ಮಾಜಿ ಶಾಸಕ ರಘುಪತಿ ಭಟ್ ಪತ್ನಿ ಆತ್ಮಹತ್ಯೆ ಪ್ರಕರಣ- ಆರೋಪಿ ಅತುಲ್ ರಾವ್ಗೆ ಒಂದು ವರ್ಷ ಜೈಲು ಶಿಕ್ಷೆ, ದಂಡ

Udupi: ಉಡುಪಿ: ದಶಕದ ಹಿಂದೆ ನಡೆದ ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಪ್ರಕರಣದಲ್ಲಿ ಆರೋಪಿ ಅತುಲ್ ರಾವ್ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಉಡುಪಿ ನ್ಯಾಯಾಲಯ ಆದೇಶ ನೀಡಿದೆ.
2008ರ ಜೂನ್ 10ರಂದು ಪದ್ಮಪ್ರಿಯ ಕರಂಬಳ್ಳಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಅಂದು ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತ, ಅದೇ ಊರಿನ ಅತುಲ್ ರಾವ್, ಮನೆಯಿಂದ ಪದ್ಮಪ್ರಿಯ ಅವರನ್ನು ಆಕೆಯ ಕಾರಿನಲ್ಲಿ ಕರೆದುಕೊಂಡು ಹೋಗಿ ಕುಂಜಾರುಗಿರಿಯ ದಾರಿ ಮಧ್ಯೆ ಕಾರನ್ನು ಇಟ್ಟು, ಅದರ ಒಳಗೆ ಬಳೆಯ ಚೂರು, ರಕ್ತದ ಕಲೆಗಳನ್ನು ಮಾಡಿ ಅಪಹರಣದ ನಾಟಕ ಮಾಡಿದ್ದರೆಂದು ದೂರಲಾಗಿದೆ.
ಕಾರನ್ನು ಅಲ್ಲೇ ಬಿಟ್ಟು ಅತುಲ್ ತನ್ನ ಕಾರಿನಲ್ಲಿ ಪದ್ಮಪ್ರಿಯ ಅವರನ್ನು ಕುಮಟಾದವರೆಗೆ ಕರೆದು ಹೋಗಿದ್ದನು. ಪದ್ಮಪ್ರಿಯ ಅವರನ್ನು ಗೋವಾ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಬಗ್ಗೆ ರಘುಪತಿ ಭಟ್ 2008ರ ಜೂ. 19ರಂದು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದರಲ್ಲಿ ರಘುಪತಿ ಭಟ್ ನೀಡಿರುವ ದೂರಿನಲ್ಲಿ ತಿಳಿಸಿರುವ ಪದ್ಮಪ್ರಿಯಾಳ ಅಪಹರಣ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ಸಾಕ್ಷ್ಯದ ಕೊರತೆ ಹಿನ್ನೆಲೆಯಲ್ಲಿ ಸಿಓಡಿ ಅಧಿಕಾರಿಗಳು ಕೈಬಿಟ್ಟಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್ JUDGE Yogesh) , ಆರೋಪಿ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಐಪಿಸಿ 468ಕಾಯಿದೆಯಡಿ ಒಂದು ವರ್ಷ ಜೈಲುಶಿಕ್ಷೆ ಮತ್ತು 5000ರೂ. ದಂಡ, ಐಪಿಸಿ 417, 465, 471 ಕಾಯಿದೆಯಡಿ ತಲಾ ಆರು ತಿಂಗಳು ಸಜೆ ಹಾಗೂ 5000ರೂ. ದಂಡ ವಿಧಿಸಿ ಆದೇಶ ನೀಡಿದರು.
ಸಿಓಡಿ ಪರ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಶಿವಪ್ರಸಾದ್ ಆಳ್ವ (Public Prosecutor Shivaprasad Alva) ವಾದ ಮಂಡಿಸಿದ್ದರು.

