ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಮಾದಕ ವಸ್ತು ವಿರೋಧಿ ದಿನಾಚರಣೆ
(Adamaru) ಅದಮಾರು: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಎನ್ಎಸ್ಎಸ್ ಆಶ್ರಯದಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
ಪಡುಬಿದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಪ್ರಸನ್ನ ಎಂ ಎಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ಮಾದಕ ವಸ್ತು ಸೇವನೆ ವಿದ್ಯಾರ್ಥಿಗಳ ಬಾಳನ್ನೇ ಹಾಳು ಮಾಡುತ್ತದೆ. ಕೆಲವೊಮ್ಮೆ ಮಾದಕ ವಸ್ತು ಮಾರಾಟಗಾರರು ಮಕ್ಕಳ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ದಯವಿಟ್ಟು ಮಾದಕ ವಸ್ತುಗಳಿಗೆ ಬಲಿಯಾಗಬೇಡಿ. ಹಾಗೆಯೇ ತಂಬಾಕು ಉತ್ಪನ್ನ ಗಳನ್ನು ಕೂಡಾ ಸೇವಿಸಬೇಡಿ. ನಿಮ್ಮ ಆರೋಗ್ಯ ಉತ್ತಮವಾಗಿದ್ದರೆ ಮುಂದೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾದಕ ವಸ್ತುಗಳನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುವುದಿಲ್ಲವೆಂಬ ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಪ್ರತಿನಿಧಿ ಪ್ರೊಫೆಸರ್ ನಿತ್ಯಾನಂದರವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನೀವು ಸರಿಯಾಗಿದ್ದರೆ ಜೀವನದ ಕೊನೆತನಕ ಸರಿಯಾಗಿರುತ್ತೀರಿ. ಯಾವುದೇ ಕಾರಣಕ್ಕೂ ದುಷ್ಚಟಗಳಿಗೆ ಬಲಿಯಾಗಬೇಡಿ. ಸ್ನೇಹದ ಹೆಸರಿನಲ್ಲಿ ಮೋಸ ಮಾಡುವವರಿದ್ದಾರೆ. ಅಂತವರಿಂದ ಆದಷ್ಟು ದೂರವಿರಿ ಎಂದರು.
ಕಾಲೇಜಿನ ಪ್ರಾಂಶುಪಾಲ ಸಂಜೀವ್ ನಾಯಕ್, ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್ ರವರು ಉಪಸಿತರಿದ್ದರು.
ಕು. ಸಿರಿ ಸ್ವಾಗತಿಸಿದರು. ನಿತೀಶಾ ಕಾರ್ಯಕ್ರಮ ನೀರೂಪಿಸಿದಳು. ಸಹನ ವಂದಿಸಿದರು.

