• Home  
  •  ಕಾಪು ತಾಲ್ಲೂಕು ಮಟ್ಟದ ಪೌತಿ ಆಂದೋಲನ ಮತ್ತು ಪಿಂಚಣಿ ಅದಾಲತ್ (Kaup Thaluku Pauthi Andolana, Pinchani Adalath)
- ವ್ಯವಹಾರ

 ಕಾಪು ತಾಲ್ಲೂಕು ಮಟ್ಟದ ಪೌತಿ ಆಂದೋಲನ ಮತ್ತು ಪಿಂಚಣಿ ಅದಾಲತ್ (Kaup Thaluku Pauthi Andolana, Pinchani Adalath)

Share: ಕಾಪು ತಾಲ್ಲೂಕು ಮಟ್ಟದ ಪೌತಿ ಆಂದೋಲನ ಮತ್ತು ಪಿಂಚಣಿ ಅದಾಲತ್ ಪೌತಿ ಖಾತೆ ಮಾಡಿಸಿಕೊಂಡು ಆಸ್ತಿ ಸುರಕ್ಷಿತಗೊಳಿಸಿಕೊಳ್ಳಿ : ತಹಶಿಲ್ದಾರ್ ಡಾ. ಪ್ರತಿಭಾ ಆರ್ (Kaup) ಕಾಪು: ಕಾಪು ತಾಲೂಕು ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೌತಿ ಆಂದೋಲನ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಪೌತಿ ಖಾತೆ ಮಾಡಿಸಿಕೊಳ್ಳದಿದ್ದಲ್ಲಿ ಬೆಳೆ ಪರಿಹಾರ, ಪ್ರಕೃತಿ ವಿಕೋಪ ಪರಿಹಾರ, ಕಿಸಾನ್ ಸಮ್ಮಾನ್ ಯೋಜನೆ, ಬ್ಯಾಂಕ್ […]

ಕಾಪು ತಾಲ್ಲೂಕು ಮಟ್ಟದ ಪೌತಿ ಆಂದೋಲನ ಮತ್ತು ಪಿಂಚಣಿ ಅದಾಲತ್

ಪೌತಿ ಖಾತೆ ಮಾಡಿಸಿಕೊಂಡು ಆಸ್ತಿ ಸುರಕ್ಷಿತಗೊಳಿಸಿಕೊಳ್ಳಿ : ತಹಶಿಲ್ದಾರ್ ಡಾ. ಪ್ರತಿಭಾ ಆರ್

(Kaup) ಕಾಪು: ಕಾಪು ತಾಲೂಕು ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೌತಿ ಆಂದೋಲನ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಉದ್ಘಾಟಿಸಿದರು.

ಈ ಸಂದರ್ಭ ಅವರು ಮಾತನಾಡಿ, ಪೌತಿ ಖಾತೆ ಮಾಡಿಸಿಕೊಳ್ಳದಿದ್ದಲ್ಲಿ ಬೆಳೆ ಪರಿಹಾರ, ಪ್ರಕೃತಿ ವಿಕೋಪ ಪರಿಹಾರ, ಕಿಸಾನ್ ಸಮ್ಮಾನ್ ಯೋಜನೆ, ಬ್ಯಾಂಕ್ ನಲ್ಲಿ ಸಾಲ, ಸೌಲಭ್ಯ ಪಡೆಯಲು ಅಡ್ಡಿಯಾಗುತ್ತದೆ. ಆದ್ದರಿಂದ ಕೂಡಲೇ ಪೌತಿ ಖಾತೆ ಮಾಡಿಸಿಕೊಳ್ಳಬೇಕು ಎಂದರು.

ಜನ ಜಾಗೃತಿಗಾಗಿ ಪೌತಿ ಆಂದೋಲನ:

 ಪೂರಕ ದಾಖಲೆಗಳೊಂದಿಗೆ ಜನರು ಯಾವುದೇ ಸಮಯದಲ್ಲಿ ಬಂದು ತಮ್ಮ ಕೆಲಸ ಮಾಡಿಸಿಕೊಳ್ಳಬಹುದು. ಜಾಗ ಹಿರಿಯರ ಹೆಸರಿನಲ್ಲೇ ಇದ್ದು, ಜನರು ಅದನ್ನು ಗಮನಿಸಲು ಹೋಗುವುದಿಲ್ಲ. ಹಿರಿಯರ ಹೆಸರಿನಲ್ಲಿರುವ ಜಾಗವನ್ನು ತಮ್ಮ ಹೆಸರಿನಲ್ಲಿ ಮಾಡಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಎಂದು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಹೇಳಿದರು.

  ಪೌತಿ ಖಾತೆ: ಆಸ್ತಿ ಮಾಲೀಕರು ಅಕಾಲಿಕ ನಿಧನ ಹೊಂದಿದ ನಂತರ ಅವರ ವಾರಸುದಾರರು ಜಮೀನನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳುವುದು ಸಾಮಾನ್ಯ. ಆದರೆ, ಬಹುತೇಕ ವಾರಸುದಾರರು ಯಾವಾಗಲಾದರೂ ಮಾಡಿಸಿಕೊಂಡರೆ ಆಯಿತು ಎಂಬ ನಿರ್ಲಕ್ಷ್ಯ ತೋರುತ್ತಾರೆ. ನೆನಪಿರಲಿ, ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳದಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಸ್ತಿ ಮಾಲೀಕರು ನಿಧನ ಹೊಂದಿದ ಬಳಿಕ ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳದಿದ್ದರೆ, ಜಮೀನುಗಳ ಸ್ವಾಧೀನ ಹೊಂದಿದ್ದರೂ ಉಪಯೋಗವಿಲ್ಲದಂತೆ ಆಗುತ್ತದೆ.

  ಪ್ರಕೃತಿ ವಿಕೋಪದಿಂದಾಗಿ ಬೆಳೆ ನಷ್ಟವಾದರೆ ಬೆಳೆ ವಿಮೆಯಾಗಲಿ ಅಥವಾ ಬೆಳೆ ನಷ್ಟ ಪರಿಹಾರ ಪಡೆಯುವುದಕ್ಕೆ ಆಗಲಿ ಆಗುವುದಿಲ್ಲ. ಇನ್ನು ಬ್ಯಾಂಕ್​ಗಳಿಂದ ಸಾಲ – ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಅದರ ಜೊತೆಗೆ ಮುಂದೆ ಹೊಸ ಹೊಸ ಕಾನೂನುಗಳು ಬಂದು ಕಚೇರಿಗಳಿಗೆ ಹಲವು ಬಾರಿ ಅಲೆದಾಡುವ ಸಂದರ್ಭಗಳು ಬರಬಹುದು. ಹಾಗಾಗಿ ಆಸ್ತಿಯನ್ನು ಪೌತಿ ಖಾತೆಯಡಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ .

ಇನ್ನು ವಾರಸುದಾರರು ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಹೆಸರಿಗೆ ಬಹಳಷ್ಟು ರೈತರು ಬದಲಾವಣೆ ಮಾಡಿಕೊಂಡಿಲ್ಲ. ಆಸ್ತಿ ಮಾಲೀಕರ ಮರಣ ಪ್ರಮಾಣ ಪತ್ರ ಇಲ್ಲದೇ ಜಮೀನಿನ ಖಾತೆ ವರ್ಗಾವಣೆ ಸಾಧ್ಯವಾಗುತ್ತಿಲ್ಲ. ಪೂರ್ವಿಕರ ಮರಣ ಪ್ರಮಾಣ ಪತ್ರಗಳನ್ನು ಕಾನೂನಾತ್ಮಕವಾಗಿ ಪಡೆಯಲು ಮಾಹಿತಿ ಕೊರತೆ ಇರುವ ಕಾರಣ ಕೆಲವು ರೈತರು ತಮ್ಮ ಹೆಸರಿನಲ್ಲಿ ವರ್ಗಾವಣೆ ಮಾಡಿಕೊಂಡಿಲ್ಲ. ನಿಯಮದ ಪ್ರಕಾರ ಹೇಳುವುದಾದರೆ, ಗ್ರಾಮಗಳಲ್ಲಿ ವ್ಯಕ್ತಿ ನಿಧನರಾದ 28 ದಿನದೊಳಗೆ ಸಂಬಂಧಪಟ್ಟ ಗ್ರಾಮ ಪಂಚಾಯ್ತಿಯವರು ಮರಣ ಪ್ರಮಾಣ ಪತ್ರ ನೀಡಬೇಕು. ಒಂದು ವರ್ಷದೊಳಗಿದ್ದರೆ ತಹಶೀಲ್ದಾರರು ನೀಡಬಹುದು. ಒಂದು ವರ್ಷ ಮೇಲ್ಪಟ್ಟ ಪ್ರಕರಣಗಳಿದ್ದರೆ ಜೆಎಂಎಫ್ ನ್ಯಾಯಾಲಯದ ಮೂಲಕವೇ ದಾವೆ ಹೂಡಿ ಮರಣ ಪ್ರಮಾಣ ಪತ್ರ ಪಡೆದು ಪೌತಿ ಖಾತೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

 ನಿಮ್ಮ ಜಮೀನು ನಿಮ್ಮ ಹೆಸರಿಗೆ ಆಗಿಲ್ಲವೆಂದರೆ ಚಿಂತಿಸುವ ಅಗತ್ಯವಿಲ್ಲ. ಕುಟುಂಬದ ಮುಖ್ಯಸ್ಥರು ನಿಧನರಾದ ಆನೇಕ ವರ್ಷಗಳಾದರೂ ಸಹ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ ಆಗದಿದ್ದರೆ, ಚಿಂತಿಸುವ ಅವಶ್ಯಕತೆ ಇಲ್ಲ. ಪೌತಿ ಖಾತೆಯ ಮೂಲಕ ಸುಲಭವಾಗಿ ನಿಮ್ಮ ಜಮೀನು ಅಥವಾ ಆಸ್ತಿ ವರ್ಗಾವಣೆ ಮಾಡಿಕೊಳ್ಳಬಹುದು.

ಜಮೀನು ವರ್ಗಾವಣೆ ಹೇಗೆ?:

ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳುವುದು ಹೇಗೆ? ಹಾಗೂ ಜಮೀನು ವರ್ಗಾವಣೆಗೆ ಬೇಕಾಗುವ ದಾಖಲೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ವಾರಸುದಾರರ ಅಥವಾ ಕುಟುಂಬಸ್ಥರ ಹೆಸರಿಗೆ ಜಮೀನಿನ ಖಾತೆಯನ್ನು ವರ್ಗಾವಣೆ ಮಾಡುವುದನ್ನು ‘ಪೌತಿ ಖಾತೆ’ ಎಂದು ಕರೆಯಲಾಗುತ್ತದೆ.

ಜಮೀನು ಮಾಲೀಕ ನಿಧನ ಹೊಂದಿದ ಬಳಿಕ ಸರ್ಕಾರ ಸೂಚಿಸಿರುವ ಮೂಲಗಳ ಪ್ರಕಾರ ಮರಣ ಹೊಂದಿದ ಮಾಲೀಕನ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಪಡೆದು ನಮೂನೆ-1 ರಲ್ಲಿ ಅರ್ಜಿ ಸಲ್ಲಿಸಬೇಕು. ಪೌತಿ ಖಾತೆ ಮಾಡಿಕೊಳ್ಳಲು ಅರ್ಜಿ ನಮೂನೆ-1 ರಾಜ್ಯದ ಎಲ್ಲ ನಾಡ ಕಚೇರಿಗಳಲ್ಲಿ ಸಿಗುತ್ತದೆ. ತಹಶೀಲ್ದಾರ್​ ಕಚೇರಿಯ ಬಳಿಯ ಜೆರಾಕ್ಸ್ ಅಂಗಡಿಗಳಲ್ಲೂ ಅರ್ಜಿ ಸಿಗುತ್ತದೆ. ಅರ್ಜಿ ತೆಗೆದುಕೊಂಡು ಅದಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಪೌತಿ ಖಾತೆಗೆ ಅರ್ಜಿ ಸಲ್ಲಿಸಬಹುದು.

ಪೌತಿ ಖಾತೆಗೆ ಬೇಕಾಗಿರುವ ದಾಖಲೆಗಳು:

 ಮರಣ ಪ್ರಮಾಣ ಪತ್ರ, ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ರೇಷನ್ ಕಾರ್ಡ್ ಬೇಕು. ಇದರ ಜೊತೆಗೆ ಇತ್ತೀಚಿನ ಪಹಣಿ ಹಾಗೂ 18 ವರ್ಷ ಮ್ಯುಟೇಷನ್ ಸಹ ಸಲ್ಲಿಸಬೇಕು. ಒಂದು ವೇಳೆ, ವಂಶವೃಕ್ಷ ಲಭ್ಯವಿರದಿದ್ದರೆ, ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿ ಮಾಡಿ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ದಾಖಲಿಸಬಹುದು. ಉದಾಹರಣೆಗೆ, ಒಂದು ಕುಟುಂಬದಲ್ಲಿ ಮೂರ್ನಾಲ್ಕು ಮಕ್ಕಳಿದ್ದರೆ ಯಾರ ಹೆಸರಿನ ಮೇಲೆ ಎಷ್ಟು ಜಮೀನು ವರ್ಗಾವಣೆ ಮಾಡಬೇಕೆಂಬುದರ ವಿವರವನ್ನು ಅರ್ಜಿಯಲ್ಲಿ ನಮೂದಿಸಬೇಕು.

ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು-ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು:

ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಹಕ್ಕಿದೆ. ಮೊದಲು ಜಮೀನು ವಾರಸುದಾರರ ಪತ್ನಿ ಹೆಸರಿಗೆ ಖಾತೆ ಬದಲಾಗಬೇಕು. ಪತ್ನಿ ಒಪ್ಪಿಗೆ ನೀಡಿದರೆ ಮಾತ್ರ ಮಕ್ಕಳ ಹೆಸರಿಗೆ ಖಾತೆ ಮಾಡಲು ಅವಕಾಶವಿದೆ. ಜಮೀನು ದಾಖಲೆಗಳಲ್ಲಿ ಹೆಸರು, ಹಿಸ್ಸಾ, ನಂಬರ್ ತಪ್ಪಾಗಿದ್ದರೆ, ಅರ್ಜಿ ಸಲ್ಲಿಸಿ ಅದನ್ನು ಸರಿಪಡಿಸಿಕೊಳ್ಳಬಹುದು.

ಸೌಲಭ್ಯಗಳು:

ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳುವುದರಿಂದ ಸರ್ಕಾರದಿಂದ ಸೌಲಭ್ಯಗಳು ಸಿಗುತ್ತವೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾಳಾದಾಗ ಬೆಳೆ ವಿಮೆ ಪರಿಹಾರ ಪಡೆಯಲು ಸಹಾಯಕವಾಗುತ್ತದೆ. ಒಂದು ವೇಳೆ, ಸರ್ಕಾರವು ನಿಮ್ಮ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಭೂ ಸ್ವಾಧೀನ ಪಡೆದುಕೊಂಡರೆ ಸರ್ಕಾರದಿಂದ ಪರಿಹಾರ ಹಣ ಸಿಗುತ್ತದೆ.

ಪೌತಿ ಖಾತೆಗಾಗಿ ರೈತರು ಅನುಭವಿಸುತ್ತಿರುವ ಕಿರಿಕಿರಿಯನ್ನು ತಪ್ಪಿಸಲು ಪೌತಿ ಖಾತೆ ಆಂದೋಲನ ಸಹ ಹಮ್ಮಿಕೊಳ್ಳಲಾಗಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿರುವ ಆಂದೋಲನದಲ್ಲಿ ರೈತರು ಭಾಗವಹಿಸಿ, ತಮ್ಮ ಸೂಕ್ತ ದಾಖಲೆಗಳನ್ನು ನೀಡಿ ಪೌತಿ ಖಾತೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.