ಪಾಣೆಮಂಗಳೂರು : ರಸ್ತೆ ಅಪಘಾತಕ್ಕೆ ಛಾಯಾಗ್ರಾಹಕ ಬಲಿ
ಮಗಳ ಹುಟ್ಟುಹಬ್ಬದ ಸಂಭ್ರಮಕ್ಕೆ ಆವರಿಸಿದ ಸೂತಕ
(Bantala) ಬಂಟ್ವಾಳ: ಭಾನುವಾರ (ಮಾ15 )ದಂದು ಮಗಳ ಹತ್ತನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಕ್ಕೆ ಸಿದ್ಧತೆ ನಡೆಯಬೇಕಿದ್ದ ಮನೆಯಲ್ಲಿ, ಶನಿವಾರ ತಂದೆಯ ಶವದ ಮುಂದೆ ಪತ್ನಿ,ಮಗಳ ಹಾಗೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಬಂಟ್ವಾಳದ ಪ್ರತಿಭಾವಂತ ಛಾಯಾಗ್ರಾಹಕ, ಪಾಣೆಮಂಗಳೂರು ಸಮೀಪದ ನಾಟಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ರಕ್ಷಿತ್ ಶೆಟ್ಟಿ (43) ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬೈಕ್ ಗಳ ಮಧ್ಯೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ರಕ್ಷಿತ್ ಶೆಟ್ಟಿ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂಧಿಸದೆ ಶನಿವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ಸಂಭ್ರಮದ ಹೊಸ್ತಿಲಲ್ಲಿ ಸೂತಕ:
ಭಾನುವಾರ ಮಗಳ ಸಂಭ್ರಮದ ದಿನಕ್ಕಾಗಿ ತಂದೆ ರಕ್ಷಿತ್ ಅವರು ಸಿದ್ದತೆ ಮಾಡಿಕೊಂಡಿದ್ದರು. ಆದರೆ ಆ ಸಂಭ್ರಮದ ಕ್ಷಣಗಳು ಹತ್ತಿರ ಬರುವ ಮೊದಲೇ ಸಾವು ಇವರನ್ನು ಹಿಂಬಾಲಿಸಿಕೊಂಡು ಬಂದಿದೆ. ಮಗಳ ಬದುಕಿನಲ್ಲಿ ಬೆಳಕು ತುಂಬಬೇಕಿದ್ದ ತಂದೆ, ಈಗ ವಿಧಿಯಾಟಕ್ಕೆ ಮರೆಯಾಗಿದ್ದಾರೆ. ಸಂಭ್ರಮದ ಹೊಸ್ತಿಲಲ್ಲಿದ್ದ ಮನೆಗೆ ಈಗ ಸೂತಕ ಅವರಿಸಿದೆ.
ಅಧಾರ ಸ್ತಂಭವಾಗಿದ್ದರು…
ರಕ್ಷಿತ್ ಅವರ ಕುಟುಂಬಕ್ಕೆ ಹಣೆಬರಹದ ಹೊಡೆತ ಇದೇ ಮೊದಲಲ್ಲ. ಈಗಾಗಲೇ ಇವರ ಸಹೋದರ ರಂಜಿತ್ ಅವರು ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ಇಡೀ ಮನೆಯ ಆಧಾರಸ್ತಂಭವಾಗಿದ್ದ ರಕ್ಷಿತ್ ಅವರೇ ಇಹಲೋಕ ತ್ಯಜಿಸಿರುವುದು ಆ ಬಡ ಕುಟುಂಬಕ್ಕೆ ದಿಕ್ಕುತೋಚದಂತಹ ಪರಿಸ್ಥಿತಿ ಎದುರಾಗಿದೆ.

