ಕಟಪಾಡಿಯಲ್ಲಿ ಏ.5ಮತ್ತು 6 ರಂದು ವನಸುಮ ರಂಗೋತ್ಸವ – 2025
(Shirva) ಶಿರ್ವ: ಕಟಪಾಡಿ ವನಸುಮ ವೇದಿಕೆ, ವನಸುಮ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏ.5 ಮತ್ತು 6 ರಂದು ವನಸುಮ ರಂಗೋತ್ಸವ – 2025 ಕಟಪಾಡಿ ಎಸ್ ಸಿ ಬಿ ಎಸ್ ಹೈಸ್ಕೂಲಿನ ಒಳಾಂಗಣದಲ್ಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಟಪಾಡಿ ವನಸುಮ ವೇದಿಕೆಯ ಅಧ್ಯಕ್ಷ ಬಾಸುಮ ಕೊಡಗು ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏ.೫ರಂದು ಸಂಜೆ ೬.೩೦ಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರು ರಂಗೋತ್ಸವ ಉದ್ಘಾಟಿಸಲಿದ್ದಾರೆ.
ಕಟಪಾಡಿ ಎಸ್.ವಿ.ಎಸ್.ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ.ಸತ್ಯೇಂದ್ರ ಪೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಇದೇ ಸಂದರ್ಭ ಉಡುಪಿ ರಂಗಭೂಮಿಯ ರಂಗನಟ ಪ್ರದೀಪ್‌ಚಂದ್ರ ಕುತ್ಪಾಡಿ ಅವರಿಗೆ ವನಸುಮ ರಂಗ ಸನ್ಮಾನ್ ಹಾಗೂ ಸಂಘಟಕ ಕಾಪು ಶ್ರೀಕಾಂತ್ ಆಚಾರ್ಯ ಅವರಿಗೆ ಅಭಿನಂದನೆ ನಡೆಯಲಿದೆ. ಬಳಿಕ ಬೈಂದೂರು ಸುರಭಿ ತಂಡದ ಚೋಮನ ದುಡಿ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಏ. ೬ ರಂದು ನಡೆಯಲಿರುವ ರಂಗೋತ್ಸವದಲ್ಲಿ ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ವೆಂಕಟರಮಣ ಐತಾಳ್ ಸಮಾರೋಪ ಭಾಷಣ ಮಾಡಲಿರುವರು. ಚಿತ್ರನಟ ಪ್ರಕಾಶ್ ತೂಮಿನಾಡು, ನಾರಾಯಣ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಹರೀಶ್ಚಂದ್ರ ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಭೂಮಿಕಾ ಹಾರಾಡಿಯ ರಂಗ ನಿರ್ದೇಶಕ ಬಿ.ಎಸ್ ರಾಮ್ ಶೆಟ್ಟಿ ಅವರಿಗೆ ವನಸುಮ ರಂಗಪುರಸ್ಕಾರ ನೀಡಲಾಗುವುದು. ಶೈಕ್ಷಣಿಕ ಕ್ಷೇತ್ರದ ಸಾಧಕಿ ಪಲ್ಲವಿ ಕೊಡಗು ಅವರನ್ನು ಅಭಿನಂದಿಸಲಾಗುವುದು.
ಬಾಸುಮ ಕೊಡಗು ಅವರ ನಡುರಾತ್ರಿಯ ಸ್ವಾತಂತ್ರ್ಯ ಕವನ ಸಂಕಲನ ಬಿಡುಗಡೆಗೊಳ್ಳಲಿದೆ. ಭೂಮಿಕಾ ಹಾರಾಡಿ ತಂಡದ ಬರ್ಬರಿಕಾ ನಾಟಕ ಪ್ರದರ್ಶನ ಗೊಳ್ಳಲಿದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಕಲಾವಿದೆ ಕಾವ್ಯವಾಣಿ ಕೊಡಗು, ಶ್ರೀಕಾಂತ್ ಆಚಾರ್ಯ, ಚಿತ್ರನಟಿ ಸೋನಿ ಪ್ರಭುಧನ್, ಕಲಾವಿದ ಭಾಸ್ಕರ್ ಉದ್ಯಾವರ, ಪಲ್ಲವಿ ಕೊಡಗು, ಶ್ರೀನಾಥ್ ಉಪಸ್ಥಿತರಿದ್ದರು.
