ಕಾರು ಅಪಘಾತದಲ್ಲಿ ಮಹಿಳೆ ಸಾವು: ನಟ ನಾಗಭೂಷಣ ಬಂಧನ
ಬೆಂಗಳೂರು: ಕನ್ನಡ ನಟ ನಾಗಭೂಷಣ ಅವರ ಕಾರು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆ ಮೃತಪಟ್ಟ ಘಟನೆ ನಡೆದಿದ್ದು, ಘಟನೆ ಬಳಿಕ ನಟ ನಾಗಭೂಷಣ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಟ ನಾಗಭೂಷಣ ಕಾರು ಅಪಘಾತವಾಗಿದ್ದು, ಪಾದಚಾರಿ ಮಹಿಳೆ ಎಸ್.ಪ್ರೇಮಾ (48) ಅವರು ಮೃತಪಟ್ಟಿದ್ದಾರೆ.
ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆ ನಿವಾಸಿ ಪ್ರೇಮಾ ಅವರು ಪತಿ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ನಾಗಭೂಷಣ ಅವರ ಕಾರು ಅತೀ ವೇಗದಲ್ಲಿ ಬಂದು ದಂಪತಿಗೆ ಢಿಕ್ಕಿ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪ್ರೇಮಾ ಅವರು ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ. ಕೃಷ್ಣ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ನಾಗಭೂಷಣ ಕಾರು ಚಲಾಯಿಸಿದ್ದರು. ಇದರಿಂದಲೇ ಅಪಘಾತ ಆಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಬಗ್ಗೆ ಮೃತ ಪ್ರೇಮಾ ಅವರ ಸಂಬಂಧಿಕರು ದೂರು ನೀಡಿದ್ದು, ಅದರಂತೆ ನಾಗಭೂಷಣ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೀಗ ಕಾರು ಜಪ್ತಿ ಮಾಡಿ, ನಾಗಭೂಷಣ ಅವರನ್ನು ಬಂಧಿಸಲಾಗಿದೆ.
ಅಪಘಾತದ ಬಳಿಕ ಕಾರು ಸ್ಥಳದಲ್ಲೇ ಬಿಟ್ಟು ನಾಗಭೂಷಣ ಅವರು ಪರಾರಿಯಾಗಲು ಯತ್ನಿಸಿದ್ದರು. ಅವರನ್ನು ತಡೆದು ನಿಲ್ಲಿಸಿದ್ದೆವು. ಜನರು ಹೆಚ್ಚು ಸೇರುತ್ತಿದ್ದಂತೆ ಮಾಸ್ಕ್ ಹಾಕಿಕೊಂಡಿದ್ದಾರೆ. ಬಳಿಕ ಹೊಯ್ಸಳ ವಾಹನ ಸ್ಥಳಕ್ಕೆ ಬಂದಿದ್ದು ಅದರಲ್ಲಿ ಅವರನ್ನು ಕೂರಿಸಿ ಠಾಣೆಗೆ ಕಳುಹಿಸಿದೆವು ಎಂದು ಸ್ಥಳೀಯರೋರ್ವರು ಮಾಹಿತಿ ನೀಡಿದ್ದಾರೆ.

