ಪುತ್ತೂರಿನಲ್ಲಿ“ಕಲ್ಲೇಗ ಟೈಗರ್ಸ್” ಹುಲಿ ತಂಡದ ನಾಯಕನ ಬರ್ಬರ ಕೊಲೆ (Kallega Tigers Team Captain Akshay Kalleega)

ಕೇವಲಾ ಎರಡು ಸಾವಿರ ರುಪಾಯಿಗಾಗಿ ನಡೆದಿದೆಯೇ ಕೊಲೆ?
ಪುತ್ತೂರು: ಪುತ್ತೂರು ನಗರದಲ್ಲಿ ಕಳೆದರಾತ್ರಿ ತಲವಾರ್ ನಲ್ಲಿ ಕಡಿದು “ಕಲ್ಲೇಗ ಟೈಗರ್ಸ್” ಹುಲಿ ತಂಡದ ನಾಯಕನನ್ನು ಬರ್ಬರವಾಗಿ ಕಡಿದು ಹತ್ಯೆ ಮಾಡಲಾಗಿದೆ.
ಅಕ್ಷಯ್ ಕಲ್ಲೀಗ (24) ಹತ್ಯೆಗೀಡಾದ ಯುವಕ.
ಸೋಮವಾರ ಪುತ್ತೂರು ನಗರದಲ್ಲಿ ಇದ್ದಾಗ ತಂಡವೊಂದು ಆಗಮಿಸಿ ತಲವಾರ್ ದಾಳಿ ನಡೆಸಿ, ಹತ್ಯೆ ಮಾಡಿದೆ.
ಕೇವಲ 2 ಸಾವಿರ ರೂ. ಗೆ ನಡೆದಿದೆಯಾ ಭೀಕರ ಹತ್ಯೆ?
ಸೋಮವಾರ ಸಂಜೆ ವೇಳೆ ವಾಹನ ಅಪಘಾತದ ವಿಚಾರದಲ್ಲಿ ಅಕ್ಷಯ್ ಹಾಗೂ ಎದುರಾಳಿ ತಂಡದ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ವಾಹನ ಅಪಘಾತದ ನಷ್ಟದ ಹಣ ನೀಡುವ ಬಗ್ಗೆ ಮಾತನಾಡಲೆಂದು ಪುನ: ಅದೇ ತಂಡ ಅಕ್ಷಯ್ ನನ್ನು ರಾತ್ರಿ ವೇಳೆ ನೆಹರೂ ನಗರ ಬಳಿ ಬರಲು ಹೇಳಿ ತಲವಾರ್ ಬೀಸಿ ಹತ್ಯೆ ನಡೆಸಿದ್ದಾರೆ ಎನ್ನಲಾಗಿದೆ.
ಕೇವಲ 2 ಸಾವಿರ ರೂಪಾಯಿಗಾಗಿ ಕೊಲೆ ನಡೆದಿದೆ ಎಂಬ ಮಾತು ಸ್ಥಳೀಯವಾಗಿ ಕೇಳಿ ಬಂದಿದೆ. ರಾತ್ರಿ 11.30 ಗಂಟೆ ಸುಮಾರಿಗೆ ಕೊಲೆ ನಡೆದಿದೆ ಎನ್ನಲಾಗುತ್ತಿದೆ.
ನೆಹರೂ ನಗರದಿಂದ ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಹೆದ್ದಾರಿಯ ತುಸು ದೂರದಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಬಳಿ ಅಕ್ಷಯ್ ಮೇಲೆ ತಂಡ ದಾಳಿ ನಡೆಸಿದ್ದು, ಅಲ್ಲಿಂದ ಅವರನ್ನು ಅಟ್ಟಾಡಿಸಿ ಕೊಂಡು ಬಂದು ತಲಾವರಿನಿಂದ ದಾಳಿ ನಡೆಸಿದ್ದಾರೆ. ಎಟಿಎಂ ಬಳಿಯಿಂದ ಮಾಣಿ ಮೈಸೂರು ಹೆದ್ದಾರಿಯನ್ನು ದಾಟಿ ಆಚೆ ಬದಿ ಗಿಡ ಗಂಟೆಗಳಿಂದ ಆವೃತ್ತವಾದ ಜಾಗದವರೆಗೂ ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಮಾಣಿ ಮೈಸೂರು ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ರಕ್ತದ ಕಲೆಗಳಿವೆ. ಅಕ್ಷಯ್ ಮೃತದೇಹ ಕಾಲೇಜಿಗೆ ಹೋಗುವ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಹೆದ್ದಾರಿಯ ಅಂಚಿನಲ್ಲಿರುವ ಹಡೀಲು ಬಿದ್ದ ಜಾಗದಲ್ಲಿ ಬಿದ್ದು ಕೊಂಡಿತ್ತು.
ಆರೋಪಿಗಳಿಬ್ಬರು ಪೊಲೀಸರಿಗೆ ಶರಣು?
ಕೃತ್ಯ ನಡೆದ ಕೆಲ ಗಂಟೆಯ ಬಳಿಕ ಮನೀಶ್ ಹಾಗೂ ಚೇತು ಎಂಬವರು ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದ್ದು, ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಇನ್ನೊರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
24ರ ಹರೆಯದ ಅಕ್ಷಯ್ ಕಲ್ಲೇಗ ವಿವೇಕಾನಂದ ಕಾಲೇಜ್ ಬಳಿ ನಿವಾಸಿಯಾಗಿದ್ದು, ತಂದೆ ಚಂದ್ರಶೇಖರ, ತಾಯಿ ಕುಸುಮ, ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಕಳೆದ 6 ವರ್ಷಗಳಿಂದ ಕಲ್ಲೇಗ ಟೈಗರ್ಸ್ ಎಂಬ ಹುಲಿ ವೇಷ ತಂಡವನ್ನು ಅವರು ಮುನ್ನಡೆಸುತ್ತಿದ್ದರು. ಈ ತಂಡ ಪುತ್ತೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು. ಹುಲಿ ಕುಣಿತದ ಪಂಥ ಕೂಟಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿತ್ತು. ಈ ಮೂಲಕ ಪುತ್ತೂರಿನಲ್ಲಿ ಹುಲಿ ಕುಣಿತ ತಂಡಕ್ಕೆ ಸ್ಟಾರ್ ಗಿರಿಯನ್ನು ತಂದು ಕೊಟ್ಟಿದ್ದರು.
ಖಾಸಗಿ ವಾಹಿನಿ ನಡೆಸುವ ಬಿಗ್ಬಾಸ್ ಶೋ ದಲ್ಲಿ (BIG BOSS REALITY SHOW) ಹುಲಿ ವೇಷ ಕುಣಿತ ರಾಜ್ಯಾದ್ಯಂತ ಹೆಸರುವಾಸಿಯಾಗಿತ್ತು.
ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

