ಶಿರ್ವ ಹಿಂದೂ ಪ್ರೌಡ ಪ್ರಾಥಮಿಕ ಶಾಲೆಗೆ ವಿಜ್ಞಾನ ಮತ್ತು ಕಂಪ್ಯೂಟರ್ ಲ್ಯಾಬ್ ಕೊಡುಗೆ
ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಿಲ್ಲದವರೇ ಇಂದು ಬಡವರು: ಡಾ. ಶ್ರೀಧರ ಶೆಟ್ಟಿ
(Shirva) ಶಿರ್ವ: ದೇಶದಲ್ಲಿ ಈಗ ಬಡತನದ ವ್ಯಾಖ್ಯಾನ ಬದಲಾಗಿದ್ದು, ಹೊಟ್ಟೆ ಬಟ್ಟೆಗೆ ಹೆಚ್ಚಿನ ಸಮಸ್ಯೆಯಿಲ್ಲ. ಆದರೆ ಯಾರಿಗೆ ಇಲ್ಲಿ ಗುಣಮಟ್ಟದ ಶಿಕ್ಷಣ ಕೈಗೆಟಕುವುದಿಲ್ಲವೋ ಅವರೇ ಇಂದಿನ ಬಡವರು ಎಂದು ಮುಂಬಯಿ ಬಂಟರ ಸಂಘದ ಎಸ್.ಎಮ್.ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ ಶೆಟ್ಟಿ ಹೇಳಿದರು.
ಮುಂಬಯಿ ನಿವಾಸಿಗಳಾದ ಎಚ್ಡಿಎಫ್ಸಿ ಬ್ಯಾಂಕಿನ ನಿವೃತ್ತ ಸೀನಿಯರ್ ಎಕ್ಸಿಕ್ಯೂಟೀವ್ ವೈಸ್ ಪ್ರೆಸಿಡೆಂಟ್ ಹರೀಶ್ ಶೆಟ್ಟಿ ಹಾಗೂ ಮುಂಬಯಿ ವಿದ್ಯಾವಿಹಾರ್ನ ಕೆ.ಜೆ. ಸೋಮಯ್ಯ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೋ. ಡಾ. ವಿದ್ಯಾ ಶೆಟ್ಟಿ ದಂಪತಿ ತಮ್ಮ ದಿವಂಗತ ಪುತ್ರ ರೋಹಿತ್ ಎಚ್. ಶೆಟ್ಟಿ ಅವರ ಸ್ಮರಣಾರ್ಥ ಶಿರ್ವ ಹಿಂದೂ ಪ್ರೌಢ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಿದ ವಿಜ್ಞಾನ ಮತ್ತು ಕಂಪ್ಯೂಟರ್ ಲ್ಯಾಬ್ನ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೇಶದಲ್ಲಿ ಈಗ ಶಿಕ್ಷಣ ಮತ್ತು ಆರೋಗ್ಯಕ್ಕೆ ನೀಡಬೇಕಾದ ಅರ್ಧದಷ್ಟನ್ನು ಮಾತ್ರಾ ಒದಗಿಸಲಾಗುತ್ತಿದ್ದು, ಉಳಿದಂತೆ ಖಾಸಗಿಯವರ ಸಹಕಾರದಿಂದ ಹೇಗೂ ಸರಿದೂಗಿಸಲಾಗುತ್ತಿದೆ ಎಂದೂ ಡಾ. ಶ್ರೀಧರ ಶೆಟ್ಟಿ ಹೇಳಿದ್ದಾರೆ.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಶೈಕ್ಷಣಿಕ ಸಮಿತಿಯ ಅಧ್ಯಕ್ಷ ಎಸ್. ನಿತ್ಯಾನಂದ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಶತಮಾನ ಕಂಡಿರುವ ಈ ಶಾಲೆಯನ್ನು ಉಳಿಸಿಕೊಳ್ಳಲು ಬಡ ಮಕ್ಕಳ ದತ್ತು ಸ್ವೀಕಾರ ಹಾಗೂ ಸುಮಾರು 50 ಲಕ್ಷ ರೂ ಶಾಶ್ವತ ನಿಧಿ ಸ್ಥಾಪನೆ ಮಾಡುವ ಗುರಿ ಹೊಂದಿದ್ದೇವೆ. ಇಲ್ಲಿ ಶಿಕ್ಷಣ ಪಡೆಯುತ್ತಿರುವ 150 ಬಡ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಗೆ ಅತ್ಯಮೂಲ್ಯ ಕೊಡುಗೆ ನೀಡಿದ ದಂಪತಿಗಳನ್ನು ಸನ್ಮಾನಿಸಲಾಯಿತು.
ಶಾಲಾ ಶೈಕ್ಷಣಿಕ ಸಮಿತಿಗೆ ಚಾಲನೆ ನೀಡಲಾಯಿತು. ಶಾಲಾ ವಿದ್ಯಾರ್ಥಿಳಿಗೆ ದಾನಿಗಳು ಒದಗಿಸಿದ ಶಾಲಾ ಐ.ಡಿ ಕಾರ್ಡ್ ವಿತರಿಸಲಾಯಿತು.
ಶಿರ್ವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿ ಸುಬ್ಬಯ್ಯ ಹೆಗ್ಡೆ ಶುಭ ಹಾರೈಸಿದರು. ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀಪತಿ ಕಾಮತ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕಿರಣ್ ಉಪಸ್ಥಿತರಿದ್ದರು.
ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ. ವೈ ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ಹಿಂದು ಪದವಿಪೂರ್ವ ಕಾಲೇಜಿನ ಶಿಕ್ಷಕಿ ಸುಪ್ರಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ ಶೆಟ್ಟಿ ವಂದಿಸಿದರು.

