ಉಚ್ಚಿಲ : ಪಾದಚಾರಿಗೆ ಬಸ್ಸು ಡಿಕ್ಕಿ ; ಛಿದ್ರಗೊಂಡ ಮೃತದೇಹ
ಅಪಘಾತ ವಲಯ ಆಗಿರುವ ಉಚ್ಚಿಲ ರಾಹೆ 66
(Uchila) ಉಚ್ಚಿಲ : ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಮಸೀದಿ ಬಳಿ ಪಾದಚಾರಿಯೋರ್ವನಿಗೆ ಬಸ್ಸು ಡಿಕ್ಕಿಯಾಗಿ ರಸ್ತೆಗೆ ಎಸೆಯಲ್ಪಟ್ಟು ಆತನ ಮೇಲೆ ಇತರ ವಾಹನಗಳು ಸಂಚರಿಸಿ ಮೃತ ದೇಹವು ಛಿದ್ರ ಸ್ಥಿತಿಯಲ್ಲಿದ್ದ ಘಟನೆ ಮಂಗಳವಾರ ಬೆಳಗಿನ ಜಾವ ಘಟಿಸಿದೆ.
ಮೃತರನ್ನು ಹಾವೇರಿ ಮೂಲದ ಮಂಜುನಾಥ್ (55) ಎಂದು ಗುರುತಿಸಲಾಗಿದೆ.
ಮೃತದೇಹದ ಛಿದ್ರವಾಗಿದ್ದು, ಅಂಗಿಯ ಕಿಸೆಯಲ್ಲಿ ದೊರೆತ ದೂರವಾಣಿ ಸಂಖ್ಯೆ ಗುರುತು ಪತ್ತೆ ಹಚ್ಚಲು ಸಹಕಾರಿಯಾಗಿದೆ.
ಉಚ್ಚಿಲ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿ ದೀಪದ ವ್ಯವಸ್ಥೆ ಇಲ್ಲದಿರುವುದೇ ಈ ಘಟನೆಗೆ ಕಾರಣವಾಗಿದೆ.
ಹೆದ್ದಾರಿಯಲ್ಲಿ ಬ್ಲಿಂಕರ್, ಬಿಳಿ ಗೆರೆಗಳು , ಮತ್ತು ಪಾದಚಾರಿ ನಡೆಯುವ ಗೆರೆಗಳನ್ನೂ ಹಾಕಿಲ್ಲ. ಈ ಎಲ್ಲಾ ಕಾರನಗಳಿಂದ ಅಪಘಾತಗಳು ನಿರಂತರವಾಗಿ ನಡೆಯುತ್ತೆ.
ಒಂದು ತಿಂಗಳಲ್ಲಿ ಮೂವರ ದುರ್ಮರಣ : ಕಳೆದ ೩೦ ದಿನಗಳಲ್ಲಿ ಮೂವರು ಪಾದಚಾರಿಗಳು ದುರ್ಮರಣಕ್ಕೆ ಈಡಾಗಿದ್ದಾರೆ. ಉಚ್ಚಿಲ ಹೃದಯ ಭಾಗದಲ್ಲಿ ಬಡಾ ಗ್ರಾಮದ ಶಿವಣ್ಣ ಬೆಳ್ಚಡ, ಕುಂಜೂರಿನ ಶ್ರೀನಿವಾಸ ಭಟ್ ಮತ್ತು ಮಂಗಳವಾರ ಹಾವೇರಿ ಮೂಲದ ಮಂಜುನಾಥ್‌ರವರು ಸಾವನ್ನಪ್ಪಿದ್ದು, ಉಳಿದಂತೆ ಹತ್ತು ಹಲವು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಎಲ್ಲಾ ಅಪಘಾತಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಟೋಲ್ ಮುಖ್ಯಸ್ಥ, ಅಪಘಾತ ನಡೆಸಿದ ವಾಹನ ಚಾಲಕನ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ಘಟಿಸಿದ ಅಪಘಾತದ ಟೋಲ್ ಮುಖ್ಯಸ್ಥರು ಎಚ್ಚೆತ್ತು ಉಚ್ಚಿಲ ಪೇಟೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ವೇಗ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಹೋರಾಟಕ್ಕೆ ಸಿದ್ಧತೆ : ಉಚ್ಚಿಲ ರಾ.ಹೆ 66 ರಲ್ಲಿ ನಿರತಂತರ ಅಪಘಾತಗಳು ಸಂಭವಿಸುತ್ತಿದ್ದು, ಸೂಕ್ತ ದಾರಿ ದೀಪ ಇಲ್ಲದಿರುವುದು, ರಸ್ತೆ ದಾಟಲು ಝಿಬ್ರಾ ಕ್ರಾಸ್, ಪೇಟೆ ಭಾಗದಲ್ಲಿ ವಾಹನಗಳ ವೇಗ ಮಿತಿಗೆ ವ್ಯವಸ್ಥೆ, ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಉಚ್ಚಿಲ ನಾಗರಿಕ ಹೋರಾಟ ಸಮಿತಿಯು ಬೇಡಿಕೆಯಿರಿಸಿದೆ.
ಹೆದ್ದಾರಿ ಇಲಾಖೆ ಮತ್ತು ಟೋಲ್ ಕೇಂದ್ರದ ಮುಖ್ಯಸ್ಥರು ಇದನ್ನು ಸರಿಪಡಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಸುತ್ತ ಮುತ್ತಲ ಗ್ರಾಮಸ್ಥರನ್ನು ಸೇರಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

