ದೈವ ನರ್ತನ ಮಾಡುತ್ತಿದ್ದಾಗ ಹೃದಯಾಘಾತ ; ದೈವ ನರ್ತಕ ಅಶೋಕ್ ಬಂಗೇರ ಮನೆಯಲ್ಲಿ ಸಾವು
ಮಂಗಳೂರು: ದೈವ ನರ್ತನ ಮಾಡುತ್ತಿದ್ದಾಗಲೇ ಎದೆನೋವು ಕಾಣಿಸಿಕೊಂಡಿದ್ದ ದೈವ ನರ್ತಕರೊಬ್ಬರು ಆಸ್ಪತ್ರೆಗೆ ತೆರಳುವಷ್ಟರಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮಂಗಳೂರಿನ ಪ್ರಸಿದ್ಧ ದೈವ ನರ್ತಕರಾದ ಪದವಿನಂಗಡಿ ಗಂಧಕಾಡು ನಿವಾಸಿ ಅಶೋಕ್ ಬಂಗೇರ (47) ಮೃತಪಟ್ಟವರು.
ಶುಕ್ರವಾರ ರಾತ್ರಿ ಹಳೆಯಂಗಡಿ ಸಮೀಪ ರಕ್ತೇಶ್ವರಿ ದೈವದ ವಾರ್ಷಿಕ ಉತ್ಸವದಲ್ಲಿ ದೈವಕ್ಕೆ ನರ್ತನರಾಗಿದ್ದ ಅಶೋಕ್ ಬಂಗೇರ ಅವರಿಗೆ ರಾತ್ರಿ 10.30ರ ವೇಳೆಗೆ ಸಣ್ಣಮಟ್ಟಿನ ಎದೆನೋವು ಕಾಣಿಸಿಕೊಂಡಿತ್ತು. ಅವರು ದೈವದ ವೇಷ ಕಳಚಿಟ್ಟು ಅರ್ಧದಲ್ಲೇ ನರ್ತನ ನಿಲ್ಲಿಸಿದ್ದರು.
ನೇಮ ಕೊನೆಯ ಘಟ್ಟದಲ್ಲಿದ್ದಾಗ ಸುಸ್ತು ಉಂಟಾಗಿದ್ದರಿಂದ ಉತ್ಸವದ ಕೊನೆಯ ಘಟ್ಟವನ್ನು ತಮ್ಮ ನಿರ್ವಹಿಸುತ್ತಾನೆಂದು ಹೇಳಿ ತುರ್ತಾಗಿ ಅಶೋಕ್ ಬಂಗೇರ ಅಲ್ಲಿಂದ ತೆರಳಿದ್ದರು.
ನೇರವಾಗಿ ಆಸ್ಪತ್ರೆಗೆ ತೆರಳುವ ಬದಲು ಬಂಗೇರ ಅವರು ಪದವಿನಂಗಡಿಯ ಮನೆಗೆ ಆಗಮಿಸಿ ರಾತ್ರಿ ಮನೆಯಲ್ಲಿ ಮಲಗಿದ್ದರು.
ಶನಿವಾರ ಬೆಳಗ್ಗೆ ಐದು ಗಂಟೆಯ ವೇಳೆಗೆ ಮತ್ತೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬಿಕರು ತಿಳಿಸಿದ್ದಾರೆ.
ಹಳೆಯಂಗಡಿ ಕೊಳುವೈಲು ರೆಂಜದಡಿ ಕುಟುಂಬಸ್ಥರ ದೈವಸ್ಥಾನದಲ್ಲಿ ಶುಕ್ರವಾರ ರಾತ್ರಿ ರಕೇಶ್ವರಿ ದೈವದ ವಾರ್ಷಿಕ ಉತ್ಸವ ನಡೆದಿತ್ತು. ಕೋಲವನ್ನು ಅರ್ಧಕ್ಕೆ ನಿಲ್ಲಿಸಿದ್ದರಿಂದ ದೈವದ ಕೋಲವನ್ನು ಅಶೋಕ್ ಬಂಗೇರ ಅವರ ತಮ್ಮ ಪೂರ್ಣಗೊಳಿಸಿದ್ದರು.
ಅಶೋಕ್ ಬಂಗೇರ ಅವರು ರಾಜನ್ ದೈವಗಳಿಗೆ ಕೋಲ ಕಟ್ಟುವವರಾಗಿದ್ದು, ಮಂಗಳೂರಿನಲ್ಲಿ ಪ್ರಸಿದ್ದಿ ಪಡೆದಿದ್ದಾರೆ.
ಅಶೋಕ್ ಬಂಗೇರ ಅವರು ಪದವಿನಂಗಡಿ ಕೊರಗಜ್ಜ ಕ್ಷೇತ್ರದ ಪಾತ್ರಿಯಾಗಿದ್ದರು. ಇವರ ಸೋದರ ಭಾಸ್ಕರ ಬಂಗೇರ ಗಂಧಕಾಡುವಿನಲ್ಲಿ ಕೊರಗಜ್ಜ ಕ್ಷೇತ್ರ ನಡೆಸುತ್ತಿದ್ದಾರೆ ಎನ್ನಲಾಗಿದೆ.

