ಓಟಿಗೋಸ್ಕರ ಧರ್ಮ, ದೇವರನ್ನು ನಾವು ಬಳಕೆ ಮಾಡಲ್ಲ : ಮಾಜಿ ಸಚಿವ ಸೊರಕೆ
ಕಾಪು ಬಿಜೆಪಿ ಧರ್ಮ ರಾಜಕೀಯಕ್ಕೆ ವಿನಯಕುಮಾರ್ ಸೊರಕೆ ಕೌಂಟರ್
(Kaup) ಕಾಪು : ನಾನು ಓಟಿಗೋಸ್ಕರ ಧರ್ಮ ದೇವರನ್ನು ಯಾವತ್ತೂ ಬಳಕೆ ಮಾಡಲ್ಲ. ಮಾಡಿಲ್ಲ. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ದೇವರ ಪ್ರಮಾಣ ಮಾಡಿಲ್ಲ ಎಂದು ಹೇಳಿದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು, ಕಳೆದ ವಾರ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಕಾಪು ಹೊಸ ಮಾರಿಗುಡಿ ಮತ್ತು ಕಟಪಾಡಿ ಪೇಟೆ ಬೆಟ್ಟುವಿನಲ್ಲಿ ಮಾಡಿದ ಸಾಮೂಹಿಕ ಪ್ರಾರ್ಥನೆಗೆ ಕೌಂಟರ್ ಕೊಟ್ಟಿದ್ದಾರೆ.
ಅವರು ಕಾಪುವಿನಲ್ಲಿ ಮಾಜಿ – ಹಾಲಿ ಶಾಸಕರ ವಾಗ್ಯುದ್ಧದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ನಮ್ಮ ಬಳಿ ಸೂಕ್ತ ದಾಖಲೆಗಳಿವೆ. ಇದಕ್ಕೆ ಹೆದರಿ ಕಾಪುವಿನ ಶಾಸಕ ಸುರೇಶ್ ಶೆಟ್ಟಿ ಗುರ್ಮೆಯವರು ಪ್ರಾರ್ಥಿಸಿದ್ದಾರೆಯೇ ಹೊರತು ಪ್ರಮಾಣ ಮಾಡಿಲ್ಲ. ಈಗ ಅಸಹಾಯಕರಾಗಿ ದೇವರ ಮೊರೆ ಹೋಗಿದ್ದಾರೆ ಎಂದು ಕಟಕಿಯಾಡಿದ್ದಾರೆ.
10 ವರ್ಷದಿಂದ ನನ್ನ ಮಗ ಊರಲ್ಲೇ ಇರಲಿಲ್ಲ ಎನ್ನುವ ಶಾಸಕರು, ಚುನಾವಣೆ ಸಂದರ್ಭ ಮನೆ ಮನೆಗೆ ದುಡ್ಡು ಹಂಚಿದವರು ಯಾರು? ನಮ್ಮಲ್ಲಿ ಅವರ ವ್ಯಾಪಾರ ವ್ಯವಹಾರದ ಜಿ ಎಸ್ ಟಿ ಕಟ್ಟಿದ ಬಿಲ್ಲು, ಕಂಪನಿ ವ್ಯವಹಾರ ಇತ್ಯಾದಿಗಳ ಬಗ್ಗೆ ದಾಖಲೆಗಳಿವೆ. ನಾವು ಯಾವುದೇ ಪೂಜೆ ಮಾಡಿದರೂ ಊರೆಲ್ಲ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ನಾವು ಬಿಜೆಪಿಗರ, ಶಾಸಕರ ಬಗ್ಗೆ ಆರೋಪ ಮಾಡಿಲ್ಲ. ಈ ಬಗ್ಗೆ ಮಾಧ್ಯಮಗಳ ಮುಖಾಂತರ ವಸ್ತು ಸ್ಥಿತಿ, ಸತ್ಯಾಂಶಗಳನ್ನು ನೀಡಿದ್ದೇವೆ. ಬಿಜೆಪಿಗರು11. 5 ಎಕರೆ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ. ಷರತ್ತಿನ ಪ್ರಕಾರ ಅತಿಕ್ರಮಣ ಮಾಡಿದರೆ ಆ ಜಾಗ ರದ್ಧಾಗುತ್ತದೆ. ಇದು ಅಪರಾಧ. ಯೋಜನಾ ಇಲಾಖೆಯಿಂದ ಕಂಬಳ ಸಮಿತಿಗೆ ಜಾಗ ವರ್ಗಾವಣೆಯಾಗಿಲ್ಲ ಎಂದು ಅಧಿಕಾರಿಯೇ ಕೇಸು ದಾಖಲಿಸಿದ್ದಾರೆ. 144 ಸೆಕ್ಷನ್ ಉಲ್ಲಂಘನೆ ಬಗ್ಗೆ ತಹಶಿಲ್ದಾರರು ಕೇಸು ದಾಖಲಿಸಿದ್ದಾರೆ.
82-83 ರಲ್ಲಿ ಎನ್ ಸಿ ಆರ್ ಆದವರಿಗೆ 93 ರಲ್ಲಿ ಮಂಜೂರಾದ ಜಾಗ ಅದು. ಅಲ್ಲಿಯ ಜನತೆ ಗೇರು, ತೆಂಗು, ಅಡಿಕೆ, ತರಕಾರಿ ಮಾಡುತ್ತಿದ್ದರು.
ಶಾಸಕರು 60 ಲಕ್ಷ ಖರ್ಚಾಗಿದೆ ಎನ್ನುತ್ತಾರೆ. ಆ ಜಾಗದಲ್ಲಿ ರಕ್ತೇಶ್ವರಿ ಕಟ್ಟೆಯಿತ್ತು. ಅದನ್ನು ಒಡೆದು, ಹುತ್ತಗಳಿಗೆ ಬೆಂಕಿ ನೀಡಿ, ಸಾಗುವಾಣಿ ಮರಗಳನ್ನು ಸಾಗಿಸಲಾಗಿದೆ. ತನಿಖೆಗೆ ಹೋದ ಪೋಲಿಸ್ ಅಧಿಕಾರಿಗೂ ಆ ಜಾಗದಲ್ಲಿ ಶಕ್ತಿಯ ಜೊತೆಗೆ ಹಾವುಗಳು ಹರಿದಾಡುತ್ತಿದ್ದ ಬಗ್ಗೆ ಗೋಚರವಾಗಿದೆ.
ಗುಡ್ಡೆಯಲ್ಲಿ ಕಂಬಳ ಮಾಡಲು ಹೊರಟ್ಟಿದ್ದಾರೆ. ಅಗೆದ ಮಣ್ಣಿನಿಂದ ಮಳೆಗಾಲದಲ್ಲಿ ಮನೆ, ಕೃಷಿ ಭೂಮಿಗೂ ಹಾನಿ ಸಾಧ್ಯತೆಯಿದೆ. ನನ್ನ ಮೇಲೆ ಗೂಬೆ ಕೂರಿಸುವ ಯತ್ನ ನಡೆಯುತ್ತಿದೆ ಎಂದೂ ಸೊರಕೆ ಪ್ರತಿಕ್ರಿಯೆ ನೀಡಿದರು
ಕಾಪು ಶಾಸಕರು ಪರೀಕದಲ್ಲಿ ಶ್ರೀನಿವಾಸ ದೇವಳದ ರಸ್ತೆಗೆ, ಪೆರ್ಣಂಕಿಲ ದೇವಳದ ರಸ್ತೆಗೆ, ಕುಕ್ಕೆಹಳ್ಳಿಯ ರಥ ಬೀದಿಯ ಕೆಲಸಕ್ಕೆ, ಅಭಿವೃದ್ಧಿ ಯೋಜನೆಗಳಿಗೆ ತಕರಾರು ಮಾಡಿದ್ದಾರೆ.
ಇಎಸ್ಪಿಆರ್ ಎಲ್ ಕಂಪನಿಗಾಗಿ ತಮ್ಮ ಜಾಗ ತ್ಯಾಗ ಮಾಡಿದ ಕಾಪುವಿನ ಮಜೂರು ಪರಿಸರದ ಜನರಿಗೆ ಉದ್ಯೋಗ ಕೇಳುವ ಹಕ್ಕಿಲ್ಲವೇ ? ಅಲ್ಲಿಯ ಜನರ ಆಶೋತ್ತರಗಳನ್ನು ನಾವು ಪರಿಹರಿಸಿದ್ದೇವೆ.
ಈ ಸಂದರ್ಭ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

