ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್
ಮಾ.28ರಂದು ಮಂಗಳೂರು ವಿಶ್ವವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಪ್ರದಾನ
(Mangaluru) ಮಂಗಳೂರು: ಅಕ್ಷರ ಸಂತ ಬಿರುದಾಂಕಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಘೋಷಣೆಯಾಗಿದೆ.
ಹರೇಕಳದ ಪಂಜಿಮಾಡಿ ಎಂಬಲ್ಲಿ ಕುಟ್ಟಿಯಾಕ ಮತ್ತು ಬೀಪಾತುಮ್ಮ ದಂಪತಿಯ ಆರು ಮಂದಿ ಮಕ್ಕಳಲ್ಲಿ ಮೂರನೆಯ ಪುತ್ರನಾಗಿ 1955ರಲ್ಲಿ ಜನಿಸಿದ ಹಾಜಬ್ಬ ಕೇಂದ್ರ ಸರಕಾರ ನಾಲ್ಕನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗುವ ಮೂಲಕ ದೇಶ-ವಿದೇಶಗಳಲ್ಲಿ ಮನೆ ಮಾತಾಗಿದ್ದರು.
ಯಾವುದೇ ಪ್ರಚಾರದ ಹಂಗಿಲ್ಲದೆ ಗುರಿ ಮುಟ್ಟುವ ಛಲದೊಂದಿಗೆ ಮುನ್ನುಗ್ಗಿದುದರ ಪರಿಣಾಮ ಹಾಜಬ್ಬ ಇಂದು ಮತ್ತಷ್ಟು ಎತ್ತರಕ್ಕೇರಿದ್ದಾರೆ. ಹರೇಕಳ ಗ್ರಾಮವನ್ನೂ ಎತ್ತರಕ್ಕೇರಿಸಿದ್ದಾರೆ.
ಬಡತನದಿಂದಾಗಿ ಶಾಲೆಗೆ ಹೋಗಲು ಸಾಧ್ಯವಾಗದ ಹಾಜಬ್ಬ ಮನೆಯಲ್ಲೇ ಬೀಡಿ ಕಟ್ಟಿ ತಂದೆ-ತಾಯಿಗೆ ಸಹಾಯ ಮಾಡತೊಡಗಿದ್ದರು. 1974ರ ಭೀಕರ ನೆರೆ ಹಾವಳಿಗೆ ಪಂಜಿಮಾಡಿಯಲ್ಲಿದ್ದ ಕುಟ್ಟಿಮಾಕರ ಗುಡಿಸಲು ಕೊಚ್ಚಿಹೋಗಿತ್ತು. ಅನಿವಾರ್ಯವಾಗಿ ಈ ಕುಟುಂಬವು ಹರೇಕಳದ ನ್ಯೂಪಸ್ಪುವಿಗೆ ಸ್ಥಳಾಂತರಗೊಂಡು ಸಣ್ಣ ಮನೆ ನಿರ್ಮಿಸಿ ಬದುಕು ಸಾಗಿಸತೊಡಗಿತು. ಅಲ್ಲೂ ಹಾಜಬ್ಬ ಬೀಡಿ ಕಟ್ಟತೊಡಗಿದರು. 1978ರಲ್ಲಿ ಮಂಗಳೂರಿಗೆ ತೆರಳಿ ಬುಟ್ಟಿಯಲ್ಲಿ ಕಿತ್ತಳೆ, ಮೂಸಂಬಿ ಮಾರಾಟ ಮಾಡತೊಡಗಿದರು. ಹಾಗೇ ನ್ಯೂಪಡ್ಡುವಿನಲ್ಲಿ ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರ ಜೊತೆ ಸಂಸಾರ ಸಾಗಿಸಲು ಆರಂಭಿಸಿದ ಹಾಜಬ್ಬ ಮಸೀದಿಯ ಗುರುಗಳಿಗೆ ಮನೆ ಮನೆಯಿಂದ ಊಟ-ಚಹಾ-ತಿಂಡಿಯನ್ನೂ ಕೊಂಡೊಯ್ದು ತುಸು ಸಂಪಾದಿಸತೊಡಗಿದರು.
ಹಾಜಬ್ಬರಿಗೆ ಅಕ್ಷರ ಜ್ಞಾನವಿರಲಿಲ್ಲ. ಹಾಗಂತ ಅವರು ಧೃತಿಗೆಡಲಿಲ್ಲ. ಪ್ರಾಮಾಣಿಕತೆಯು ಹಾಜಬ್ಬರ ಧನಾತ್ಮಕ ಗುಣವಾಗಿತ್ತು. ಹಾಗಾಗಿ ನ್ಯೂಪಸ್ಪುವಿನ ತ್ವಾಹಾ ಜುಮಾ ಮಸೀದಿಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು ಎನ್ನಬಹುದು.
ಅಂದಿನ ಶಾಸಕ ಯು.ಟಿ. ಫರೀದ್, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಕಾರದಿಂದ 1999-2000ನೆ ಶೈಕ್ಷಣಿಕ ವರ್ಷದಲ್ಲಿ ನ್ಯೂಪಡ್ಡುವಿನ ಸರಕಾರಿ ಶಾಲೆಯ ತರಗತಿ ಆರಂಭಿಸಲು ಅನುಮತಿ ಪಡೆದುಕೊಂಡರು. ಆ ಬಳಿಕ ನಡೆದುದೆಲ್ಲವೂ ಇತಿಹಾಸ. ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಅದ್ವಿತೀಯ ಸಾಧನೆಗಾಗಿ ಹಾಜಬ್ಬ ನೂರಾರು ಪ್ರಶಸ್ತಿಗಳಿಗೆ ಭಾಜನರಾಗುತ್ತಾ ದೇಶ-ವಿದೇಶಗಳಲ್ಲಿ ಸುದ್ದಿಯಾದರು.
1999ರಲ್ಲಿ ರವುಲತುಲ್ ಉಲೂಂ ಮದ್ರಸದ ಕಟ್ಟಡದಲ್ಲೇ 28 ಮಕ್ಕಳೊಂದಿಗೆ 1ನೇ ತರಗತಿ ಆರಂಭಿಸಲಾಯಿತು. ಮುಂದಿನ ವರ್ಷ ಎರಡನೇ ತರಗತಿಯನ್ನು ಮದ್ರಸದ ಕಟ್ಟಡದಲ್ಲೇ ಮುಂದುವರಿಸಿದರೂ ಆರ್ಥಿಕ ಸಮಸ್ಯೆ ಎದುರಾಯಿತು. ಅವಿರತ ಪ್ರಯತ್ನದ ಮೂಲಕ ಶಾಸಕರ ಅನುದಾನದ ಜೊತೆಗೆ ದಾನಿಗಳ ನೆರವು ಪಡೆದು ನ್ಯೂಪಡ್ಡುವಿನಲ್ಲಿ ಸಣ್ಣ ಜಾಗ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಿದರು.
ಹಾಜಬ್ಬರಿಗೆ ಪ್ರಥಮ ಬಾರಿಗೆ 2004ರ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. 2004ರಲ್ಲಿ ಅವರು ಕನ್ನಡ ಪ್ರಭ ಪತ್ರಿಕೆಯ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಭಾಜನರಾದರು. ಆ ಬಳಿಕವಂತೂ ಹರೇಕಳರವರು ಹಿಂದೆ ನೋಡಲೇ ಇಲ್ಲ.
ಅಬುಧಾಬಿಯ ಬ್ಯಾರೀಸ್ ವೆಲ್ವೇರ್ ಅಸೋಸಿಯೇಶನ್ ನ ದಶಮಾನೋತ್ಸವದ ಪ್ರಶಸ್ತಿ, ಬಹರೈನ್ ಕನ್ನಡ ಸಂಘದ ವಸಂತೋತ್ಸವ, ಆಳ್ವಾಸ್, ಮೂಲತ್ವ ಪ್ರಶಸ್ತಿ, ಬೆಂಗಳೂರಿನ ಬ್ಯಾರೀಸ್ ವೆಲ್ವೇರ್ ಅಸೋಸಿಯೇಶನ್, ಡಾ. ಪುಟ್ಟರಾಜ ಗವಾಯಿ ಗುರುವಂದನಾ ಪ್ರಶಸ್ತಿ, ಯೆನೆಪೊಯ ಎಕ್ಸಲೆಂಟ್ ಅವಾರ್ಡ್, ಪದ್ಮಶ್ರೀ ಹೀಗೆ ಹಲವಾರು ಪ್ರಶಸ್ತಿಗಳಲ್ಲದೆ ಅಕ್ಷರ ಸಂತ, ಅಕ್ಕರೆಯ ಅವಧೂತ ಸಹಿತ ಹಲವಾರು ಬಿರುದುಗಳೂ ಲಭಿಸಿವೆ.
ಮಂಗಳೂರು ವಿಶ್ವವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವ ಮಾ.28ರಂದು ನಡೆಯಲಿದ್ದು, ಈ ವೇಳೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಇತ್ತೀಚೆಗೆ ನಿಧನರಾದ ಯಕ್ಷಗಾನ ರಂಗದ ದಶಾವತಾರಿ, ತೆಂಕುತಿಟ್ಟಿನ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಹಾಗೂ ದೈವ ನರ್ತಕ ರವೀಶ್ ಪಡುಮಲೆಯವರಿಗೆ ಗೌರವ ಡಾಕ್ಟರೇಟ್ ಲಭಿಸಲಿದೆ.

