ಕಾರ್ಕಳ: ಕ್ಷುಲ್ಲಕ ವಿಚಾರಕ್ಕಾಗಿ ದಂಪತಿಗಳ ಮಧ್ಯೆ ಜಗಳವಾಗಿದ್ದು ಸಾವಿನೊಂದಿಗೆ ಅಂತ್ಯ ಕಂಡಿರುವ ಘಟನೆ ಇಂದು ಕಾರ್ಕಳ ತಾಲೂಕಿನ ನಲ್ಲೂರಿನಲ್ಲಿ ನಡೆದಿದೆ.
ಯಲ್ಲಾಪುರ ಮೂಲದ ಇಮ್ಯಾನುಲ್ ಸಿದ್ದಿ (40) ಹಾಗೂ ಯಶೋಧಾ (32) ಎಂಬುವವರೇ ಸಾವಿಗೀಡಾದ ದಂಪತಿ.
ಇಂದು ಬೆಳಿಗ್ಗೆ ಟಿವಿ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳ ಮಧ್ಯೆ ಜಗಳವಾಗಿದ್ದು, ಈ ವೇಳೆ ಯಶೋಧಾ ತೋಟದಲ್ಲಿದ್ದ ಬಾವಿಗೆ ಹಾರಿದರು. ಯಶೋಧಾರನ್ನು ರಕ್ಷಿಸಲು ತೆರಳಿದ್ದ ಪತಿ ಇಮ್ಯಾನುಲ್ ಕೂಡ ನೀರು ಪಾಲಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಇಮ್ಯಾನುಲ್, ಯಶೋಧಾ ದಂಪತಿ ನಲ್ಲೂರಿನ ತೋಟವೊಂದರಲ್ಲಿ ಕೆಲಸಕ್ಕಿದ್ದರು.
ದಂಪತಿ ಸಾವಿನಿಂದ ಇದೀಗ 10 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿ ಅನಾಥರಾಗಿದ್ದಾರೆ.
ಡಿವೈಎಸ್ಪಿ ಅರವಿಂದ್ ಕಲಗುಜ್ಜಿ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಎಸ್ಐ ತೇಜಸ್ವಿ, ಪೊಲೀಸ್ ಸಿಬ್ಬಂದಿಗಳಾದ ಪ್ರಕಾಶ್, ಸುಭಾಶ್ ಕಾಮತ್, ಸುಂದರ ಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

