ಪಡುಬಿದ್ರಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇಗುಲ ಜೀರ್ಣೋದ್ಧಾರ: ಬಾಲಾಲಯಗಳಲ್ಲಿ ಬಿಂಬ ಪ್ರತಿಷ್ಠೆ
(Padubidri) ಪಡುಬಿದ್ರಿ, ಎ. 3: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಗುರುವಾರ ಶ್ರೀ ದೇವರನ್ನು ದೇಗುಲದ ಈಶಾನ್ಯ ಭಾದದಲ್ಲಿ ನಿರ್ಮಿಸಲಾಗಿರುವ ಬಾಲಾಲಯಗಳಲ್ಲಿ ದೇಗುಲದ ತಂತ್ರಿವರ್ಯರಾದ ಕಂಬ್ಳಕಟ್ಟ ವೇ. ಮೂ. ರಾಧಾಕೃಷ್ಣ ಉಪಾಧ್ಯಾಯರವರ ನೇತೃತ್ವದಲ್ಲಿ ವಿದ್ಯುಕ್ತವಾಗಿ ಪ್ರತಿಷ್ಠಾಪಿಸಿ ಪ್ರಥಮ ಪೂಜೆಯನ್ನು ನಡೆಸಲಾಯಿತು.
ದೇಗುಲದಲ್ಲಿ ಬೆಳಿಗ್ಗೆನಿಂದಲೇ ಕಾಲದಿಂದಲೇ ಈ ಕುರಿತಾದ ಅನುಜ್ಞಾ ಕಲಶ ಸ್ಥಾಪನೆ, ಅಭಿಷೇಕ, ತತ್ವ ಹೋಮ, ದೇವಾನುಮತಿಯ ಸಂಕಲ್ಪ, ಜೀರ್ಣೋದ್ಧಾರ ಸಂಕಲ್ಪದ ವಿಧಿ, ಕಾಲ ನಿರ್ಣಯಗಳ ಘೋಷಣೆಯ ಬಳಿಕ ತತ್ವ ಕಲಶಾಭಿಷೇಕನ್ನು ಪೂರೈಸಿ ಸಂಕೋಚಗೊಳಿಸಿ, ಉಪಸ್ಥಾನ ಗಣಪತಿ ದೇವರು ಹಾಗೂ ಪ್ರಧಾನ ದೇವರಾಗಿರುವ ಮಹಾರುದ್ರ ದೇವರ ಬಿಂಬದ ಕಲಾಕರ್ಷಣೆಯೊಂದಿಗೆ ಸಂಕೋಚಗೈದು ಕಲಶದಲ್ಲಿ ಆವಾಹಿಸಿ ಅದನ್ನೂ ಸೇರಿದಂತೆ ರುದ್ರ ದೇವರ ಬಲಿಮೂರ್ತಿಯನ್ನು ಹಳೆಯ ದೇವಾಲಯ ಪ್ರಾಕಾರದಿಂದ ಹೊರತಂದು ನೂತನ ಬಾಲಾಲಯಗಳಲ್ಲಿ ಪ್ರತಿಷ್ಠಾಪಿಸಲಾಯಿತು.
ಬಳಿಕ ಬ್ರಹ್ಮಕಲಶೋತ್ಸವದ ಪರ್ಯಂತ ನಡೆಸಬೇಕಾದ ಪೂಜಾ ವಿಧಾನಗಳನ್ನು ಘೋಷಿಸಲಾಯಿತು.
30 ಕೋಟಿ ರೂ. ಗಳ ಯೋಜನೆಗೆ ಸರ್ವರ ಸಹಕಾರ : ಉದ್ಯಮಿ ಡಾ| ಪ್ರಕಾಶ್ ಕೆ. ಶೆಟ್ಟಿ
ಹಳೇ ದೇಗುಲದ ಎರಡೂ ಗರ್ಭ ಗುಡಿಗಳ ಶಿಖರಗಳನ್ನು ಹೋರಿಗೆ ಹಗ್ಗದ ಮೂಲಕ ವಹಿಸಿ ಚಲನೆಗೈದು ಪ್ರತ್ಯೇಕಿಸಲಾಯಿತು. ಇದರೊಂದಿಗೆ ಇಂದೇ ಕರಸೇವೆಗೆ ವಿದ್ಯುಕ್ತ ಚಾಲನೆಯನ್ನೂ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನೀಡಲಾಗಿದೆ. ಪಡುಬಿದ್ರಿ, ಪಾದೆಬೆಟ್ಟುಗಳ ಸುಮಾರು 25ಮಂದಿ ವಿಶ್ವಕರ್ಮ ಸಮಾಜದ ಮಂದಿ ಈಗಾಗಲೇ ತೀರ್ಥಮಂಟಪವನ್ನು ಬಿಚ್ಚುವ ಕರಸೇವೆಯನ್ನೂ ಆರಂಭಿಸಿದ್ದಾರೆ. ಮುಂದಿನ ಒಂದು ವರ್ಷದೊಳಗಾಗಿ ನವೀಕೃತ ಎರಡೂ ಗರ್ಭಗುಡಿಗಳು, ತೀರ್ಥ ಮಂಟಪಗಳು, ಸುತ್ತುಪೌಳಿಗಳು, ನಾಲ್ಕೂ ಸುತ್ತು ಪ್ರಸಾದಗಳು, ಎದುರಿನ ಪ್ರಧಾನ ಗೋಪುರವನ್ನು ಸುಮಾರು 30ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ದಾನಿಗಳ ಸಹಕಾರದಿಂದ ನಿರ್ಮಿಸುವ ಯೋಜನೆಯನ್ನು ಹೊಂದಲಾಗಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಎಂಆರ್‌ಜಿ ಗ್ರೂಪಿನ ಚೆಯರ್‌ಮೆನ್ ಡಾ| ಪ್ರಕಾಶ್ ಕೆ. ಶೆಟ್ಟಿ ತಿಳಿಸಿದರು.
ಈ ಸಂದರ್ಭ ದಲ್ಲಿ ಶ್ರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಆಶಾ ಪ್ರಕಾಶ್ ಶೆಟ್ಟಿ, ಶ್ರೀ ದೇಗುಲದ ಅರ್ಚಕರಾದ ಪದ್ಮನಾಭ ಭÀಟ್ ವೈ. ಗುರುರಾಜ ಭಟ್, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀನಾಥ ಹೆಗ್ಡೆ ನಡ್ಸಾಲುಗುತ್ತು, ಗಣಪತಿ ಭಟ್, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಪುಣೆಯ ಹೊಟೇಲು ಉದ್ಯಮಿ ಸಂತೋಷ್ ಶೆಟ್ಟಿ ಕುರ್ಕಿಲ್‌ಬೆಟ್ಟು,, ಪೇಟೆ ಮನೆ ಪ್ರಕಾಶ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ವಿವಿಧ ಗುತ್ತುಗಳ ಮುಖ್ಯಸ್ಥರು, ಸೀಮೆಯ ಭಕ್ತಾದಿಗಳು, ಗ್ರಾಮಸ್ಥರು, ಮಹಿಳೆಯರು, ಸಿಬ್ಬದಿ ವರ್ಗ ಮತ್ತಿತರರಿದ್ದರು.
