ಈಶ್ವರ್ ಮಲ್ಪೆಯವರಿಗೆ ಫ್ರೆಂಡ್ಸ್ ಗುಂಡ್ಮಿ ಪಂಚಮ ವರ್ಷದ ಕನ್ನಡ ರಾಜ್ಯೋತ್ಸವ ಪುರಸ್ಕಾರ
ಮಾನವೀಯತೆ ಮೊದಲು ಮೈಗೂಡಿಸಿಕೊಳ್ಳಿ- ಈಶ್ವರ್ ಮಲ್ಪೆ
ಕೋಟ: ಜೀವನದಲ್ಲಿ ಬದುಕಿದ್ದಷ್ಟು ದಿನ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಿ. ಆಗ ಬದುಕಿನಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಸಮಾಜಸೇವಕ ಈಶ್ವರ್ ಮಲ್ಪೆ ಹೇಳಿದರು.
ಫ್ರೆಂಡ್ಸ್ ಗುಂಡ್ಮಿ ಇದರ ಪಂಚಮ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪುರಸ್ಕಾರ ಸ್ವೀಕರಿಸಿದ ಈಶ್ವರ್ ಮಲ್ಪೆ ಮಾತನಾಡಿ, ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಿ. ಅದನ್ನು ಬಿಟ್ಟು ಕಷ್ಟ ಬಂತೆಂದರೆ ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಜೀವದ ಜೊತೆ ಚೆಲ್ಲಾಟ ಆಡುವ ವ್ಯವಸ್ಥೆಗೆ ಇಳಿಯದಿರಿ. ಪ್ರಸ್ತುತ ಕಾಲಘಟ್ಟದಲ್ಲಿ ಯುವಕರು ಸೆಲ್ಫಿ ವ್ಯಾಮೋಹದಲ್ಲಿ ತಮ್ಮ ಅಮೂಲ್ಯ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿಯ ಪ್ರಸಂಗ ಉದ್ಭವಿಸದಂತೆ ಪೋಷಕರು ಮಕ್ಕಳಿಗೆ ಕಿವಿಮಾತು ಹೇಳಿ ಎಂದರಲ್ಲದೆ, ಸಮಾಜಸೇವೆಯಲ್ಲೆ ನಾನು ತೃಪ್ತಿ ಕಾಣುತ್ತಿದ್ದೇನೆ. ಇಂಥಹ ಕಾರ್ಯಕ್ಕೆ ಸಮಾಜ ನನ್ನನ್ನು ಗೌರವಿಸುತ್ತಿದೆ. ಇದಕ್ಕೆ ಆಭಾರಿಯಾಗಿದ್ದೇನೆ ಎಂದರು.
ಇದೇ ವೇಳೆ ಸ್ಥಳೀಯ ಕ್ರೀಡಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಅಧ್ಯಕ್ಷತೆಯನ್ನು ಗುಂಡ್ಮಿ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಸತೀಶ್ ಐತಾಳ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಸಾಮಾಜಿಕ ಹೋರಾಟಗಾರ ಪ್ರಕಾಶ್ ಮಲ್ಪೆ, ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ, ನ್ಯಾಯವಾದಿ ಗುಂಡ್ಮಿ ಸುಹಾನ್, ಫ್ರೆಂಡ್ಸ್ ಗುಂಡ್ಮಿ ಅಧ್ಯಕ್ಷ ಶಿವರಾಮ್ ಗುಂಡ್ಮಿ ಉಪಸ್ಥಿತರಿದ್ದರು.
ಸದಸ್ಯೆ ವಿದ್ಯಾ ಸ್ವಾಗತಿಸಿದರು. ಸನ್ಮಾನ ಪತ್ರವನ್ನು ಸಿಂಚನಾ, ಸೌಮ್ಯ ಶ್ರೀಧರ್, ರಾಘವೇಂದ್ರ ಗುಂಡ್ಮಿ, ಶಶಿಕಲಾ ವಾಚಿಸಿದರು.
ಪ್ರವೀಣ್ ಶೆಟ್ಟಿಗಾರ್ ನಿರೂಪಿಸಿದರು. ದೀಪಾ ವಂದಿಸಿದರು.
ಫ್ರೆಂಡ್ಸ್ ಗುಂಡ್ಮಿಯ ಸಂದೀಪ್ ಪೂಜಾರಿ, ಕಾರ್ಯದರ್ಶಿ ಪುನಿತ್ ಪೂಜಾರಿ ಸಹಕರಿಸಿದರು.

