ಗುಡ್ಡ ಜರಿದು ಮಣ್ಣಿನಡಿ ಸಿಲುಕಿದ ಕಾರ್ಮಿಕರಿಬ್ಬರು ಪಾರು
(Bantwala) ಬಂಟ್ವಾಳ: ಗುಡ್ಡ ಜರಿದು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ಸೂರಿಕುಮೇರ್ ಸಮೀಪದ ಕಾಯರಡ್ಕ ಎಂಬಲ್ಲಿ ಶುಕ್ರವಾರ ನಡೆದಿದ್ದು, ಈ ಘಟನೆಯಿಂದ ಇರ್ವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರ್ಮಿಕರಾದ ರಾಜೇಶ್ ನಾಯ್ಕ್ ಬಾಯಿಲ (60) ಹಾಗೂ ಉಮೇಶ್ ನಾಯ್ಕ್ ನೆಲ್ಲಿ(40) ಅವರು ಮಣ್ಣಿನಡಿ ಸಿಲುಕಿ ಗಾಯಗೊಂಡಿದ್ದು,ಇವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜೆಸಿಂತಾ ಮಾರ್ಟಿಸ್ ಎಂಬವರ ಮನೆಯ ಕಾಂಪೌಂಡ್ ನ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಮೇಲಿನಗುಡ್ಡ ಜರಿದು ಬಿದ್ದಿದ್ದು, ಪರಿಣಾಮ ಈ ಇಬ್ಬರು ಕಾರ್ಮಿಕರು ಮಣ್ಣಿನೊಳಗೆ ಸಿಲುಕಿಕೊಂಡಿದ್ದರು. ಕೂಡಲೇ ಇವರನ್ನು ಸ್ಥಳೀಯರ ಸಹಕಾರದಲ್ಲಿ ಮಣ್ಣಿನೊಳಗಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುದ್ದಿ ತಿಳಿದ ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಹೆಚ್, ಕಂದಾಯ ಅಧಿಕಾರಿ ವಿಜಯ್ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಗಾಯಾಳುಗಳು ಸದ್ಯ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

