ಮೊಗವೀರರನ್ನು ಎಸ್ಟಿ ಸಮುದಾಯಕ್ಕೆ ಸೇರಿಸಿ: ಜಿ.ಶಂಕರ್

ಉಚ್ಚಿಲದಲ್ಲಿ ವಿದ್ಯಾರ್ಥಿ ವೇತನ, ಗುರಿಕಾರರ ಸಮಾವೇಶ
ಪಡುಬಿದ್ರಿ: ಮೊಗವೀರ ಸಮಾಜವನ್ನು ಎಸ್ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಮೊದಲು ಬೃಹತ್ ಮಟ್ಟದ ಹೋರಾಟ ನಡೆಸಲಾಗುವುದು ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ. ಶಂಕರ್ ಹೇಳಿದರು.
ಅವರು ಭಾನುವಾರ ಉಚ್ಚಿಲ ಮೊಗವೀರ ಭವನದಲ್ಲಿ ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ವತಿಯಿಂದ ನಡೆಯುವ ಉಪ್ಪಳದಿಂದ ಶೀರೂರುವರೆಗಿನ ಮೊಗವೀರ ಗುರಿಕಾರರ ಸಮಾವೇಶ ಮತ್ತು ಗೌರವಧನ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈ ಹಿನ್ನಲೆಯಲ್ಲಿ ಈಗಾಗಲೇ ಪ್ರಥಮ ಹಂತದ ಹೋರಾಟ ಮಹಾಜನ ಸಂಘದ ಮೂಲಕ ಆರಂಭಗೊಂಡಿದೆ. ಇದು ಎಲ್ಲರ ಹೋರಾಟ. ಇದಕ್ಕೆ ಸರ್ವರ ಸಹಕಾರದ ಅಗತ್ಯವಿದೆ ಎಂದು ಅವರು ಹೇಳಿದರು.
ಗುರಿಕಾರರು ನಮ್ಮ ಹರಿಕಾರರಾಗಿದ್ದಾರೆ. ಅವರು ಸಧೃಢರಾಗಿದ್ದು, ಸಮಾಜಕ್ಕೆ ಉತ್ತಮ ರೀತಿಯ ಮಾರ್ಗದರ್ಶನ ನೀಡಲು ಸಶಕ್ತರಾಗಿದ್ದಾರೆ. ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಮೊಗವೀರ ಮಹಾಜನ ಸಂಘದ ಪ್ರಯತ್ನಿಸುತ್ತಿದೆ. ಮೂಲಸ್ಥಾನ, ದೇವಸ್ಥಾನ ನಮ್ಮ ಪರಂಪರೆಯಾಗಿದೆ. ಇದನ್ನು ಯುವಜನಾಂಗ ಅರಿತುಕೊಳ್ಳಬೇಕಿದೆ.
ಸಂಘವು ವಿದ್ಯಾರ್ಥಿಗಳ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡುತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಒಲವು ತೋರಬೇಕು ಎಂದ ಅವರು, ಈಗಾಗಲೇ ಫಿಶರೀಸ್ ಕಾಲೇಜಿನಲ್ಲಿ ಮೊಗವೀರ ಸಮಾಜದ ವಿದ್ಯಾರ್ಥಿಗಳಿಗೆ ಸೀಟು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚಿಸುವ ಭರವಸೆ ದೊರಕಿದೆ ಎಂದರು.
ವಿದ್ಯಾರ್ಥಿವೇತನ, ಗುರಿಗಾರರಿಗೆ ಗೌರವಧನ
524 ವಿದ್ಯಾರ್ಥಿಗಳಿಗೆ ಒಟ್ಟು 18.90 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಬಗುವಾಡಿ, ಬಾರ್ಕೂರು, ಉಚ್ಚಿಲ ಮತ್ತು ಮಂಗಳೂರು ಹೋಬಳಿ ವ್ಯಾಪ್ತಿಯ 342 ಗುರಿಕಾರರಿಗೆ ಒಟ್ಟು 17.10 ಲಕ್ಷ ರೂ. ಗೌರವಧನ ವಿತರಿಸಲಾಯಿತು.
ದೇಗುಲದಲ್ಲಿ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸುತ್ತಿರುವ ಮೋಹನ್ ಬಂಗೇರ ಕಾಪು, ಬಡಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮೆಂಡನ್, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಸಿ. ಕುಂದರ್, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಸುಭಾಷ್ ಚಂದ್ರ ಕಾಂಚನ್ ಬೋಳಾರ, ಕೋಶಾಧಿಕಾರಿ ಭರತ್ ಎರ್ಮಾಳು, ಬಾರ್ಕೂರು ಹೋಬಳಿ ಶಾಖೆಯ ಅಧ್ಯಕ್ಷ ಸತೀಶ್ ಅಮೀನ್, ಬಗ್ವಾಡಿ ಹೋಬಳಿ ಶಾಖೆಯ ಅಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ಮೊಗವೀರ ಮಹಾಜನ ಸಂಘದ ಮಹಿಳ ಘಟಕಾಧ್ಯಕ್ಷೆ ಉಷಾರಾಣಿ, ಮೊಗವೀರ ಯುವಸಂಘಟನೆಯ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್ ವರದಿ ವಾಚಿಸಿದರು.
ಮೊಗವೀರ ಮಹಾಜನಸಂಘದ ಅಧ್ಯಕ್ಷ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಸ್ವಾಗತಿಸಿದರು.
ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಕಾರ್ಯಕ್ರಮ ನಿರೂಪಿಸಿದರು.
ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್ ವಂದಿಸಿದರು.

