ಇನ್ನಾ : ಎಲ್ಲೂರು-ಕಾಸರಗೋಡು 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಫೀಡರ್ ಟವರ್ ನಿರ್ಮಾಣಕ್ಕೆ ವಿರೋಧ
(Padubidri) ಪಡುಬಿದ್ರಿ : ಎಲ್ಲೂರಿನ ಅದಾನಿ ಸ್ಥಾವರದಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಾದು ಕೇರಳದ ಕಾಸರಗೋಡಿಗೆ ಹೋಗಲಿರುವ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಫೀಡರ್ ಆಳವಡಿಕೆಯ ಯೋಜನೆಗಾಗಿ ಇನ್ನಾ ಗ್ರಾಮದ ಅಣ್ಣಾಜಿಗೋಳಿಯಲ್ಲಿ ಜನರ ವಿರೋಧ ಮಧ್ಯೆಯೂ ಭಾರೀ ಪೊಲೀಸ್ ಬಂದೋಬಸ್ತಿನೊಂದಿಗೆ ಟವರ್ ನಿರ್ಮಾಣದ ಕಾಮಗಾರಿ ಬುಧವಾರ ಆರಂಭಿಸಲಾಗಿದೆ.
ಇನ್ನಾ ಗ್ರಾಮದ ಅನ್ನಾಜಿಗೋಳಿಯಲ್ಲಿ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ಗಣಪತಿ ಹೆಗ್ಡೆ ಅವರಿಗೆ ಸೇರಿದ ಜಾಗದಲ್ಲಿ ಟವರ್ ನಿರ್ಮಾಣಕ್ಕಾಗಿ ಜೆಸಿಬಿ ಮೂಲಕ ಹೊಂಡ ಅಗೆದು ಕಾಮಗಾರಿ ಆರಂಭಿಸಿತು. ಕಾಮಗಾರಿ ನಡೆಯುವ ಸ್ಥಳಕ್ಕೆ ಗ್ರಾಮಸ್ಥರು ಪ್ರವೇಶಿಸದಂತೆ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಕಾಮಗಾರಿ ನಡೆಯುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಇನ್ನಾ ಗ್ರಾಮಸ್ಥರು ಮತ್ತು ಜಾಗದ ಮಾಲೀಕರಾದ ಗಣಪತಿ ಹೆಗ್ಡೆಯವರುಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಕಾಮಗಾರಿ ತಡೆಹಿಡಿಯುವಂತೆ ಸ್ಥಳೀಯ ಹೋರಾಟಗಾರರು ಮನವಿ ಮಾಡಿಕೊಂಡರು. ಅದರೆ ಇದಕ್ಕೊಪ್ಪದ ಅಧಿಕಾರಿಗಳು ಯಾವುದೇ ಕಾರಣಕ್ಕೆ ಕೆಲಸ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳೀಯರು ಈ ವೇಳೆ ಅಧಿಕಾರಿಗಳು ಹಾಗೂ ಸ್ಟಾರ್ಲೈಟ್ ಕಂಪೆನಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಕಾರ್ಕಳ ಎಎಸ್ಪಿ ಹರ್ಷ ಪ್ರಿಯಂವದಾ ಬೇಟಿ ನೀಡಿ, ಪ್ರತಿಭಟನಾಕಾರರು ಕಾನೂನು ಕೈಗೆತ್ತಿಕೊಳ್ಳದಂತೆ ವಿನಂತಿಸಿದರು.
ಹೋರಾಟ ಸಮಿತಿಯ ಪ್ರತಿನಿಧಿಗಳು ಹಾಗೂ ಸ್ಥಳೀಯರು ಸ್ಥಳದಿಂದ ತೆರಳಿದ ನಂತರ ಕಾಮಗಾರಿ ಮುಂದುವರಿಯಿತು. ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.
ಕಾರ್ಕಳ ತಹಶೀಲ್ದಾರ್ ಎಸ್.ಎ. ಪ್ರಸಾದ್ ಸ್ಥಳದಲ್ಲಿದ್ದು, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಡುಬಿದ್ರಿ ಎಸ್ಐ ಶಕ್ತಿವೇಲು ಬಂದೋಬಸ್ತ್ ಏರ್ಪಡಿಸಿದ್ದರು.
ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಭೇಟಿ
ಹೋರಾಟ ಸಮಿತಿಯ ಪದಾಧಿಕಾರಿಗಳು ಉಡುಪಿಯಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ.ಕೆ ಯವರನ್ನು ಭೇಟಿಯಾಗಿ ಟವರ್ ನಿರ್ಮಾಣಕ್ಕೆ ವಿರೋಧದ ಬಗ್ಗೆ, ನ್ಯಾಯಾಲಯದ ತಡೆಯ ಬಗ್ಗೆ ವಿವರಿಸಿದರು. ಆದರೆ ಜಿಲ್ಲಾಧಿಕಾರಿಗಳು ಸರ್ಕಾರದ ಆದೇಶದಂತೆ ಕಾಮಗಾರಿ ಪೂರ್ಣಗೊಳಿಸುವುದರಿಂದ ಕಾಮಗಾರಿಗೆ ತಡೆಹಿಡಿಯಲು ನಿರಾಕರಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಹೋರಾಟಗಾರರ ಮಾತುಕತೆ ಯಾವುದೇ ಫಲನೀಡಲಿಲ್ಲ.
ಯೋಜನೆಯ ವಿರುದ್ಧದ ಹೋರಾಟ ಸಮಿತಿಯ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ಕಾಚೂರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಖಾಸಗಿ ಜಾಗದ ಮಾಲೀಕರ ಅನುಮತಿ ಇಲ್ಲದೆ ನೋಟೀಸು ನೀಡದೆ ಏಕಾಏಕಿ ಪ್ರವೇಶಿಸಿ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಈ ಯೋಜನೆಯಿಂದ ನೂರಾರು ಎಕರೆ ಕೃಷಿ ಭೂಮಿ ನಾಶವಾಗಲಿದೆ. ಈ ನಿಟ್ಟಿನಲ್ಲಿ ಕೂಡಲೇ ಜಿಲ್ಲಾಡಳಿತ ಕಾಮಗಾರಿ ನಿಲ್ಲಿಸಬೇಕು. ಮುಂದೆ ಸಂಸದರು, ಶಾಸಕರೊಂದಿಗೆ ಮಾತುಕತೆ ನಡೆಸಲಾಗುವುದು. ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.
