ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್: ತಲವಾರಿನಿಂದ ಯುವಕನ ಕೊಲೆಯತ್ನ
(Udupi) ಉಡುಪಿ: ಉಡುಪಿಯಲ್ಲಿ ಗ್ಯಾಂಗ್ ವಾರ್ ಮಾದರಿಯ ಇನ್ನೊಂದು ಘಟನೆ ಸಂಭವಿಸಿದ್ದು. ಸೆಲೂನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನನ್ನು ತಲವಾರು ಮೂಲಕ ಕೊಲೆಯತ್ನ ನಡೆಸಲು ಯತ್ನಿಸಿದ ಘಟನೆ ನಡೆದಿದೆ.
ಉಡುಪಿಯ ಪುತ್ತೂರಿನ ಸೆಲೂನ್‌ವೊಂದರಲ್ಲಿ ಕೆಲಸ ನಿರ್ವಹಿಸಿಕೊಂಡಿರುವ ಚರಣ್ ಯು (18) ಹಲ್ಲೆಗೊಳಗಾದವರು.
ಸೆಲೂನ್‌ನಲ್ಲಿ ಅವರು ಕೆಲಸ ಮಾಡಿಕೊಂಡಿದ್ದ ವೇಳೆ ಅಭಿಷೇಕ್ ಕಟಪಾಡಿ ಅವರು ಕರೆ ಮಾಡಿ ಶಬರಿ ಎಂಬವನ ಬಗ್ಗೆ ಮಾತನಾಡಬೇಕಾಗಿದೆ. ತಕ್ಷಣ ಉಡುಪಿ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ಬರುವಂತೆ ತಿಳಿಸಿದ್ದಾನೆ. ಅದರಂತೆ ಚರಣ್ ಅವರು ಸುಜನ್ ಎಂಬಾತನ ಬೈಕ್‌ನಲ್ಲಿ ಹೋಗಿದ್ದರು. ಇವರ ಗೆಳೆಯರಾದ ನಾಗರಾಜ್, ಕಾರ್ತಿಕ್, ರಂಜು ಅವರು ಮತ್ತೂಂದು ಸ್ಕೂಟಿಯಲ್ಲಿ ಹೊರಟು ಬಿರಿಯಾನಿ ಪಾಯಿಂಟ್ ಗಿಂತ ಸ್ವಲ್ಪ ಮುಂದೆ ಗೂಡಂಗಡಿ ಬಳಿಗೆ ತೆರಳಿದ್ದರು. ಈ ವೇಳೆ ಪ್ರವೀಣ, ಅಭಿಷೇಕ್ ಕಟಪಾಡಿ, ದೇಶರಾಜ್, ಶಬರಿ ಮತ್ತು ಪರಿಚಯವಿಲ್ಲದ ಮತ್ತಿಬ್ಬರು ಅಲ್ಲಿಯೇ ನಿಂತಿದ್ದ ರಿಕ್ಷಾಕ್ಕೆ ಒರಗಿಕೊಂಡು, ಕೈಯಲ್ಲಿ ತಲವಾರು ಹಿಡಿದುಕೊಂಡು ನಿಂತಿದ್ದರು.
ಚರಣ್ ಮತ್ತು ಆತನ ಗೆಳೆಯರನ್ನು ನೋಡಿದ ತತ್‌ಕ್ಷಣ ಕೊಲ್ಲುವ ಉದ್ದೇಶದಿಂದ ತಲವಾರು ಬೀಸಿದ್ದು, ಬೈಕ್ ಮತ್ತು ಸ್ಕೂಟಿಯನ್ನು ಅಲ್ಲಿಯೇ ಬಿಟ್ಟು ತಪ್ಪಿಸಿಕೊಂಡಿದ್ದಾರೆ. ಅನಂತರ ರಾತ್ರಿ 10 ಗಂಟೆಗೆ ಚರಣ್ ಹಾಗೂ ಸ್ನೇಹಿತರು ಪುನಃ ತಾವು ಬಿಟ್ಟು ಹೋಗಿದ್ದ ಬೈಕ್ ಹಾಗೂ ಸ್ಕೂಟಿಯನ್ನು ಕೊಂಡು ಹೋಗಲು ಹೋದಾಗ ಆರೋಪಿಗಳು ಇವರ ದ್ವಿಚಕ್ರ ವಾಹನವನ್ನು ಹಾನಿಗೊಳಿಸಿ ನಷ್ಟ ಉಂಟು ಮಾಡಿದ್ದಾರೆ.
ಹಳೇ ದ್ವೇಷದಿಂದ ಪ್ರವೀಣ್ ಮತ್ತು ಇತರ 5 ಮಂದಿ ಸೇರಿ ಕೊಲ್ಲುವ ಉದ್ದೇಶದಿಂದ ತಲವಾರಿನಿಂದ ಹಲ್ಲೆ ನಡೆಸಿದ್ದಾಗಿ ನಗರ ಠಾಣೆಯಲ್ಲಿ ಚರಣ್ ದೂರು ದಾಖಲಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಗ್ಯಾಂಗ್ ವಾರ್‌ನ ಇದು ಮೂರನೇ ಘಟನೆಯಾಗಿದ್ದು, ಇತ್ತೀಚೆಗಷ್ಠೇ ಉಡುಪಿಯಲ್ಲಿ ಮತ್ತು ಪಡುಬಿದ್ರಿಯಲ್ಲಿ ಗ್ಯಾಂಗ್ ವಾರ್ ನಡೆದಿತ್ತು. ಉಡುಪಿ ಪೋಲಿಸರು ಈ ಬಗ್ಗೆ ಕಡಕ್ ನಿರ್ಣಯ ತೆಗೆದುಕೊಂಡು ಗೂಂಡಾಗಳನ್ನು ಮಟ್ಟ ಹಾಕಬೇಕಿದೆ.

