ಎ.26 :ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬೃಹತ್ ಹೊರೆಕಾಣಿಕೆ
ಹೊರೆಕಾಣಿಕೆಗೆ ಚಾಲನೆ ನೀಡಲಿರುವ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರಕುಮಾರ್
(Padubidri)ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಅನ್ನದಾನಕ್ಕೆ ನೀಡಲ್ಪಡುವ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆಯು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ, ಪಡುಬಿದ್ರಿ ಗುಂಡ್ಲಾಡಿ ಕಟ್ಟೆಯಿಂದ ಎ.26, ಆದಿತ್ಯವಾರ ಸಂಜೆ 3.30ಕ್ಕೆ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಹೊರೆ ಕಾಣಿಕೆ ಸಮಿತಿ ಪ್ರಧಾನ ಸಂಚಾಲಕರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದರು.
ಅವರು ಪಡುಬಿದ್ರಿ ಬಂಟರ ಸಂಘದಲ್ಲಿ ಶನಿವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಡುಬಿದ್ರಿ ಸಹಿತ ಕಾಪು ಕ್ಷೇತ್ರದ ಪ್ರತಿ ಗ್ರಾಮಗಳಿಂದ, ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಬೈಂದೂರು, ಕುಂದಾಪುರ, ಪೆರ್ಡೂರು, ಹಿರಿಯಡ್ಕ, ದ.ಕ ಜಿಲ್ಲೆಯ ವಿವಿದೆಡೆ ಹೊರೆ ಕಾಣಿಕೆಯ ಪೂರ್ವಭಾವಿ ಸಭೆ ಜರಗಿದ್ದು ಅಲ್ಲಿಂದಲೂ ಬರಲಿದೆ.
ಡಾ. ಮೋಹನ್ ಆಳ್ವ ನೇತೃತ್ವದಲ್ಲಿ ಮೂಡುಬಿದಿರೆಯ ಭಾಗದಿಂದ, ರಾಜ್ಯ ಕಂಬಳ ಅಸೋಸಿಯೇಶನ್ ಮೂಲಕ ಕಂಬಳದ ವ್ಯವಸ್ಥಾಪಕರು, ಕೋಣದ ಯಜಮಾನರು ಹೊರೆಕಾಣಿಕೆ ನೀಡುವ ಭರವಸೆ ನೀಡಿದ್ದಾರೆ. ಕಾಪು ಹೊಸ ಮಾರಿಗುಡಿಯಿಂದ 99 ವಾಹನಗಳೊಂದಿಗೆ, ಡಾ. ಜಿ.ಶಂಕರ್ ನೇತೃತ್ವದ ಮೊಗವೀರ ಮಹಾಜನ ಸಂಘ ಮತ್ತು ಉಚ್ಚಿಲ ಮಹಾಲಕ್ಷ್ಮೀ ಸನ್ನಿಧಾನದಿಂದ 100 ವಾಹನಗಳಲ್ಲಿ ಹೊರೆಕಾಣಿಕೆ, ಬಿಲ್ಲವರ ಯುವ ಬಳಗದಿಂದ 1200ಕ್ಕೂ ಮಿಕ್ಕಿ ಅಕ್ಕಿ ಚೀಲಗಳು, ಅವಿಭಜಿತ ದ.ಕ. ಜಿಲ್ಲೆಯ ಎಲ್ಲಾ ಬಂಟರ ಸಂಘಗಳಿಂದ ಹಾಗೂ ವಿವಿಧ ಸಂಘಗಳಿಂದ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರಿಂದ ಸನ್ನಿಧಾನಕ್ಕೆ ಹೊರೆಕಾಣಿಕೆ ಬರಲಿದೆಂದರು.
ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪುತ್ತಿಗೆ ಮಠ ಇವರಿಂದ ಸುಮಾರು 7 ಲಕ್ಷ ವೆಚ್ಚದ 17 ಟನ್ ಅಕ್ಕಿ ನೀಡುವ ಭರವಸೆ ನೀಡಿದ್ದಾರೆ.
ಭವ್ಯ ಹೊರೆಕಾಣಿಕೆ ಚಾಲನೆ ಕಾರ್ಯಕ್ರಮದಲ್ಲಿ ಮೊಗವೀರ ಮುಂದಾಳು, ಕೊಡುಗೈ ದಾನಿ ಡಾ. ಜಿ. ಶಂಕರ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ. ಮೋಹನ್ ಆಳ್ವ, ಅಖಿಲಭಾರತ ಬಿಲ್ಲವ ಮಹಾ ಮಂಡಳದ ಸೂರ್ಯಕಾಂತ ಜಯ ಸುವರ್ಣ, ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ದ. ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಅಖಿಲಭಾರತ ಬಿಲ್ಲವರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ ಡಿ. ಸುವರ್ಣ, ಜಿ.ಎಸ್. ಬಿ ಸಮಾಜದ ಮುಂದಾಳು ಮಂಗಳೂರು ವೆಂಕಟರಮಣ ದೇವಸ್ಥಾನದ ಮುಮೊಕ್ತೇಸರರಾದ ಸಾಹುಕರ ಕಿರಣ್ ಪೈ, ಧಾರ್ಮಿಕ ಮುಖಂಡ ವಿಶ್ವ ಹಿಂದೂಪರಿಷತ್ ನ ಪ್ರಮುಖರಾದ ಎಂ.ಬಿ. ಪುರಾಣಿಕ್, ಅವಿಭಜಿತ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಮಧು ಆಚಾರ್ಯ, ಅವಿಭಜಿತ ಪದ್ಮಶಾಲಿ ಸಮಾಜದ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ, ಕಟ್ಟೋರು ಮಾಲ್ತಿದೇವಿ ದೇವಸ್ಥಾನದ ಮೊಕ್ತೇಸರರಾದ ಗೋಕುಲದಾಸ್, ಭಂಡಾರಿ ಮಹಾ ಮಂಡಳದ ಮಾಜಿ ಅಧ್ಯಕ್ಷರಾದ ಸದಾಶಿವ ಭಂಡಾರಿ ಸಕಲೇಶಪುರ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಪಾಣಾರ ಸಮಾಜದ ಜಿಲ್ಲಾಧ್ಯಕ್ಷರಾದ ಪಾಂಡು ಪಾಣಾರ ಹಿರಿಯಡ್ಕ, ತುಳು ಅಕಾಡೆಮಿ ಮಾಜಿ ಅಧ್ಯಕ್ಷರಾದ ದಯಾನಂದ ಕತ್ತಲ್ಸಾರ್, ಮುಗ್ಗೆರ್ಕಳ ಸಮಾಜದ ಅಧ್ಯಕ್ಷರಾದ ವಿಠಲ ಗುರಿಕಾರ, ಮರಾಠ ಕ್ಷತ್ರಿಯ ಸಮಾಜದ ಜಿಲ್ಲಾಧ್ಯಕ್ಷರಾದ ಪ್ರಕಾಶ್ ರಾವ್ ಭಾಗವಹಿಸಲಿದ್ದಾರೆ.
ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಅನುವಂಶಿಕ ಆಡಳಿತ ಮೊಕ್ತಸರರಾದ ಕಿನ್ಯಕ್ಕರಾಜ್ ರತ್ನಾಕರ ರಾಜ್ ಅರಸರು ಪಡುಬಿದ್ರಿ ಬೀಡು, ಪೇಟೆಮನೆ ಭವಾನಿ ಶಂಕರ ಹೆಗ್ಡೆ, ಶ್ರೀಪತಿ ಕೊರ್ನಯ ಸಹಿತ ಅನೇಕ ಗಣ್ಯಾತಿಗಣ್ಯರು ಉಪಸ್ಥಿತಿಯಿರಲಿದ್ದಾರೆ.
ಹಸಿರು ಹೊರೆಕಾಣಿಕೆಯಲ್ಲಿ ಮಂಗಳೂರು ಕಡೆಯಿಂದ ಬರುವ ವಾಹನಗಳು ಎರ್ಮಾಳು ಮಸೀದಿ ಬಳಿಯಾಗಿ ತಿರುಗಿ, ಎರ್ಮಾಳು ನರಳ್ತಾಯ ದೈವಸ್ಥಾನದ ಬಳಿಯಿಂದ ಸಾಲಾಗಿ ನಿಲ್ಲುವುದು. ಉಡುಪಿ ಕಡೆಯಿಂದ ಬರುವ ವಾಹನಗಳು ಜನಾರ್ಧನ ದೇವಸ್ಥಾನದ ಬಳಿಯಿಂದ ಉಚ್ಚಿಲದವರೆಗೆ ಏಕಮುಖವಾಗಿ ನಿಲ್ಲುವುದು. ಸುಮಾರು 1000 ವಾಹನ 10 ಸಾವಿರಕ್ಕೂ ಮಿಕ್ಕಿ ಭಗವದ್ಭಕ್ತರ ಸಂಗಮವಾಗಲಿದೆ. ಮೆರವಣಿಗೆಯಲ್ಲಿ ಕುಣಿತ ಭಜನಾ ತಂಡ, ಟ್ಯಾಬ್ಲೋಗಳು, ವಿಶೇಷ ಬಿರುದಾವಳಿಗಳು, ತಾಲೀಮುಗಳು ಇರಲಿವೆ ಎಂದರು.
ದ.ಕ. ಜಿಲ್ಲೆಯ ಸಂಚಾಲಕರಾದ ಚಂದ್ರಹಾಸ ಶೆಟ್ಟಿ ಬಂಟ್ವಾಳ ಮಾತನಾಡಿ, ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ, ಮಂಗಳೂರು, ಬಂಟ್ವಾಳ, ಸುರತ್ಕಲ್, ಉಳ್ಳಾಲ, ಬೆಳ್ತಂಗಡಿ, ಪುತ್ತೂರು ಭಾಗದಿಂದ ಕೂಡಾ ಹೊರೆಕಾಣಿಕೆ ಸಮರ್ಪಣೆಗೆ ಸಿದ್ಧತೆಗಳು ನಡೆದಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೊರೆ ಕಾಣಿಕೆ ಸಂಚಾಲಕರಾದ ದಯಾನಂದ ಹೆಜ್ಮಾಡಿ, ಗೀತಾಂಜಲಿ ಸುವರ್ಣ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ರವಿ ಶೆಟ್ಟಿ ಗುಂಡ್ಲಾಡಿ, ಧನಪಾಲ್ ಶೆಟ್ಟಿ, ಹರೀಶ್ ಕೆ. ಶೆಟ್ಟಿ ಉಪಸ್ಥಿತರಿದ್ದರು.

