ಉಡುಪಿ : ಕೃಷ್ಣಮಠದಲ್ಲಿ ಭಕ್ತಿಶೃದ್ಧೆಯ ಕೃಷ್ಣಾರ್ಘ್ಯ ಪ್ರದಾನ, ವಿಟ್ಲಪಿಂಡಿ

(Udupi) ಉಡುಪಿ: ಉಡುಪಿಯ ಕೃಷ್ಣಮಠದಲ್ಲಿ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಭಕ್ತಿ ಶೃದ್ಧೆಗಳಿಂದ ನಡೆಯಿತು. ಇಲ್ಲಿ ನಡೆಯುವ ಶ್ರಿ ಕೃಷ್ಣ ಜನ್ಮಾಷ್ಟಮಿಯ ಪ್ರಧಾನ ಭಾಗ, ಶ್ರೀ ಕೃಷ್ಣ ಅವತರಿಸುವ ಪುಣ್ಯ ಗಳಿಗೆಯಲ್ಲಿ ನೀಡುವ ಅರ್ಘ್ಯ ಪ್ರದಾನ ಕಾರ್ಯಕ್ರಮವನ್ನು, ಮಧ್ಯರಾತ್ರಿ 12.08 ಗಂಟೆಗೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರಿಪಾದರು ಗರ್ಭಗುಡಿಯಲ್ಲಿ ವಿದ್ಯಕ್ತವಾಗಿ ನೆರವೇರಿಸಿದರು.
ನಂತರ ಹೊರಗೆ ತುಳಸಿಕಟ್ಟೆಯಲ್ಲಿ ಕೃಷ್ಣನ ಅವತಾರದ ಗಳಿಗೆಯನ್ನು ಸೃಷ್ಟಿಸಿದ ಚಂದ್ರನಿಗೆ, ತೆಂಗಿನ ಕಾಯಿಯ ಹೊಳಿನಲ್ಲಿ ಹಾಲಿನ ಅರ್ಘ್ಯವನ್ನು ಪ್ರದಾನ ಮಾಡಿ ಕೃತಜ್ಞತೆ ಸಲ್ಲಿಸಿದರು.
ಬಳಿಕ ದಿನವಿಡೀ ಉಪವಾಸ ವೃತದಲ್ಲಿದ್ದ ಮಠದ ಪ್ರಮುಖರು, ಗಣ್ಯರು ಮತ್ತು ಭಕ್ತರೂ ಅರ್ಘ್ಯ ಪ್ರದಾನ ನಡೆಸಿದರು.
ಇದೇ ಸಂದರ್ಭದಲ್ಲಿ ಶ್ರೀಗಳು ಕೃಷ್ಣನಿಗೆ ಮಹಾಪೂಜೆ, ಮಂಗಳಾರತಿ, ಚಕ್ಕುಲಿ ಉಂಡೆಗಳನ್ನು ಸಮರ್ಪಿಸಿದರು. ಈ ಮೂಲಕ ಶಿಷ್ಟರ ರಕ್ಷೆ ಮತ್ತು ದುಷ್ಟರ ಶಿಕ್ಷೆಗಾಗಿ ಅವತರಿಸಿದ ಕೃಷ್ಣನಿಗೆ ಅಭಿವಂದನೆ ಸಲ್ಲಿಸಿದರು.
ಇಂದು ಮಧ್ಯಾಹ್ನ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ ಅಥವಾ ಮೊಸರುಕುಡಿಕೆ ಉತ್ಸವ – ರಥೋತ್ಸವಕ್ಕೆ ಕ್ಷಣಗಣನೆ ನಡೆಯುತ್ತಿದೆ. ಹುಲಿವೇಷ, ಮರಕಾಲು, ಯಕ್ಷಗಾನ ಇತ್ಯಾದಿ ವೇಷಧಾರಿಗಳು ರಥಬೀದಿಯಲ್ಲಿ ಜನರಿಗೆ ಮನರಂಜನೆ ನೀಡುತ್ತಿದ್ದಾರೆ.
ಮೋಡಕವಿದ ವಾತಾವರಣವಿದ್ದರೂ ಸಾವಿರಾರು ಮಂದಿ ಭಕ್ತರು ಸರದಿಯಲ್ಲಿ ನಿಂತು ಕೃಷ್ಣನ ದರ್ಶನ ಪಡೆಯುತ್ತಿದ್ದಾರೆ. ಮಧ್ಯಾಹ್ನ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಪಲ್ಲಪೂಜೆ ನೆರವೇರಿಸಿದರು.

