ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ: ಸಂಸ್ಕೃತೋತ್ಸವ ಕಾರ್ಯಕ್ರಮ
(Padubidri) ಪಡುಬಿದ್ರಿ :ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕೃತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿ ಅದಮಾರು ಮಠದ ಆದರ್ಶ ಗುರುಕುಲದ ವೇದ ಅಧ್ಯಾಪಕ ಜ್ಞಾನೇಶ್ವರ ಹೆಬ್ಬಾರ್ ಮಾತನಾಡಿ ಸಂಸ್ಕೃತ ಭಾಷೆಯಲ್ಲಿ ಅಗಾಧವಾದ ಜ್ಞಾನ ಸಂಪತ್ತಿದೆ. ಸಂಸ್ಕೃತದಿಂದಲೇ ಎಲ್ಲಾ ಭಾಷೆಗಳು ಹುಟ್ಟಿಕೊಂಡಿವೆ. ಈ ಭಾಷೆಯ ವ್ಯಾಕರಣ ಅತ್ಯಂತ ವೈಜ್ಞಾನಿಕವಾಗಿದೆ. ಇದನ್ನು ತಿಳಿದುಕೊಳ್ಳುವ ಅಗತ್ಯ ನಮಗೆಲ್ಲ ಇದೆ. ಸಂಸ್ಕೃತದಿಂದ ವಂಚಿತರಾದರೆ, ಸಂಸ್ಕೃತಿಯಿಂದ ದೂರ ಸರಿದಂತೆ ಸರಿ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಸದಸ್ಯ ಪ್ರೊ. ನಿತ್ಯಾನಂದ ವಹಿಸಿದ್ದರು.
ಅವರು ಮಾತನಾಡಿ, ಸಂಸ್ಕೃತ ಒಂದು ದೇವ ಭಾಷೆ ಮಾತ್ರವಲ್ಲ ಕಂಪ್ಯೂಟರಿಗೆ ಹತ್ತಿರವಾದ ಭಾಷೆಯೂ ಹೌದು. ಮತ್ತೂರು ಗ್ರಾಮ ಸಂಪೂರ್ಣ ಸಂಸ್ಕೃತ ಗ್ರಾಮವೆಂದೇ ಪ್ರಸಿದ್ಧವಾಗಿದೆ. ಇಂತಹ ವಾತಾವರಣ ಎಲ್ಲೆಡೆ ನಿರ್ಮಾಣವಾಗಬೇಕು ಎಂದರು.
ಸಂಸ್ಕೃತೋತ್ಸವದ ಅಂಗವಾಗಿ ಸ್ತೋತ್ರ ಪಠಣ ವೇದಘೋಷ, ಶಾಸ್ತ್ರೀಯ ಸಂಗೀತ, ಭರತನಾಟ್ಯ ಸಮೂಹ ಗಾಯನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೈಸ್ಕೂಲು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ಸಂಜೀವ್ ನಾಯ್ಕ, ನಿವೃತ್ತ ಪ್ರಾಚಾರ್ಯರಾದ ಬಿ ಆರ್ ನಾಗರತ್ನ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಕಾಂತ್ ರಾವ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಉಪಮುಖ್ಯೋಪಾಧ್ಯಾಯಿನಿ ಶ್ರೀಮತಿ ನಿಶ್ಮಿತಾ ಶೆಟ್ಟಿ, ಸಂಸ್ಕೃತ ಉಪನ್ಯಾಸಕ ಜಯಶಂಕರ ಕಂಗಣ್ಣಾರು ಉಪಸ್ಥಿತರಿದ್ದರು.
ಕು. ಅನ್ವಿತಾ ಸಿರಿ ಸ್ವಾಗತಿಸಿದರು. ವಿಶ್ವೇಶ್ವರಾವ್ ಕಾರ್ಯಕ್ರಮ ನಿರ್ವಹಿಸಿದರು. ಪ್ರದ್ಯುಮ್ನ ಆಚಾರ್ಯ ವಂದಿಸಿದರು.
ಕಾರ್ಯಕ್ರಮವೆಲ್ಲವೂ ಸಂಸ್ಕೃತದಲ್ಲಿ ಮೂಡಿ ಬಂತು.

