ಸಾಲಿಗ್ರಾಮ: ಅವೈಜ್ಞಾನಿಕ ಮರಳುಗಾರಿಕೆಯ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
(Saligrama) ಸಾಲಿಗ್ರಾಮ: ಬುಧವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಮೂಡೋಳಿ ಕಾವಡಿ ಸೇತುವೆ ಪ್ರದೇಶದ ಬಳಿ ಅಕ್ರಮವಾಗಿ ಮರಳುಗಾರಿಕೆಗೆ ಸಂಬಂಧ ಕಾರ್ಕಡ ರೈತರು ಸೇರಿದಂತೆ ಗ್ರಾಮಸ್ಥರು ಪ. ಪಂ ಎದುರು ಪ್ರತಿಭಟನಾ ಸಭೆ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ ಸಾಲಿಗ್ರಾಮ ಮಾತನಾಡಿ, ಒರ್ವ ಜನ ಸಾಮಾನ್ಯ ಮನೆ ಕಟ್ಟುವುದಾದರೆ ಸ್ಥಳೀಯಾಡಳಿತ ಲೈಸೆನ್ಸ್ ನೀಡಲು ಹಲವು ಕಾರಣಗಳ ನೆಪವೊಡ್ಡುತ್ತದೆ. ಆದರೆ ಕಾರ್ಕಡ ಪರಿಸರದಲ್ಲಿ ಅಕ್ರಮವಾಗಿ ಮರಳುಗಾರಿಕೆ ಶೆಡ್ ನಿರ್ಮಾಣಕ್ಕೆ ಶೀಘ್ರಗತಿಯಲ್ಲಿ ಎನ್‌ಓಸಿ ನೀಡಿ ಅಕ್ರಮ ಮರಳುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ.
ಈ ಮರಳುಗಾರಿಕೆಗೆ ಬ್ರೇಕ್ ಹಾಕುವರಾರು. ನೂರಾರು ಎಕರೆ ಕೃಷಿ ಭೂಮಿ, ಸೇತುವೆಗಳಿಗೆ ಈ ಮರಳುಗಾರಿಕೆಯಿಂದ ತೊಂದರೆ ಉಂಟಾಗಲಿದೆ. ಇಷ್ಟಿದ್ದು ಜಿಲ್ಲಾಡಳಿತ, ಸ್ಥಳೀಯಾಡಳಿತ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ಹೇಳುತ್ತಿದೆ. ಹೀಗಾದರೆ ಜನ ಸಾಮಾನ್ಯರ ಕೃಷಿಕರ ಭವಣೆ ಆಲಿಸುವವರಾರು.
ಈ ಬಗ್ಗೆ ಆಡಳಿತ ವ್ಯವಸ್ಥೆ ಎಚ್ಚರ ಆಗುವುದು ಒಳಿತು. ಒಂದೊಮ್ಮೆ ನಿರ್ಲಕ್ಷ್ಯ ಮಾಡಿದರೆ ಮುಂದೆ ಉಗ್ರ ಸ್ವರೂಪದ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ರೈತ ಪ್ರತಿನಿಧಿಗಳು ಅಕ್ರಮ, ಅವೈಜ್ಞಾನಿಕ ಮರಳುಗಾರಿಕೆಯ ವಿರುದ್ಧ ಘೋಷಣೆ ಕೂಗಿ, ಸಾಲಿಗ್ರಾಮ ಪ.ಪಂ ಮುಖ್ಯಾಧಿಕಾರಿ ಶಿವ ಎಸ್ ನಾಯ್ಕ್ ರವರಿಗೆ ಮನವಿ ಸಲ್ಲಿಸಿದರು.
ಸಾಲಿಗ್ರಾಮ ಪಟ್ಟನ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಪರಿಸರದ ಸ್ಥಳೀಯ ಸಂಘಟನೆಗಳು, ರೈತರು ಉಪಸ್ಥಿತರಿದ್ದರು.

