ವಿದ್ಯಾರ್ಥಿಗಳು ಕನಸುಗಳನ್ನು ನನಸಾಗಿಸುವ ಪ್ರಯತ್ನ ಮಾಡಬೇಕು: ಗ್ಯಾಬ್ರಿಯಲ್ ಮಸ್ಕರೇನಸ್
ಸೈನ್ಸ್ ಒಲಿಂಪಿಯಾಡ್ ಕ್ವಿಜ್ ನಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ
(Kaup) ಕಾಪು : ಚಿಲ್ಡ್ರನ್ಸ್ ಇಸ್ಲಾಮಿಕ್ ಓರ್ಗನೈಜೇಷನ್ ಆಫ್ ಇಂಡಿಯಾ, ಕಾಪು ಶಾಖೆಯ ವತಿಯಿಂದ, ಕಾಪುವಿನ ಜೆ. ಸಿ. ಐ. ಭವನದಲ್ಲಿ ಸೈನ್ಸ್ ಒಲಿಂಪಿಯಾಡ್ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ದಂಡತೀರ್ಥ ಶಾಲೆಯ ಮುಖ್ಯೋಪಾಧ್ಯಾಯ ಗ್ಯಾಬ್ರಿಯಲ್ ಮಸ್ಕರೇನಸ್ ಭಾಗವಹಿಸಿದರು.
ಅವರು ಮಾತನಾಡಿ, ವಿಜ್ಞಾನಿಗಳು ಕಂಡ ಕನಸನ್ನು ನನಸಾಗಿಸಲು ಪಟ್ಟ ಶ್ರಮದಿಂದ ಇಂದು ಮೊಬೈಲ್ ಹಾಗೂ ಇನ್ನಿತರ ಹಲವು ಸಾಧನಗಳು ಮನುಷ್ಯನಿಗೆ ಅತೀ ಅಗತ್ಯದ ವಸ್ತುವಾಗಿ ಮಾರ್ಪಟ್ಟಿವೆ. ಆದ್ದರಿಂದ ವಿದ್ಯಾರ್ಥಿಗಳು ಕೂಡಾ ಯಾವುದಾದರೂ ಒಂದು ಸಾಧನೆ ಮಾಡುವ ಕನಸು ಕಾಣಬೇಕು ಮತ್ತು ಆ ಕನಸನ್ನು ನನಸಾಗಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಜಮಾ ಅತೆ ಇಸ್ಲಾಮಿ ಹಿಂದ್ ನ ಸದಸ್ಯೆ ರೇಷ್ಮಾ ಬೈಲೂರು ರವರು ಮಾತನಾಡಿ, ಸೋಲು ಎಂಬುವುದು ಮನುಷ್ಯನ ಅಂತ್ಯವಲ್ಲ. ಅದನ್ನು ಗೆಲುವಾಗಿ ಪರಿವರ್ತಿಸಲು ಸಾಧ್ಯವಿದೆ. ಸೋಲು ಮನುಷ್ಯನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ತನ್ನಲ್ಲಿರುವ ಪ್ರತಿಭೆಯನ್ನು ಹೊರ ತರಲು ಕಠಿಣ ಪರಿಶ್ರಮ ಪಡಲು ಪ್ರೆರೇಪಿಸುತ್ತದೆ. ದೇವನು, ಪ್ರತಿಭೆಯನ್ನು ಪ್ರತಿಯೊಂದು ಮನುಷ್ಯರಲ್ಲಿ ಇಟ್ಟಿರುತ್ತಾನೆ. ಅದು ಯಾವುದು ಎಂದು ಗುರುತಿಸಿಕೊಳ್ಳಬೇಕಾದುದು ಮನುಷ್ಯನ ಮೇಲೆ ಅವಲಂಬಿತವಾಗಿದೆ. ವಿದ್ಯಾರ್ಥಿಗಳು ಧನಾತ್ಮಕ ಮಾರ್ಗದಲ್ಲಿ ಚಲಿಸುವಂತೆ ನೋಡಿಕೊಳ್ಳಬೇಕೆಂದರು..
ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ಶಾಖೆಯ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿಯವರು ಮಾತನಾಡಿ, ಮನುಷ್ಯನಿಗೆ ಆಕಾಶದಲ್ಲಿ ಹಾರುವ, ನೀರಿನಲ್ಲಿ ತೇಲುವ ಯಂತ್ರವನ್ನು ತಯಾರಿಸಲು ಯಾರು ಜ್ಞಾನ ಕೊಟ್ಟರು?. ಭೂಮಿ ಆಕಾಶದಲ್ಲಿ ಇರುವ ಕಾಯಕಗಳು ಸಮಯ ಪಾಲನೆಯೊಂದಿಗೆ ಯಾರ ಆಜ್ಞೆಯ ಪ್ರಕಾರ ಕಾರ್ಯ ನಿರ್ವಹಿಸುತ್ತಿವೆ?. ಇದಕ್ಕೆ ವಿಜ್ಞಾನದಲ್ಲಿ ಯಾವುದಾದರೂ ಉತ್ತರ ಸಿಗುತ್ತದೆಯೇ ಎಂಬ ಸಂಶೋಧನೆ ಮಾಡಬೇಕು ಎಂದು ಸಮಾರೋಪ ಭಾಷಣದಲ್ಲಿ ಹೇಳಿದರು.
ಕಾರ್ಯಕ್ರಮವು ಕಾಪು ವರ್ತುಲದ ಸಿ. ಐ ಓ. ಸದಸ್ಯ ಮುಹಮ್ಮದ್ ಅವ್ವಾಬ್ ರವರ ಕುರ್ ಆನ್ ಪಠಣದೊಂದಿಗೆ ಪ್ರಾರಂಭವಾಯಿತು.
ಮುಹಮ್ಮದ್ ಅಲಿ ಇಬ್ರಾಹೀಮ್ ರವರು ಸ್ವಾಗತಿಸಿದರು.
ಬಹುಮಾನ ಪಟ್ಟಿಯನ್ನು ಸಿ. ಐ. ಓ. ಸಂಚಾಲಕಿ ಶೆಹೆನಾಜ್ ರವರು ಓದಿದರು. ಮುಹಮ್ಮದ್ ಶರೀಫ್ ಶೇಕ್ ವಂದನಾರ್ಪಣೆಗೈದರು. ಮುಹಮ್ಮದ್ ಇಕ್ಬಾಲ್ ಸಾಹೇಬ್ ಕಾರ್ಯಕ್ರಮ ನಿರೂಪಿಸಿದರು.
ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಆರು, ಏಳು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ನಗದು ಮೊತ್ತ, ಸರ್ಟಿಫಿಕೇಟ್ ಮತ್ತು ಬಹುಮಾನ ವಿತರಿಸಲಾಯಿತು.
ನಂತರದ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ, ನಗದು ಮೊತ್ತ ಮತ್ತು ಸರ್ಟಿಫಿಕೇಟ್ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಮತ್ತು ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಉದ್ಯಮಿ ಮಾಹಿರ್ ಮಂಜ್ಹೂರ್ ಅಹಮದ್, ಮುಹಮ್ಮದ್ ಹಾಶೀಮ್ ಸಾಹೇಬ್, ಮಹರೂಫ ಉಪಸ್ಥಿತರಿದ್ದರು.

