ಕಾಪು: “ನಮ್ಮ ನಡೆ ಮತಗಟ್ಟೆಯ ಕಡೆ”: ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ವಿನೂತನ ಪ್ರಯತ್ನ
(Kaup) ಕಾಪು: ಸಾರ್ವಜನಿಕರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಚುನಾವಣಾ ಆಯೋಗವು ನಮ್ಮ ನಡೆ ಮತಗಟ್ಟೆಯ ಕಡೆ ಎಂಬ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾಪು ವಿಧಾನಸಭಾ ಕ್ಷೇತ್ರದ 209 ಮತಗಟ್ಟೆಗಳಲ್ಲಿ ಏಕ ಕಾಲಕ್ಕೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ (Kaup Thashiladar Dr Prathibha R), ಸಹಾಯಕ ಚುನಾವಣಾಧಿಕಾರಿ ಜಯಮಾಧವ,(Jaya Madhava) ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮೋಹನ್, ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಹಾಗೂ BLO ಗಳು, ಸಾರ್ವಜನಿಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿಯ ಮತಗಟ್ಟೆಯಲ್ಲಿ”ನಮ್ಮ ನಡೆ ಮತಗಟ್ಟೆ ಕಡೆ” ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಧ್ವಜಾರೋಹಣ ಮಾಡಿದ ತಹಶಿಲ್ದಾರ್ ಪ್ರತಿಭಾ ಆರ್ ರವರು ಮಾತನಾಡಿ, ಪ್ರತಿಯೊಬ್ಬರೂ ಮತದಾನ ಮಾಡಬೇಕು. ಭಾರತದ ನಾಗರಿಕರಾದ ನಮ್ಮೆಲ್ಲರ ಆದ್ಯ ಕರ್ತವ್ಯ. ಮತದಾನ ದೇಶದ ಭವ್ಯ ಭವಿಷ್ಯತ್ತಿನ ಮುನ್ನುಡಿ. ಈ ಮತದಾನ ನಮ್ಮ ಅಸ್ತಿತ್ವವನ್ನು ಸಾಬೀತುಪಡಿಸುವ ಮತ್ತು ನಮ್ಮ ಅಸ್ಮಿತೆಯನ್ನು ಎತ್ತಿ ಹಿಡಿಯುವ ಅಪೂರ್ವ ಅವಕಾಶ. ಈ ಮತದಾನ ಈ ಅವಕಾಶವನ್ನು ಯಾರೂ ಕಳೆದುಕೊಳ್ಳಬೇಡಿ ಎಂದು ಸಂದೇಶ ನೀಡಿದರು.
ಮತದಾನದಲ್ಲಿ ಭಾಗವಹಿಸುವುದು ಎಲ್ಲ ಮತದಾರರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಪ್ರತಿ ಮತದಾರನು ತನ್ನ ಮತದ ಮೌಲ್ಯವನ್ನು ಅರಿತು ಪ್ರಜಾಪ್ರಭುತ್ವದ ಈ ಪವಿತ್ರ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಸದೃಢ ಹಾಗೂ ಬಲಿಷ್ಟ ದೇಶ ಕಟ್ಟುವಂತಾಗಲಿ ಎಂದು ಸಹಾಯಕ ಚುನಾವಣಾಧಿಕಾರಿ ಜಯಮಾಧವ ಕರೆ ನೀಡಿದರು.
ಈ ನಿಟ್ಟಿನಲ್ಲಿ ಸಾರ್ವಜನಿಕರನ್ನು ಮತದಾನಕ್ಕೆ ಪ್ರೇರೇಪಿಸಲು ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಚುನಾವಣಾ ಆಯೋಗ ಹಮ್ಮಿಕೊಂಡು ಬಂದಿದೆ. ಇದೇ ಹಾದಿಯಲ್ಲಿನ ಮತ್ತೊಂದು ಪ್ರಯತ್ನವೇ ‘ನಮ್ಮ ನಡೆ ಮತಗಟ್ಟೆಯ ಕಡೆʼ ಕಾರ್ಯಕ್ರಮ.
ಸಾರ್ವಜನಿಕರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಕಾಪು ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಏಕ ಕಾಲಕ್ಕೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ ಚುನಾವಣೆಯ ಮತದಾನ ಪ್ರಕ್ರಿಯೆ ಏಪ್ರಿಲ್ 26 ರಂದು ನಡೆಯಲಿದ್ದು, ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮವನ್ನು ಕಾಪು ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಯನ್ನು ಮತದಾರರಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಂದು ಚುನಾವಣಾ ಪರ್ವ, ದೇಶದ ಗರ್ವ ಎಂಬ ದ್ಯೇಯ ಒಳಗೊಂಡಿರುವ ಬಾವುಟವನ್ನು ಪ್ರತಿ ಮತಗಟ್ಟೆಯಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಮತದಾರರನ್ನು ಸೆಳೆಯಲು ಸ್ಥಳೀಯ ಜನಪದ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾಲ್ನಡಿಗೆ ಜಾಥ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಪ್ರಾಥಮಿಕವಾಗಿ ಮತಗಟ್ಟೆ ಹಂತದಲ್ಲಿ ಮತಗಟ್ಟೆ ಅಧಿಕಾರಿಗಳ ನೇತೃತ್ವದಲ್ಲಿ, ತಾಲ್ಲೂಕು ಮಟ್ಟದಲ್ಲಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದಲ್ಲಿ ನೈತಿಕ ಚುನಾವಣೆಯ ಕುರಿತು ಮತದಾರರಿಗೆ ಬಿತ್ತಿಪತ್ರಗಳ ವಿತರಣೆ, ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಕಾರ್ಯಕ್ರಮದ ವಿಶೇಷತೆಗಳು
-ನೈತಿಕ ಚುನಾವಣೆಯ ಕುರಿತು ಮತದಾರರಿಗೆ ಭಿತ್ತಿ ಚಿತ್ರಗಳ ವಿತರಣೆ
-ಎಲ್ ಇ ಡಿ ವಾಹನಗಳ ಮೂಲಕ ಜಾಗೃತಿ
-ಮತದಾನದ ಮಹತ್ವದ ಕುರಿತು ಬೀದಿ ನಾಟಕ
–ಸೈಕಲ್ ದ್ವಿಚಕ್ರ ವಾಹನ ಮತ್ತು ಕಾಲ್ನಡಿಗೆ ಜಾಥಾ
-ಸಿ-ವಿಜಿಲ್, ಕೆವೈಸಿ, ಸಕ್ಷಮ್ ಆಪ್, ಮತದಾರರ ಸಹಾಯವಾಣಿ 1950 ಬಗ್ಗೆ ಮಾಹಿತಿ.
ಮತದಾನದಲ್ಲಿ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮೂಲಕ ಮತದಾನ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ‘ನಮ್ಮ ನಡೆ ಮತಗಟ್ಟೆಯ ಕಡೆʼ ಕಾರ್ಯಕ್ರಮ ವಿನೂತನವಾಗಿದೆ.

