Justice for saujanya ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ‘ಸೌಜನ್ಯ ಕೇಸ್ ರಹಸ್ಯ ಬಿಚ್ಚಿಟ್ಟರೆ ನನ್ನನ್ನು ಕೊಲ್ಲಬಹುದು‘ – ಮಾಜಿ ಸಚಿವ ವಸಂತ ಬಂಗೇರ
ಬೆಳ್ತಂಗಡಿ, ಆ 07: ಸೌಜನ್ಯಾ ಪ್ರಕರಣದ ರಹಸ್ಯ ಬಿಚ್ಚಿಟ್ಟರೆ ನನ್ನನ್ನು ಕೊಲ್ಲಬಹುದು. ಆದರೆ ಆ ರಹಸ್ಯವನ್ನು ನಾನು ಸಾಯೋ ಮೊದಲು ಹೇಳದೇ ಬಿಡೋದಿಲ್ಲ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸೌಜನ್ಯಾ ಪ್ರಕರಣದಲ್ಲಿ ಸೌಜನ್ಯಾ ಪ್ರಕರಣವನ್ನು ಉದ್ದೇಶಪೂರ್ವಕ ದಾರಿ ತಪ್ಪಿಸಲಾಗಿದ್ದು, ಯಾರೆಂದು ನನಗೆ ಗೊತ್ತಿದೆ ಎಂದರು.
ಇನ್ನು ನಾನು ಶಾಸಕನಾಗಿದ್ದಾಗ ಅಧಿವೇಶನದಲ್ಲಿ ಸೌಜನ್ಯಾ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿದ್ದೆ. ಸಿದ್ದರಾಮಯ್ಯನವರು ಕೆಲವರನ್ನು ತುಂಬಾ ಒಳ್ಳೆಯವರು ಎಂದು ನಂಬಿದ್ದರು. ಅಧಿವೇಶನಕ್ಕೂ ಮುನ್ನ ನನ್ನನ್ನು ಕರೆದು, ಇದರ ಪ್ರಸ್ತಾಪ ಮಾಡಬೇಡ, ಪ್ರಕರಣ ಸಿಬಿಐಗೆ ವಹಿಸಲು ಸಾಧ್ಯವಿಲ್ಲ ಎಂದಿದ್ದರು. ಆದರೆ ವಿಧಾನಸಭೆ ಕೊಠಡಿಯಲ್ಲಿ ನಾನು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೆ. ಸೌಜನ್ಯಾ ಮಾತ್ರವಲ್ಲ ಬೆಳ್ತಂಗಡಿಯಲ್ಲಿ ನಡೆದ ಅಮಾನುಷ ಹತ್ಯೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದೆ. ಕೊನೆಗೆ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಸೌಜನ್ಯಾ ಪ್ರಕರಣವನ್ನು ಸಿಬಿಐಗೆ ವಹಿಸ್ತೇನೆ ಎಂದಿದ್ದರು.
ಇನ್ನು ಸಿಬಿಐ ತನಿಖೆಯಲ್ಲಿ ನ್ಯಾಯ ಸಿಗುತ್ತೆ ಎಂಬ ಭಾವನೆ, ನಂಬಿಕೆ ನನಗಿತ್ತು. ಆದರೆ ಸಿಬಿಐ ತನಿಖೆ ಅರ್ಧದಲ್ಲಿರುವಾಗಲೇ ಇದರಲ್ಲಿ ಮೋಸ ಆಗಿದೆ ಎನ್ನೋದು ತಿಳಿದುಬಂತು. ಏನು ಮೋಸ, ಯಾರು ಕಾರಣ ಅಂತ ಅದನ್ನ ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸಂದರ್ಭ ಬಂದಾಗ ಈ ವಿಚಾರ ಹೇಳುತ್ತೇನೆ.
ಸೌಜನ್ಯಾ ಪ್ರಕರಣದ ದಿಕ್ಕು ತಪ್ಪಿಸಿದ್ದು ಯಾರು? ಅನ್ಯಾಯ, ತೊಂದರೆ ಕೊಟ್ಟಿದ್ದು ಯಾರು ಎಂದು ಹೇಳುತ್ತೇನೆ. ಅದಕ್ಕೂ ಮೊದಲು ನನ್ನನ್ನು ಸಾಯಿಸಿದ್ರೂ ಸಾಯಿಸಬಹುದು. ಸಾಯಿಸಲು ಅಷ್ಟು ಸುಲಭ ಇಲ್ಲ. ನಾನೂ ದೈವ ಭಕ್ತ. ಆದರೆ ನಾನು ಸಾಯೋದ್ರೊಳಗೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೊಡಿಸಿಯೇ ಸಿದ್ಧ ಎಂದು ಮಾಜಿ ಶಾಸಕ ವಸಂತ ಬಂಗೇರಾ ಹೇಳಿದ್ದಾರೆ.
ಈ ವಿಷಯ ಈಗ ಕರಾವಳಿಯಲ್ಲಿ ಅತ್ಯಂತ ಚರ್ಚೆಯ ವಿಷಯವಾಗಿದೆ.

