
ಉಚ್ಚಿಲ : ನೆಲದಲ್ಲಿ ಅಡಗಿದ ಬಾವಿ, ಬಾಯ್ದೆರೆದು ಬಲಿಗೆ ಕಾಯುತ್ತಿದೆ
(Uchila) ಉಚ್ಚಿಲ : ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರು ಹೆದ್ದಾರಿ ಅಗಲೀಕರಣದ ಸಂದರ್ಭ ಬೃಹತ್ ಸರಕಾರಿ ನೆಲಸಮವಾಗಿದ್ದು, ಈಗ ಮತ್ತೆ ಆ ಬಾವಿ ಬಾಯ್ದೆರೆದಿದ್ದು, ಬಲಿಗಾಗಿ ಕಾಯುತ್ತಿದೆ.
ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರಿನಲ್ಲಿದ್ದ ಬೃಹತ್ ಬಾವಿಯೊಂದನ್ನು ಮಣ್ಣು, ಉಸುಕು ಹಾಕಿ ಮುಚ್ಚಲಾಗಿತ್ತು. ಹೆದ್ದಾರಿ ಅಗಲೀಕರಣಗೊಂಡು ಸುಮಾರು 6 ವರ್ಷ ಪೂರ್ಣಗೊಂಡಿದೆ. ಬಾವಿಯನ್ನು ಮುಚ್ಚಿದ ಜಾಗ ಈಗ ಸರ್ವಿಸ್ ರಸ್ತೆಯಾಗಿದೆ. ಕಳೆದ ಎರಡು ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ಸರ್ವಿಸ್ ರಸ್ತೆಯಲ್ಲಿ ಮಣ್ಣು ಮುಚ್ಚಲಾದ ಬಾವಿ ಮತ್ತೆ ಬಾಯ್ದೆರೆದಿದೆ.
ಉಚ್ಚಿಲ ನಾಗರೀಕ ಹೋರಾಟ ಸಮಿತಿಯ ಅಧ್ಯಕ್ಷ ಸಿರಾಜ್ ಉಚ್ಚಿಲರವರು ಮತ್ತು ಬದ್ದಿಂಜೆ ಕಾಂಪ್ಲೆಕ್ಸ್ ಮಾಲೀಕರಾದ ದ್ಯುಮಣಿ ಆರ್ ಭಟ್ ರವರು ಟೋಲ್ ಗೇಟ್ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಟೋಲ್ ಗೇಟ್ ತುರ್ತು ನಿರ್ವಹಣಾ ಸಿಬ್ಬಂದಿ ಸುತ್ತಲೂ ಬಾವಿಯ ಸುತ್ತಲೂ, ಪ್ಲಾಸ್ಟಿಕ್ ಬ್ಯಾರಿಕೇಡ್ ಇಟ್ಟು, ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿ ಅಲ್ಲಿಂದ ತೆರಳಿದ್ದಾರೆ.
ರಾ.ಹೆ.ಇಲಾಖೆಯವರು ಯಾವಾಗ ಬಂದು ಬಾಯ್ದೆರೆದ ಬಾವಿಗೆ ಮಣ್ಣು ಹಾಕಿ ಮುಚ್ಚುತ್ತಾರೋ ಎಂದು ಕಾದು ನೋಡಬೇಕಿದೆ.

