ಉಡುಪಿ ಚಿಕ್ಕಮಗಳೂರು ಮತ ಎಣಿಕೆ ಕೇಂದ್ರದ ಸುತ್ತ ವ್ಯಾಪಕ ಬಂದೋಬಸ್ತ್ – ಎಸ್ಪಿ ಡಾ. ಅರುಣ್
(Udupi) ಉಡುಪಿ : ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಮತ ಎಣಿಕೆ ನಾಳೆ (ಮಂಗಳವಾರ) ಬೆಳಿಗ್ಗೆ ಉಡುಪಿ ನಗರದ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ನಡೆಯಲಿದ್ದು, ಈ ಸಂಬಂಧ ವ್ಯಾಪಕ ಬಂದೋಬಸ್ತ್ ಕೈಗೊಂಡಿರುವುದಾಗಿ ಉಡುಪಿ ಎಸ್ಪಿ ಡಾ. ಅರುಣ್ ಕೆ. (Udupi SP Dr Arunkumar) ಹೇಳಿದ್ದಾರೆ.
ಅವರು ಇಂದು ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೌಂಟಿಂಗ್ ಸೆಂಟರ್ ಸುತ್ತ ಭದ್ರತೆಗಾಗಿ ಸುಮಾರು 350 ಪೊಲೀಸರನ್ನು ನಿಯೋಜಿಸಲಾಗಿದೆ. 1 ಕೆಎಸ್ ಆರ್ ಪಿ ಮತ್ತು 1 ಡಿಎಆರ್ ಜೊತೆಗೆ ಒಂದು ಅಗ್ನಿಶಾಮಕ ವಾಹನವು ಸ್ಥಳದಲ್ಲಿ ಕಾರ್ಯಾಚರಿಸಲಿವೆ.
ಬಂದೋಬಸ್ತ್ ಉದ್ದೇಶದಿಂದ ಜಿಲ್ಲೆಯಾದ್ಯಂತ ಸೂಕ್ಷ್ಮ ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಸುಮಾರು 400 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಜೊತೆಗೆ ಜಿಲ್ಲೆಯ ವಿವಿಧೆಡೆ 3 ಕೆಎಸ್ ಆರ್ ಪಿ ಮತ್ತು 3 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.
ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿ ಸಂಪರ್ಕಿಸುವಂತೆ ಎಸ್ಪಿ ಡಾ.ಅರುಣ್ ಕೆ.ಮನವಿ ಮಾಡಿದ್ದಾರೆ.

