ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ : ಶತ ಸಂಭ್ರಮೋತ್ಸವದ ಮನವಿ ಪತ್ರ ಬಿಡುಗಡೆ
ಶಿಕ್ಷಣ ಯಜ್ಞದಲ್ಲಿ ಶ್ರಮ–ಶ್ರದ್ಧೆಯೊಂದಿಗೆ ಪಾಲ್ಗೊಂಡಲ್ಲಿ ಬದುಕು ಅರ್ಥಪೂರ್ಣ – ಶಾಸಕ ಸುರೇಶ್ ಶೆಟ್ಟಿ
(Kaup)ಕಾಪು : ಸರಕಾರಿ ಕನ್ನಡ ಮಾಧ್ಯಮ ಶಾಲೆಯೊಂದು ಶತ ಸಂಭ್ರಮೋತ್ಸವವನ್ನು ಆಚರಿಸುವುದು ಅರ್ಥಪೂರ್ಣವಾಗಿದ್ದು, ಸಂಭ್ರಮದ ಕ್ಷಣವಾಗಿದೆ. ಈ ಶಿಕ್ಷಣ ಯಜ್ಞದಲ್ಲಿ ಶ್ರಮ-ಶ್ರದ್ಧೆಯೊಂದಿಗೆ ಪಾಲ್ಗೊಂಡಲ್ಲಿ ಬದುಕು ಕೂಡಾ ಅರ್ಥಪೂರ್ಣವಾಗಲಿದೆ ಎಂದು ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಭಾನುವಾರ ಸಂಜೆ ಶತಮಾನೋತ್ಸವ ಸಂಭ್ರಮದಲ್ಲಿರುವ ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತ ಸಂಭ್ರಮದ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಅರ್ಥಪೂರ್ಣ ಬದುಕಿಗೆ ಶಿಕ್ಷಣವೇ ಆಧಾರ. ಆ ನಿಟ್ಟಿನಲ್ಲಿಸರಕಾರಿ ಶಿಕ್ಷಣ ಸಂಸ್ಥೆಯೊಂದು ಶತ ಸಂಭ್ರಮಕ್ಕೆ ಸಾಗಿ ಬರಲು ಅಂದು ದುಡಿದವರ ಸ್ಮರಣೆ ಮಾಡುವ ಸುಯೋಗ ಇದೀಗ ಒದಗಿ ಬಂದಿದೆ. ಕನ್ನಡ ಶಾಲೆಗಳು ಮುಚ್ಚುತ್ತಿರುವ ನಮ್ಮ ಸಮಾಜದ ದುರಂತದ ಕಾಲಘಟ್ಟದಲ್ಲಿಯೂ ಹೃದಯದ ಭಾಷೆಯಾದ ಕನ್ನಡ ಮಾಧ್ಯಮದ ಶಾಲೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮಗಿದೆ. ಅದರ ಜೊತೆಗೆ ನಮ್ಮ ಅರ್ಥಪೂರ್ಣ ಬದುಕಿಗೆ ಶಿಕ್ಷಣ-ಸಂಸ್ಕಾರವನ್ನು ಕೊಟ್ಟಂತಹ ಕಾಪು ಪಡುವಿನ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ಶತಸಂಭ್ರಮವನ್ನು ಅದ್ದೂರಿಯಾಗಿ ಮಾಡೋಣ. ಆ ಮೂಲಕ ಶಾಲೆಯ ಉಳಿವು-ಬೆಳವಿಗೆ ಕೈಜೋಡಿಸೋಣ ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಶತ ಸಂಭ್ರಮ ಆಚರಣಾ ಸಮಿತಿಯ ಅಧ್ಯಕ್ಷರಾದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ವಹಿಸಿದ್ದರು.
ಅವರು ಮಾತನಾಡಿ, ಪೂರ್ವಜರಾದ ಉದ್ಯಾವರ ಬೊಳ್ಜೆ ತಾಂಕೂರ್ ಮನೆತನದ ದಿ. ಬೊಳ್ಜೆ ನಾರಾಯಣ ಯಾನೆ ನಕ್ರ ಶ್ರೀಯಾನ್ ಅವರು 1926 ಸೆಪ್ಟಂಬರ್ ನಲ್ಲಿ ಖಾಸಗಿ ಮೀನುಗಾರಿಕಾ ಶಾಲೆಯನ್ನು ಕಾಪು ಮೊಗವೀರ ಮಹಾಸಭಾದ ಪೂರ್ಣ ಪ್ರಮಾಣದ ಸಹಕಾರದೊಂದಿಗೆ ಆರಂಭಿಸಿದರು. ಬಳಿಕ ಮೀನುಗಾರಿಕಾ ಶಾಲೆಯು ಜಿ.ಪಂ. ಶಾಲೆಯಾಗಿ ಆ ಬಳಿಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ರೂಪುಗೊಂಡಿದೆ. ಇದೀಗ ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳೀಯ ಹೊರ ಜಿಲ್ಲೆಯ ವಲಸೆ ಕಾರ್ಮಿಕರ ಮಕ್ಕಳು, ಜೊತೆಗೆ ನೇಪಾಳ, ಪಶ್ಚಿಮ ಬಂಗಾಳದ ಮಕ್ಕಳು ಇಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಸಂಸ್ಥೆಯಾಗಿ ಬೆಳೆಯುತ್ತಿದೆ.
ಡಿಸೆಂಬರ್ 26, 27ರಂದು ಶತಸಂಭ್ರಮಾಚರಣೆಯು ನಡೆಯಲಿದೆ. ಈ ಸುಸಂದರ್ಭದಲ್ಲಿ ಆ ನಿಟ್ಟಿನಲ್ಲಿ ಶಾಲೆಯ ಅಭಿವೃದ್ಧಿಗಾಗಿ 35 ಲಕ್ಷ ರೂ. ಬಳಸಿಕೊಳ್ಳಲಾಗುತ್ತಿದೆ. ಇನ್ನುಳಿದಂತೆ ಸಾಂಸ್ಕೃತಿಕ, ಸ್ಪರ್ಧೆಗಳು, ಸೌಹಾರ್ದ ಸಭೆ ಸಹಿತ ಹಳೆ ವಿದ್ಯಾರ್ಥಿಗಳು, ಎಸ್ ಡಿ ಎಂಸಿ, ಕಾಪು ಮೊಗವೀರ ಮಹಾ ಸಭಾ ಸಹಿತ ಇತರ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಶತಸಂಭ್ರಮಾಚರಣೆಯನ್ನು ಅದ್ದೂರಿ ಕಾರ್ಯಕ್ರಮವಾಗಿಸಲು ಪೂರ್ವತಯಾರಿ ಮಾಡಿಕೊಳ್ಳಲಾಗಿದೆ. ಆ ಮೂಲಕ ಶಾಲೆಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಪ್ರಯತ್ನ ನಮ್ಮದು ಎಂದರು.
ವೇದಿಕೆಯಲ್ಲಿ ಶತ ಸಂಭ್ರಮೋತ್ಸವದ ಸಮಿತಿಯ ಗೌರವಾಧ್ಯಕ್ಷರಾದ ಸದಾಶಿವ ಶ್ರೀಯಾನ್, ಕಾರ್ಯಾಧ್ಯಕ್ಷರುಗಳಾದ ಕುಶ ಎನ್. ಸಾಲ್ಯಾನ್, ಮೋಹನ್ ಬಂಗೇರ, ಪ್ರಧಾನ ಕಾರ್ಯದರ್ಶಿ ಲಾಲಾಜಿ ಪುತ್ರನ್, ಕೋಶಾಧಿಕಾರಿ ಶಾಲಾ ಮುಖ್ಯ ಶಿಕ್ಷಕಿ ಉಷಾ, ಮುಂಬೈ ಸಮಿತಿಯ ಸಾಹಿತಿ ಸೋಮನಾಥ ಕರ್ಕೇರ, ಉಪಾಧ್ಯಕ್ಷರುಗಳಾದ ಶೀಲರಾಜ್ ಪುತ್ರನ್, ಮಹ್ಮದ್ ಶರೀಫ್ ಬಾವು, ಕಾಪು ಮೊಗವೀರ ಮಹಾ ಸಭಾದ ಅಧ್ಯಕ್ಷ ಸುಜಿತ್ ಕುಮಾರ್, ಕಾಪು ಮೊಗವೀರ ಮಹಾಸಭಾದ ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ದಮಯಂತಿ, ಶಾಲಾ ಎಸ್ ಡಿ ಎಮ್ ಸಿ ಆಧ್ಯಕ್ಷೆ ಶ್ರೀಮತಿ ಸಂಗೀತ ಮತ್ತಿತರರು ಉಪಸ್ಥಿತರಿದ್ದರು.

