ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ಕೇಂದ್ರ ಸರಕಾರ ವಿರುದ್ಧ ಕಾಪುವಿನಲ್ಲಿ ಜಾಥಾ, ಬೃಹತ್ ಪ್ರತಿಭಟನೆ
(Kaup) ಕಾಪು : ಕಾಂಗ್ರೆಸ್ ಪಕ್ಷ ಪಾಲಿಸಿ “ಅನ್ನ” ಪಾಲಿಸಿ, ಬಿಜೆಪಿಯದ್ದು “ಕನ್ನ” ಪಾಲಿಸಿಯಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಪ್ರಮುಖರಾದ ಸುಧೀರ್ ಕುಮಾರ್ ಮುರೋಳಿ ಹೇಳಿದರು.
ಅವರು ಗುರುವಾರ ಕಾಪು ಪೇಟೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ, ಯುವ ಕಾಂಗ್ರೆಸ್ ಕಾಪು ಸಮಿತಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಹಾಗೂ ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಇದರ ಸಹಯೋಗದೊಂದಿಗೆ ಕೇಂದ್ರ ಬಿಜೆಪಿ ಸರಕಾರದ ಬೆಲೆ ಏರಿಕೆ, ವಕ್ಫ್ ಕಾಯ್ದೆ, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪತ್ರಿಕೆಯ ನೆಪದಲ್ಲಿ ಇಡಿ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿ ರಾಷ್ಟ್ರೀಯ ನಾಯಕರ ವಿರುದ್ಧ ಪ್ರಕರಣ ದಾಖಲಿಸಲು ಪ್ರಯತ್ನಿಸುತ್ತಿರುವುದರ ವಿರುದ್ಧ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
2012ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭ ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಗಡಿ, ಸೈನ್ಯ, ಗುಪ್ತಚರ ಇಲಾಖೆ ನಿಮ್ಮ ಕೈಯಲ್ಲಿದೆ. ಭಯೋತ್ಪಾದಕರಿಗೆ ಶಸ್ತ್ರ, ಹೇಗೆ ನುಸುಳುತ್ತಾರೆ ಪ್ರಶ್ನಿಸಿದ್ದರು. ಇಂದು ಮೋದಿಯವರು ಅಧಿಕಾರದಲ್ಲಿದ್ದು 12 ವರ್ಷವಾಗಿದೆ 28 ಜನ ಪಹಲ್ಗಾಮ್ ನಲ್ಲಿ ಹೇಗೆ ಬಲಿಯಾದರು ಎಂಬುದನ್ನು ಪ್ರಶ್ನಿಸಬೇಕಾಗಿದೆ ಎಂದು ಎಂದು ಮರೋಳಿ ಪ್ರಶ್ನಿಸಿದ್ದಾರೆ.
ಕೇಂದ್ರ ನಾಯಕರೊಂದಿಗೆ ನೇರವಾಗಿ ಮಾತನಾಡಲು ಭಯಪಡುವ ರಾಜ್ಯ ಬಿಜೆಪಿ ನಾಯಕರು ಕೆಂದ್ರದ ಬೆಲೆ ಏರಿಕೆಯನ್ನು ಜನಾಭಿಪ್ರಾಯ ನೆನಪಿಸಿಕೊಂಡು ಮಾಡಿದ ಜನಾಕ್ರೋಶ ಪ್ರತಿಭಟನೆಗೆ ಅಭಿನಂದನೆ ಹೇಳಲೇಬೇಕು ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕೊರೊನಾದ ನಂತರ ಎಲ್ಲಾ ಸಬ್ಸಿಡಿ ತೆಗೆದು, ಬೆಲೆ ಏರಿಕೆ ಮಾಡಿದೆ. ಕೊಟ್ಟ ಆಶ್ವಾಸನೆಯನ್ನೇ ಕೇಂದ್ರ ಸರಕಾರ ಮರೆತಿದೆ. ಜಿಎಸ್ಟಿ ಕಾನೂನು ತಂದು ಜನಸಾಮಾನ್ಯರ ರಕ್ತ ಹೀರುವ ಕಾರ್ಯವಾಗಿದೆ. ಕರ್ನಾಟಕ ನಾಲ್ಕುವರೆ ಲಕ್ಷ ಕೋಟಿ ಜಿಎಸ್ಟಿ ವಸೂಲಿ ಮಾಡಿ ಕೇಂದ್ರಕ್ಕೆ ನೀಡಿದರೂ, ನಮಗೆ 50 ಸಾವಿರ ಕೋಟಿ ಕೊಡುವುದಿಲ್ಲ. ಇಲ್ಲಿಂದ ಸಂಗ್ರಹಿಸಿದ ಹಣವನ್ನು ಬಿಜೆಪಿ ಆಡಳಿತದ ರಾಜ್ಯಗಳಿಗೆ ನೀಡಲಾಗುತ್ತಿದೆ ಎಂದರು.
ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಬೆಲೆ ಏರಿಕೆಯೇ ಬಿಜೆಪಿಯಿಂದ ಜನಸಾಮಾನ್ಯರಿಗೆ ಕೊಡುಗೆಯಾಗಿದೆ. ಈ ಅನ್ಯಾಯದ ವಿರುದ್ಧ ರಾಜ್ಯದ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿ ನೀಡಿದೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ರೆ.ಫಾ. ವಿಲಿಯಂ ಮಾರ್ಟಿಸ್, ಪ್ರಸಾದ್ ರಾಜ್ ಕಾಂಚನ್, ವಿಕ್ರಂ ಕಾಪು, ಎಂ.ಎ. ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಶಾಂತಲತಾ ಶೆಟ್ಟಿ, ದಿನೇಶ್ ಹೆಗ್ಡೆ, ಹರೀಶ್ ಕಿಣಿ, ಶರ್ಫುದ್ದೀನ್ ಶೇಖ್, ಕಾಪು ಹರೀಶ್ ನಾಯಕ್, ಕರುಣಾಕರ ಪೂಜಾರಿ ಪಡುಬಿದ್ರಿ, ನವೀನ್ ಎನ್ ಶೆಟ್ಟಿ, ರಮೀಝ್ ಹುಸೇನ್, ಶಿವಾಜಿ ಸುವರ್ಣ, ನಿಯಾಝ್, ಶೇಖರ ಹೆಜ್ಮಾಡಿ, ವೈ ಸುಕುಮಾರ್, ಕಾಂಗ್ರೆಸ್‌ನ ಹತ್ತು ಬ್ಲಾಕ್ ಗಳ ಅಧ್ಯಕ್ಷರು, ಪಕ್ಷದ ವಿವಿಧ ಘಟಕಗಳ ಪ್ರಮುಖರು ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಗೂ ಮುನ್ನ ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಳದ ವಠಾರದಿಂದ ಕಾಪು ಪೇಟೆಯವರೆಗೆ ಜಾಥಾ ನಡೆಯಿತು.
ಸಭಾ ಕಾರ್ಯಕ್ರಮದ ಮೊದಲು ಪಹಲ್ಗಾಮ್ ಮೃತರಿಗೆ ಮತ್ತು ಕ್ರಿಶ್ಚಿಯನ್ ಪರಮೋಚ್ಛ ಗುರು ಪೋಪ್ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
