್ಸಿನ ಕಥೆಯಿದೆ.
ದುರ್ವಾಸ ಮಹರ್ಷಿಗಳು ಲೋಕಕ್ಕೆ ಒಂದು ಮಹತ್ವದ ಸಂದೇಶ ನೀಡಬೇಕೆಂದು ಸಂಕಲ್ಪಿಸಿದ್ದರು. ʼದೈವಶಕ್ತಿಯೇ ಪರಮಶಕ್ತಿ. ಮನುಷ್ಯನು ಆ ಶಕ್ತಿಗೆ ಶರಣಾಗಿ ತನ್ನ ಅಹಂಕಾರವನ್ನು ಅರ್ಪಿಸಬೇಕುʼ.
ಪ್ರತಿ ಹುಣ್ಣಿಮೆಯಂದು ಕೈಲಾಸಕ್ಕೆ ತೆರಳಿ ಶಿವನನ್ನು, ಬ್ರಹ್ಮಲೋಕಕ್ಕೆ ತೆರಳಿ ಬ್ರಹ್ಮದೇವರನ್ನು ಹಾಗೂ ವೈಕುಂಠಕ್ಕೆ ತೆರಳಿ ಶ್ರೀಮನ್ನಾರಾಯಣನನ್ನು ಆರಾಧಿಸುತ್ತಿದ್ದರು. ಅವರ ಭಕ್ತಿ ಮತ್ತು ನಿಷ್ಠೆಯಿಂದ ಸಂತುಷ್ಟನಾದ ವಿಷ್ಣು ಭಗವಂತ ಅವರಿಗೆ ಅಮೂಲ್ಯವಾದ ಕಮಲಪುಷ್ಪವೊಂದನ್ನು ಅನುಗ್ರಹಿಸಿದರು.
ಆ ಪುಷ್ಪವನ್ನು ಸ್ವೀಕರಿಸಿದಾಗ ತಮ್ಮ ಶಿಷ್ಯನಾದ ದೇವೇಂದ್ರನ ನೆನಪಾಯಿತು. ಆತನನ್ನು ಭೇಟಿಯಾಗಿ ಪುಷ್ಪವನ್ನು ನೀಡಬೇಕೆಂದು ದುರ್ವಾಸರು ಅಮರಾವತಿಗೆ ತೆರಳಿದರು.
ಅದೇ ಸಂದರ್ಭದಲ್ಲಿ ದೇವೇಂದ್ರನು ತನ್ನ ಪತ್ನಿ–ಪರಿವಾರದೊಂದಿಗೆ ಐರಾವತದ ಮೇಲೆ ಕುಳಿತು ಬರುತ್ತಿದ್ದನು. ಮಹರ್ಷಿಗಳನ್ನು ಕಂಡರೂ ಕಾಣದಂತೆ ವರ್ತಿಸಿದ ಇಂದ್ರನ ವರ್ತನೆ ದುರ್ವಾಸರಿಗೆ ಅಸಮಾಧಾನ ಉಂಟುಮಾಡಿತು.
ಆದರೆ ಐರಾವತ ಮಾತ್ರ ಮಹರ್ಷಿಗಳ ಮಹಿಮೆಯನ್ನು ಅರಿತು, ಅವರಿಗೆ ಭಕ್ತಿಯಿಂದ ನಮಸ್ಕರಿಸಿತು. ಈ ನಮಸ್ಕಾರ ಮಾಡಲು ಬಾಗಿದಾಗ ಆನೆ ಮೇಲೆ ಇದ್ದ ದೇವೆಂದ್ರ ಹಾಗೂ ಪರಿವಾರ ಜಾರಿ ಬಿದ್ದರು. ಈ ಕೃತ್ಯಕ್ಕೆ ದೇವೇಂದ್ರ ಆನೆ ಮೇಲೆ ಕೋಪಗೊಂಡ ಆದರೆ ದುರ್ವಾಸರಿಗೆ ಗೌರವ ಕೊಡಲಿಲ್ಲ
ಆ ದೃಶ್ಯವೇ ಮುಂದಿನ ದೈವಿಕ ಕಥೆಗೆ ನಾಂದಿಯಾಯಿತು.
ಐರಾವತನ ಭಕ್ತಿಗೆ ಮಹರ್ಷಿಯ ಆಶೀರ್ವಾದ
ಐರಾವತವು ಮಹರ್ಷಿಗಳ ಮುಂದೆ ಭಕ್ತಿಯಿಂದ ಮಂಡಿಯೂರಿ ನಮಸ್ಕರಿಸಿದಾಗ, ಅದರ ಭಾವವನ್ನು ಕಂಡು ದುರ್ವಾಸರು ಸಂತುಷ್ಟರಾದರು. ಇಂದ್ರನ ಅಹಂಕಾರಕ್ಕೆ ಕೋಪಗೊಂಡ ಮಹರ್ಷಿಗಳು ಅವನಿಗೆ ಶಾಪವಿತ್ತರು.
ಅದೇ ವೇಳೆ ಐರಾವತನ ಭಕ್ತಿಯನ್ನು ಮೆಚ್ಚಿ ಅದರ ಆನೆಯ ಸ್ವರೂಪವನ್ನು ಸ್ಮರಿಸುತ್ತಾ, “ನಿನ್ನ ಈ ಗಜಮುಖಸ್ವರೂಪಕ್ಕೆ ಲೋಕವೇ ಅಗ್ರಪೂಜೆ ಸಲ್ಲಿಸುವಂತಾಗಲಿ” ಎಂದು ಆಶೀರ್ವದಿಸಿದರು.
ಈ ಆಶೀರ್ವಾದವೇ ಮುಂದೆ ಗಣಪತಿ ತತ್ತ್ವದ ಆವಿರ್ಭಾವಕ್ಕೆ ಕಾರಣವಾಗುತ್ತದೆ ಎಂಬುದು ಈ ಕಥನದ ವಿಶೇಷತೆ.
ದುರ್ವಾಸರು ಹಿಮಾಲಯಕ್ಕೆ ತೆರಳಿ ಪಾರ್ವತಿ ದೇವಿಯನ್ನು ಕುರಿತು ಕಠಿಣ ತಪಸ್ಸು ಕೈಗೊಂಡರು.
ದುರ್ವಾಸರ ತಪಸ್ಸಿಗೆ ಪಾರ್ವತಿ ಪ್ರತ್ಯಕ್ಷ
ವರ್ಷಗಳ ಕಾಲ ನಡೆದ ಅವರ ತಪಸ್ಸಿನಿಂದ ಪ್ರಸನ್ನಳಾದ ಜಗನ್ಮಾತೆ ಪಾರ್ವತಿದೇವಿ ಪ್ರತ್ಯಕ್ಷಳಾಗಿ, “ನಿನ್ನ ಇಚ್ಛೆ ಏನು?” ಎಂದು ಕೇಳಿದಳು.
ಆಗ ದುರ್ವಾಸರು ಐರಾವತನ ಪ್ರಸಂಗವನ್ನು ವಿವರಿಸಿದರು.
“ಜಗನ್ಮಾತೆ! ಐರಾವತದ ಗಜಮುಖಕ್ಕೆ ಲೋಕವೇ ಪ್ರಥಮ ಪೂಜೆ ಸಲ್ಲಿಸಬೇಕು ಎಂದು ನಾನು ಸಂಕಲ್ಪಿಸಿದ್ದೇನೆ. ನೀನೇ ಈ ಶಪಥವನ್ನು ನೆರವೇರಿಸಬೇಕು. ನಿನ್ನ ಗರ್ಭದಲ್ಲಿ ಹುಟ್ಟುವ ಮಗುವು ಆನೆಯ ಮುಖವನ್ನು ಧರಿಸಿ ಸರ್ವರಿಂದ ಅಗ್ರಪೂಜೆ ಪಡೆಯಬೇಕು” ಎಂದು ಪ್ರಾರ್ಥಿಸಿದರು.
ಪಾರ್ವತಿದೇವಿ ಅವರ ಸಂಕಲ್ಪಕ್ಕೆ *‘ಅಸ್ತು’* ಎಂದು ಅನುಗ್ರಹಿಸಿದಳು.
ಹೀಗೆ ಗಣಪತಿಯ ಆವಿರ್ಭಾವಕ್ಕೆ ದೈವಿಕ ಹಿನ್ನೆಲೆ ಸಿದ್ಧವಾಯಿತು.
ಸೋಮದತ್ತ ಮಹರ್ಷಿಯ ಕಥೆಯೂ ಗಜಮುಖ ತತ್ತ್ವಕ್ಕೆ ಸಾಕ್ಷಿ
ಈ ಕಥನಕ್ಕೆ ಮತ್ತೊಂದು ಅದ್ಭುತ ಪ್ರಸಂಗವೂ ಸೇರಿಕೊಳ್ಳುತ್ತದೆ.
ಸೋಮದತ್ತ ಎಂಬ ಋಷಿ ಕಾಶಿಯಲ್ಲಿ ತಪಸ್ಸು ಮಾಡುತ್ತಿದ್ದಾಗ, ದಕ್ಷಿಣ ದಿಕ್ಕಿನ ಗಜಾರಣ್ಯಕ್ಕೆ ತೆರಳಿ ತಪಸ್ಸು ಮಾಡಿದರೆ ದೇವರ ದರ್ಶನ ಮತ್ತು ಮೋಕ್ಷ ದೊರೆಯುತ್ತದೆ ಎಂಬ ಅಶರೀರವಾಣಿ ಕೇಳಿಸಿತು.
ಅದರಂತೆ ಅವರು ಗಜಾರಣ್ಯದತ್ತ ಪ್ರಯಾಣ ಬೆಳೆಸಿದರು. ಮಾರ್ಗ ಮಧ್ಯೆ ಆನೆಗಳ ಹಿಂಡಿನ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡರು. ನಂತರ ಅದೇ ಗಜಾರಣ್ಯದಲ್ಲಿ ಅವರು ಆನೆಯಾಗಿ ಜನಿಸಿದರು.
ಹಿಂದಿನ ಜನ್ಮದ ನೆನಪು ಹೊಂದಿದ್ದ ಆ ಆನೆ, ಆಲದ ಮರದ ಬುಡದಲ್ಲಿದ್ದ ಶಿವಲಿಂಗವನ್ನು ಕಂಡು ಪ್ರತಿದಿನ ಸೊಂಡಿಲಿನಿಂದ ನೀರು ತಂದು ಅಭಿಷೇಕ ಮಾಡುತ್ತಾ ಪೂಜಿಸುತ್ತಿತ್ತು.
ಒಮ್ಮೆ ನಿಧಿಯಿರಬಹುದೆಂದು ಭಾವಿಸಿದ ಬೇಡ ಕಳ್ಳರಾದ ತಲ ಮತ್ತು ಕಾಡ ಎಂಬುವವರು ಮರದ ಬುಡವನ್ನು ಅಗೆಯುವಾಗ ಲಿಂಗಕ್ಕೆ ಪೆಟ್ಟು ಬಿದ್ದು ರಕ್ತಸ್ರಾವವಾಯಿತು. ಭಯಗೊಂಡ ಅವರು ಭಗವಂತನಲ್ಲಿ ಕ್ಷಮೆ ಕೋರಿದರು. ಔಷಧೀಯ ಎಲೆಗಳಿಂದ ಗಾಯಕ್ಕೆ ಚಿಕಿತ್ಸೆ ನೀಡಿದ ಬಳಿಕ ರಕ್ತಸ್ರಾವ ನಿಂತಿತು.
ತಲ ಮತ್ತು ಕಾಡರು ತಪ್ಪನ್ನೂ ಕ್ಷಮಿಸಿ ಎಂದು ಶಿವನನ್ನ ಪ್ರಾರ್ಥಿಸಿದಾಗ ಈ ಗಜಾರಣ್ಯ ನಿಮ್ಮ ಹೆಸರುಗಳಾದ ತಲ ಮತ್ತು ಕಾಡ ಅಂದರೆ ʼತಲಕಾಡುʼ ಆಗಲಿ ಎಂದು ಆಶೀರ್ವದಿಸಿದರು.
ಆನೆಯ ರೂಪದಲ್ಲಿದ್ದ ಸೋಮದತ್ತನ ಭಕ್ತಿಗೆ ಸಂತುಷ್ಟನಾದ ಶಿವನು, ಮುಂದೆ ಶಿವಶಕ್ತಿಯ ಪುತ್ರನಾಗಿ ಗಜಮುಖ ಸ್ವರೂಪದಲ್ಲಿ ಜನಿಸುವ ವರ ನೀಡಿದನೆಂದು ಪುರಾಣಕಥನ ಹೇಳುತ್ತದೆ.
ಪಾರ್ವತಿಯ ಪತಿವ್ರತ ಶಕ್ತಿಯಿಂದ ಬಾಲಕನ ಸೃಷ್ಟಿ
ಕಾಲಕ್ರಮದಲ್ಲಿ ಪಾರ್ವತಿ ದೇವಿಯು ತನ್ನ ಪತಿವ್ರತ ಶಕ್ತಿಯಿಂದ ತನ್ನ ದೇಹದಿಂದ ಒಬ್ಬ ಬಾಲಕನನ್ನು ಸೃಷ್ಟಿಸಿದಳು.“ನಾನು ಮರಳಿ ಬರುವವರೆಗೆ ಯಾರನ್ನೂ ಒಳಗೆ ಬಿಡಬಾರದು” ಎಂದು ಆತನಿಗೆ ಕಟ್ಟುನಿಟ್ಟಿನ ಆಜ್ಞೆ ನೀಡಿ ಸ್ನಾನಕ್ಕೆ ತೆರಳಿದಳು. ಅಷ್ಟರಲ್ಲಿ ಶಿವನು ಅಲ್ಲಿಗೆ ಬಂದನು. ತನ್ನ ತಾಯಿಯ ಆದೇಶವನ್ನು ಪಾಲಿಸಿದ ಬಾಲಕ ಶಿವನನ್ನೇ ಒಳಗೆ ಬಿಡಲಿಲ್ಲ.
ಬಾಲಕನ ಹಠದಿಂದ ಕೋಪಗೊಂಡ ಶಿವನು ಅವನ ತಲೆಯನ್ನು ಕಡಿದನು.
ಸ್ನಾನ ಮುಗಿಸಿ ಬಂದ ಪಾರ್ವತಿ ದೇವಿ ಮಗನ ಸ್ಥಿತಿಯನ್ನು ಕಂಡು ದುಃಖ–ರೋಷಗಳಿಂದ ಉಗ್ರರೂಪ ತಾಳಿದಳು. ದೇವತೆಗಳೆಲ್ಲರೂ ಆತಂಕಗೊಂಡರು. ಆಗ ಶಿವನು ದಕ್ಷಿಣ ದಿಕ್ಕಿನಲ್ಲಿ ಮಲಗಿದ್ದ ಆನೆಯ ತಲೆಯನ್ನು ತರಲು ಸೂಚಿಸಿದನು. ಆನೆಯ ತಲೆಯನ್ನು ಬಾಲಕನ ಮುಂಡಕ್ಕೆ ಜೋಡಿಸಿ, ಶಿವನು ಅವನಿಗೆ ಪುನರ್ಜೀವ ನೀಡಿದನು.
ಹೀಗೆ *ಮಾನವ ದೇಹ ಮತ್ತು ಗಜಮುಖವನ್ನು ಹೊಂದಿದ ದಿವ್ಯ ಬಾಲಕನು ಗಣಪತಿಯಾಗಿ ಆವಿರ್ಭವಿಸಿದನು.*
‘ಗಣಪತಿ’ ಎಂಬ ನಾಮದ ಹಿಂದಿನ ಅರ್ಥ
ಪಾರ್ವತಿ ದೇವಿಯ ಆಶಯದಂತೆ ಮಗನಿಗೆ ಅಗ್ರಪೂಜೆ ದೊರೆಯಬೇಕೆಂಬ ಸಂಕಲ್ಪವನ್ನು ಶಿವನು ನೆರವೇರಿಸಿದನು.
‘ಗಣ’ ಎಂದರೆ ಸಮೂಹ; ‘ಪತಿ’ ಎಂದರೆ ನಾಯಕ. ಹೀಗಾಗಿ ಸಮಸ್ತ ಗಣಗಳ ಅಧಿಪತಿಯಾಗಿ ಬಾಲಕನಿಗೆ *‘ಗಣಪತಿ’* ಎಂಬ ನಾಮಕರಣವಾಯಿತು.
ಯಾವುದೇ ಶುಭಕಾರ್ಯ ಆರಂಭಿಸುವ ಮೊದಲು ಗಣಪತಿಗೆ ಪೂಜೆ ಸಲ್ಲಿಸುವ ಸಂಪ್ರದಾಯವೂ ಹೀಗೆ ದೈವಿಕ ಮಹತ್ವ ಪಡೆದಿದೆ.
ಗಣೇಶನಿಗೆ ಬೈಸಿಕೆ ಹೊಡೆಯುವುದೇಕೆ?
ಗಣಪತಿಯ ಬಾಲಲೀಲೆಯಲ್ಲಿಯೂ ಒಂದು ವಿಶಿಷ್ಟ ಪ್ರಸಂಗವಿದೆ. ಬಾಲ ಗಣೇಶನನ್ನು ಕಂಡು ಸಂತೋಷಗೊಂಡ ವಿಷ್ಣುವು ಆತನನ್ನು ಮುದ್ದಾಡಿದಾಗ, ಗಣೇಶನು ವಿಷ್ಣುವಿನ ಶಂಖ, ಚಕ್ರ, ಗದೆ ಮತ್ತು ಕಮಲಗಳನ್ನು ತನ್ನ ಸೊಂಡಿಲಿನಿಂದ ತೆಗೆದುಕೊಂಡು ನುಂಗಿಬಿಟ್ಟನೆಂದು ಕಥನ ಹೇಳುತ್ತದೆ. ಇದರಿಂದ ಜಗತ್ತಿನ ಚಟುವಟಿಕೆಗಳು ಸ್ಥಗಿತಗೊಂಡವು. ಆಗ ವಿಷ್ಣುವು ಒಂದು ಉಪಾಯ ಕಂಡುಕೊಂಡು ಗಣೇಶನ ಮುಂದೆ ಕಿವಿ ಹಿಡಿದು ಬೈಸಿಕೆ ಹೊಡೆದನು. ಸಂತುಷ್ಟನಾದ ಗಣೇಶನು ತಾನು ನುಂಗಿದ್ದ ಆಯುಧಗಳನ್ನು ಮರಳಿ ನೀಡಿದನು. ಅಂದರೆ ಭಕ್ತರು ಕಳಕೊಂಡ ವಸ್ತುಗಳನ್ನ ಪಡೆಯಲು ಗಣೇಶನ ಮುಂದೆ ಬೈಸಿಕೆ ಹೊಡೆಯಬೇಕೆಂಬುವುದು ಲೋಕನೀತಿ ಆಗಿದೆ.
ದೇವತೆಗಳಿಗೂ ಪ್ರಥಮ ಪೂಜಿತ ಗಣೇಶನೇ
ಗಣೇಶನಿಗೆ ಅಗ್ರಪೂಜೆ ಸಲ್ಲಿಸುವ ಪರಂಪರೆ ದೇವತೆಗಳಿಗೂ ಅನ್ವಯಿಸುತ್ತದೆ ಎಂಬ ಹಲವು ಪೌರಾಣಿಕ ಪ್ರಸಂಗಗಳು ಜನಪ್ರಿಯವಾಗಿವೆ.
ತ್ರಿಪುರಾಸುರನ ಸಂಹಾರಕ್ಕೆ ತೆರಳಿದ ಶಿವನು ಗಣೇಶನಿಗೆ ಮೊದಲ ಪೂಜೆ ಸಲ್ಲಿಸದೆ ಯುದ್ಧಕ್ಕೆ ತೆರಳಿದ್ದರಿಂದ ವಿಜಯ ಸಿಗಲಿಲ್ಲ. ಬಳಿಕ ಗಣೇಶನನ್ನು ಪೂಜಿಸಿ ಯುದ್ಧಕ್ಕೆ ತೆರಳಿ ವಿಜಯ ಸಾಧಿಸಿದನೆಂದು ಕಥನ ಹೇಳುತ್ತದೆ.
ರಾಮಾಯಣ ರಚನೆಗೆ ಮುನ್ನ ವಾಲ್ಮೀಕಿ ಮಹರ್ಷಿಗಳು ಗಣೇಶನನ್ನು ಪ್ರಾರ್ಥಿಸಿದರೆಂದು, ಶ್ರೀರಾಮನು ಲಂಕೆಗೆ ಸೇತುವೆ ನಿರ್ಮಿಸುವ ಮುನ್ನ ಗಣೇಶನನ್ನು ಆರಾಧಿಸಿದನೆಂದೂ ಜನಪ್ರಿಯ ಪರಂಪರೆ ಹೇಳುತ್ತದೆ.
ಮಹಾಭಾರತದ ರಚನೆಯ ಸಂದರ್ಭದಲ್ಲಿ ವ್ಯಾಸರಿಗೆ ಗಣೇಶನೇ ಲೇಖಕನಾಗಿ ಸಹಕರಿಸಿದ ಕಥೆಯೂ ಪ್ರಸಿದ್ಧವಾಗಿದೆ. ಲೇಖನಿ ಮುರಿದಾಗ ತನ್ನ ದಂತವನ್ನೇ ಮುರಿದು ಲೇಖನಿಯನ್ನಾಗಿ ಮಾಡಿಕೊಂಡು ಮಹಾಭಾರತವನ್ನು ಬರೆದನೆಂಬ ಕಾರಣದಿಂದ ಗಣೇಶನಿಗೆ ‘ಏಕದಂತ’ ಎಂಬ ಹೆಸರು ಬಂದಿದೆ.
ರುಕ್ಮಿಣಿಯು ಶ್ರೀಕೃಷ್ಣನನ್ನು ಪತಿಯಾಗಿ ಪಡೆಯಲು ಗಣೇಶ ವ್ರತ ಆಚರಿಸಿದಳು ಎಂಬ ನಂಬಿಕೆಯೂ ಇದೆ. ಕೃಷ್ಣನ ಅಷ್ಟಮಹಿಷಿಯರೂ ಗಣೇಶನನ್ನು ಆರಾಧಿಸಿದರೆಂದು ಈ ಪರಂಪರೆಯಲ್ಲಿ ಹೇಳಲಾಗಿದೆ.
ಗಣೇಶ ಮೂರ್ತಿಯಲ್ಲಿದೆ ಬದುಕಿನ ತತ್ತ್ವ
ಗಣೇಶನ ಮೂರ್ತಿ ಕೇವಲ ಆರಾಧನೆಯ ಪ್ರತೀಕವಲ್ಲ. ಅದರ ಪ್ರತಿಯೊಂದು ಅಂಗವೂ ಬದುಕಿನ ಮಹತ್ವದ ಸಂದೇಶವನ್ನು ನೀಡುತ್ತದೆ.
*ದೊಡ್ಡ ತಲೆ* — ವಿಶಾಲ ಚಿಂತನೆ, ಜ್ಞಾನ ಮತ್ತು ಬುದ್ಧಿಶಕ್ತಿಯ ಸಂಕೇತ.
*ದೊಡ್ಡ ಕಿವಿಗಳು* — ಎಲ್ಲರ ಮಾತನ್ನೂ ತಾಳ್ಮೆಯಿಂದ ಆಲಿಸುವ ಗುಣ.
*ಚಿಕ್ಕ ಕಣ್ಣುಗಳು* — ಏಕಾಗ್ರತೆ ಮತ್ತು ಸೂಕ್ಷ್ಮ ದೃಷ್ಟಿ.
*ಸಣ್ಣ ಬಾಯಿ* — ಕಡಿಮೆ ಮಾತನಾಡಿ ಹೆಚ್ಚು ಕಾರ್ಯನಿರ್ವಹಿಸುವ ಸಂದೇಶ.
*ಉದ್ದನೆಯ ಸೊಂಡಿಲು* — ಸೌಮ್ಯತೆ ಮತ್ತು ದೃಢತೆಯ ಸಮನ್ವಯ.
*ದೊಡ್ಡ ಹೊಟ್ಟೆ* — ಜೀವನದ ಸುಖ–ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಜೀರ್ಣಿಸಿಕೊಳ್ಳುವ ಶಕ್ತಿ.
*ಪಾಶ* — ಲೌಕಿಕ ಆಸೆ, ವ್ಯಾಮೋಹಗಳನ್ನು ನಿಯಂತ್ರಿಸುವ ಸಂಕೇತ.
*ಅಂಕುಶ* — ಮನಸ್ಸಿನ ದುಷ್ಟ ಆಲೋಚನೆಗಳನ್ನು ನಿಯಂತ್ರಿಸಿ ಸರಿಯಾದ ದಾರಿಯಲ್ಲಿ ಸಾಗುವ ಪ್ರೇರಣೆ.
*ಮೋದಕ* — ಪರಿಶ್ರಮದ ಬಳಿಕ ದೊರೆಯುವ ಜ್ಞಾನಾಮೃತದ ಸಂಕೇತ.
*ಅಭಯಮುದ್ರೆ* — ಭಕ್ತರಿಗೆ ರಕ್ಷಣೆ ಮತ್ತು ಆಶ್ವಾಸನೆಯ ಸಂಕೇತ.
*ಏಕದಂತ* — ದ್ವಂದ್ವಗಳನ್ನು ಮೀರಿ ಏಕಾಗ್ರತೆಯಿಂದ ಬದುಕುವ ಸಂದೇಶ.
*ಮೂಷಿಕ ವಾಹನ* — ಅತಿಯಾದ ಆಸೆಗಳನ್ನು ಬುದ್ಧಿ ಮತ್ತು ವಿವೇಕದಿಂದ ನಿಯಂತ್ರಿಸಬೇಕು ಎಂಬ ತತ್ತ್ವ.
ಹೀಗಾಗಿ ಗಣೇಶ ತತ್ತ್ವವು ಕೇವಲ ವಿಘ್ನಗಳನ್ನು ನಿವಾರಿಸುವ ದೇವತೆಯ ಆರಾಧನೆಯಲ್ಲ; *ಬುದ್ಧಿ, ವಿವೇಕ, ತಾಳ್ಮೆ, ಏಕಾಗ್ರತೆ ಮತ್ತು ಸ್ವಯಂ ನಿಯಂತ್ರಣದ ಮೂಲಕ ಬದುಕನ್ನು ಸಾರ್ಥಕಗೊಳಿಸುವ ಜೀವನದರ್ಶನ*ವೂ ಹೌದು.
ಗಣೇಶ ತತ್ತ್ವದ ಬೆಳಕಿನಲ್ಲಿ…
ದುರ್ವಾಸ ಮಹರ್ಷಿಗಳ ಶಪಥದಿಂದ ಆರಂಭವಾಗಿ, ಐರಾವತನ ಭಕ್ತಿ, ಪಾರ್ವತಿ ದೇವಿಯ ಸಂಕಲ್ಪ, ಶಿವನ ಅನುಗ್ರಹ ಮತ್ತು ಗಜಮುಖ ಬಾಲಕನ ಆವಿರ್ಭಾವದವರೆಗೆ ಸಾಗುವ ಈ ಕಥನವು ಗಣೇಶ ತತ್ತ್ವದ ಬಹುಮುಖ ಆಯಾಮಗಳನ್ನು ತೆರೆದಿಡುತ್ತದೆ.
ವಿಘ್ನಗಳು ಹೊರಗಿನಿಂದ ಮಾತ್ರ ಬರುವುದಿಲ್ಲ. ನಮ್ಮೊಳಗಿನ ಅಹಂಕಾರ, ಅಜ್ಞಾನ, ಅಸಹನೆ, ಅತಿಯಾದ ಆಸೆ ಮತ್ತು ಅಸ್ಥಿರ ಮನಸ್ಸುಗಳೂ ಬದುಕಿನ ದೊಡ್ಡ ವಿಘ್ನಗಳೇ. ಅವುಗಳನ್ನು ಜಯಿಸಲು ಗಣಪತಿಯ ತತ್ತ್ವ ಸಾರುವ ಭಕ್ತಿ, ಜ್ಞಾನ, ಬುದ್ಧಿ, ವಿವೇಕ ಮತ್ತು ಏಕಾಗ್ರತೆ ಅಗತ್ಯ. ಆದ್ದರಿಂದಲೇ ಯಾವುದೇ ಶುಭಕಾರ್ಯದ ಆರಂಭದಲ್ಲಿ ಮೊದಲು ಗಣೇಶನನ್ನು ಸ್ಮರಿಸುತ್ತೇವೆ.
“ವಕ್ರತುಂಡ ಮಹಾಕಾಯ, ಸೂರ್ಯಕೋಟಿ ಸಮಪ್ರಭಃ ನಿರ್ವಿಘ್ನಂ ಕುರು ಮೇ ದೇವ, ಸರ್ವಕಾರ್ಯೇಷು ಸರ್ವದಾ.”
ತ್ರಿಲೋಕ ಪೂಜಿತ, ಗೌರೀ ನಂದನ, ಈಶಪುತ್ರ, ಗಜವದನ, ಗಣನಾಥನಿಗೆ ಭಕ್ತಿಪೂರ್ವಕವಾಗಿ ವಂದಿಸೋಣ.
ನಮ್ಮ ಬದುಕಿನ ಎಲ್ಲ ಸತ್ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರಲಿ. ಜ್ಞಾನ, ಬುದ್ಧಿ, ವಿವೇಕ ಮತ್ತು ಸನ್ಮಾರ್ಗದ ಬೆಳಕು ಪ್ರತಿಯೊಬ್ಬರ ಜೀವನದಲ್ಲೂ ಬೆಳಗಲಿ ಎಂದು ಪ್ರಾರ್ಥಿಸೋಣ.
*ಗಣಪತಿ ಬಾಪ್ಪಾ ಮೋರೆಯಾ! ಜೈ ಗಣೇಶ!*
*ಬರಹ: ಸಾಯಿ ಚನ್ನಪ್ಪರಾಜು, ಮಂಡ್ಯ ಜಿಲ್ಲೆ. ಮದ್ದೂರು ತಾಲೂಕಿನ ಹೊಸಕೆರೆ*
೦೦೦೦೦೦೦

