ಹೆಜಮಾಡಿಯಲ್ಲಿ ಕಾಪು ತಾಲೂಕು ದಸರಾ ಕ್ರೀಡಾಕೂಟ ಉದ್ಘಾಟನೆ
ಶೈಕ್ಷಣಿಕ ಸಾಧನೆಗೆ ಕ್ರೀಡಾ ಚಟುವಟಿಕೆ ಪೂರಕ : ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್
(Padubidri) ಪಡುಬಿದ್ರಿ : ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಆತ್ಮವಿಶ್ವಾಸಕ್ಕಾಗಿ ಕ್ರೀಡಾ ಚಟುವಟಿಕೆ ಪೂರಕವಾಗಿದೆ. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ದೇಶಕ್ಕೆ ಕೀರ್ತಿ ತರಬೇಕು ಎಂದು ಕಾಪು ತಾಲೂಕು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಹೇಳಿದರು.
ಹೆಜಮಾಡಿಯ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಉಡುಪಿ ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕಾಪು ತಾಲೂಕು ಪಂಚಾಯಿತಿ ವತಿಯಿಂದ ನಡೆದ ಕಾಪು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ-2024 -25 ನ್ನು ಅವರು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಹೈಜಂಪ್ ಪಟು ಪ್ರಕಾಶ್ ಶೆಟ್ಟಿ ಹೆಜಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಪರ್ಧೆ ಇದ್ದಾಗ ಮಾತ್ರ ತರಬೇತಿ ಸಲ್ಲದು. ನಿರಂತರ ತರಬೇತಿಯಿಂದ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಸನ್ಮಾನ: ಕ್ರೀಡಾ ಪ್ರೋತ್ಸಾಹಕರಾದ ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜ್ಮಾಡಿಯವರನ್ನು ಸಂಘಟಕರ ವತಿಯಿಂದ ಸನ್ಮಾನಿಸಲಾಯಿತು.
ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜ್ಮಾಡಿ, ಪ್ರಧಾನ ಕಾರ್ಯದರ್ಶಿ ಪ್ರಬೋದ್‌ಚಂದ್ರ ಹೆಜ್ಮಾಡಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ್ ಸುವರ್ಣ, ಕಿರಣ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ಅಧಿಕಾರಿ ರಿತೇಶ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು.
ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನವೀನ್ ಶೆಟ್ಟಿ ಇನ್ನಂಜೆ ವಂದಿಸಿದರು.
ಕಾಪು ತಾಲೂಕಿನ ಸುಮಾರು 24 ಶಾಲೆಗಳ 900 ಕ್ಕೂ ಅಧಿಕ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

