ಕರ್ನಾಟಕದ ಬಿಜೆಪಿ ನೂತನ ಸಾರಥಿಯಾಗಿ ಬಿ. ವೈ. ವಿಜಯೇಂದ್ರ ಆಯ್ಕೆ
(BENGALURU) ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ. ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ (BJP National President JP Nadda) ಘೋಷಿಸಿದ್ದಾರೆ.
ಈ ಮೂಲಕ ದೀಪಾವಳಿಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ (BS Yadiyurappa) ಕುಟುಂಬಕ್ಕೆ ದೀಪಾವಳಿ ಗಿಫ್ಟ್ ಅನ್ನು ಹೈಕಮಾಂಡ್ ನೀಡಿದೆ.
ಬಿ. ವೈ. ರಾಘವೇಂದ್ರ ಅವರ ಹೆಸರೂ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿ ಬಂದಿತ್ತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, (Shobha Karandlaje, CT Ravi, Ashwath Narayana,) ಸಿ. ಟಿ. ರವಿ, ಅಶ್ವತ್ಥನಾರಾಯಣ ಸೇರಿದಂತೆ ಹಲವು ಘಟಾನುಘಟಿ ಮುಖಂಡರ ಹೆಸರು ಕೇಳಿ ಬಂದಿತ್ತು. ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿ. ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಬಿ. ಎಸ್. ಯಡಿಯೂರಪ್ಪ ಅವರ ಶಕ್ತಿ ಮತ್ತಷ್ಟು ಬಳಸಿಕೊಳ್ಳುವ ಸಲುವಾಗಿ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೀನಾಯ ಸೋಲು ಅನುಭವಿಸಿದ ಕಾರಣಕ್ಕೆ ಇದುವರೆಗೆ ನೂತನ ರಾಜ್ಯಾಧ್ಯಕ್ಷರ ನೇಮಕ ಮಾಡಿಲ್ಲ.
ಕತ್ತಲೆಯಿಂದ ಬೆಳಕಿನೆಡೆಗೆ ಎಂಬಂತೆ ಬಿಜೆಪಿಯಲ್ಲಿ ವಾತಾವರಣ ನಿರ್ಮಾಣವಾಗಿದೆ. ಬಿ. ವೈ. ವಿಜಯೇಂದ್ರ ಅವರನ್ನು ನೂತನ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿರುವ ಹಿಂದೆ ಹೈಕಮಾಂಡ್ ನ ನಾನಾ ಲೆಕ್ಕಾಚಾರಗಳು ಅಡಗಿವೆ. ಬಿ. ಎಸ್. ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಆಕ್ರೋಶದ ನಡುವೆ ಈಗ ಯಡಿಯೂರಪ್ಪರ ಪುತ್ರನಿಗೆ ಮಣೆ ಹಾಕಲಾಗಿದೆ.
ಬಿ. ವೈ. ವಿಜಯೇಂದ್ರ ಅವರು ಪ್ರಸ್ತುತ ಶಿಕಾರಿಪುರ ಕ್ಷೇತ್ರದ ಶಾಸಕರಾಗಿದ್ದಾರೆ. ಬಿ. ಎಸ್. ಯಡಿಯೂರಪ್ಪ ಅವರು ಸಹ ಶಿಕಾರಿಪುರ ಶಾಸಕರಾಗಿದ್ದಾಗ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಇದೇ ರೀತಿಯಲ್ಲಿ ಪುತ್ರನ ರಾಜಕಾರಣವೂ ಯಶಸ್ವಿ ಆಗಬೇಕೆಂಬ ಅಭಿಲಾಷೆ ಯಡಿಯೂರಪ್ಪ ಅವರದ್ದು.
ಯಡಿಯೂರಪ್ಪರ ಪುತ್ರ ವಿಜಯೇಂದ್ರ ಅವರು ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹಿರಂಗವಾಗಿ ರಾಜಕಾರಣಕ್ಕೆ ಬಂದವರು. ಬಿ. ವೈ. ರಾಘವೇಂದ್ರ ಹಿರಿಯರಾದರೂ ಬಿ. ವೈ. ವಿಜಯೇಂದ್ರ ಅವರಿಗೆ ಬಿಜೆಪಿ ಹೈಕಮಾಂಡ್ ಸಾರಥ್ಯ ನೀಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಯೋಜನೆ ಹಾಕಿಕೊಂಡಿದೆ.
ಬಿ. ವೈ. ವಿಜಯೇಂದ್ರ ನೂತನ ಅಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆಯೇ ಯಡಿಯೂರಪ್ಪರ ಆಪ್ತರಲ್ಲಿ ಖುಷಿ ತಂದಿದೆ. ಮಾತ್ರವಲ್ಲ, ಬಿಜೆಪಿಯಲ್ಲಿ ಮತ್ತೆ ಯಡಿಯೂರಪ್ಪರ ಶಕ್ತಿ ಸಾಬೀತುಪಡಿಸುವ ಕಾಲ ಹತ್ತಿರವಾಗುತ್ತಿದೆ.
ಯಡಿಯೂರಪ್ಪರನ್ನು ನಿರ್ಲಕ್ಷಿಸಿ ಸೋಲು ಕಂಡಿದ್ದ ಬಿಜೆಪಿಯು ಕೊನೆಗೂ ಯಡಿಯೂರಪ್ಪರ ಕುಟುಂಬಕ್ಕೆ ಮಣೆ ಹಾಕಿರುವುದನ್ನು ನೋಡಿದರೆ ಯಡಿಯೂರಪ್ಪರನ್ನು ಬಿಟ್ಟು ಕರ್ನಾಟಕದಲ್ಲಿ ಬಿಜೆಪಿಗೆ ಭವಿಷ್ಯ ಅಷ್ಟು ಸುಲಭವಲ್ಲ ಎಂಬುದನ್ನು ಮತ್ತೆ ಅರಿತಂತಾಗಿದೆ.

