ಕಾಪು ಪುರಸಭೆ ಸಾಮಾನ್ಯ ಸಭೆ: ವೈಯಕ್ತಿಕ ಪ್ರತಿಷ್ಠೆ, ಸಮಯ ನಿಗದಿಯ ಗೊಂದಲ, ವಿರೋಧ ಪಕ್ಷದ ಸದಸ್ಯರಿಂದ ಬಹಿಷ್ಕಾರ
( Kaup)ಕಾಪು : ವೈಯಕ್ತಿಕ ಪ್ರತಿಷ್ಠೆಯಿಂದ ಕಾಪು ಪುರಸಭೆಯ ಸಾಮಾನ್ಯ ಸಭೆ ನೆಗೆಪಾಟಲಿಗೀಡಾದ ಘಟನೆ ಬುಧವಾರ ನಡೆದಿದೆ.
ಬೆಳಿಗ್ಗೆ ೧೦.೩೦ಕ್ಕೆ ನಡೆಯುತ್ತಿದ್ದ ಸಾಮಾನ್ಯ ಸಭೆಯು ಬುಧವಾರ ಮಧ್ಯಾಹ್ನ ೩ ಘಂಟೆಗೆ ನಿಗದಿಯಾಗಿತ್ತು. ಈ ಗೊಂದಲದಿಂದ ಆಡಳಿತ ಪಕ್ಷದ ೧೨ ಮಂದಿಯ ಪೈಕಿ ಎಂಟು ಸದಸ್ಯರು ಮಾತ್ರ ಹಾಜರಾಗಿದ್ದು, ನಾಲ್ವರು ಗೈರಾಗಿದ್ದರು.
ಸಮಯ ನಿಗದಿಯಿಂದ ವಿರೋಧ ಪಕ್ಷವಾದ ಕಾಂಗ್ರೆಸ್‌ನ ನಾಮ ನಿರ್ದೇಶಿತ ಸಹಿತ ಎಲ್ಲಾ ಸದಸ್ಯರು ಸಭೆಯನ್ನು ಬಹಿಷ್ಕರಿಸಿದ್ದಾರೆ.
ಇಬ್ಬರು ಎಸ್‌ಡಿಪಿಐ ಸದಸ್ಯರು ಸಭೆಗೆ ಹಾಜರಾಗಿದ್ದರೂ, ಒಬ್ಬರು ಸಭೆಗೆ ಸಹಿ ಹಾಕಿ ತೆರಳಿದರೆ ಇನ್ನೋರ್ವ ಸದಸ್ಯರು ಸಹಿ ಹಾಕದೆ ನಿರ್ಗಮಿಸಿದರು.
೩ಗಂಟೆಗೆ ಸಭೆ ನಿಗದಿಯಾಗಿದ್ದರೂ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಮತ್ತು ಉಪಾಧ್ಯಕ್ಷೆ ಸರಿತಾ ಶಿವಾನಂದ ಅರ್ಧ ಗಂಟೆ ವಿಳಂಬವಾಗಿ ಆಗಮಿಸಿದರು.
ಸ್ಥಾಯಿ ಸಮಿತಿಯ ಅಧ್ಯಕ್ಷ ಅನಿಲ್ ಹಾಜರಾಗಿದ್ದು, ಇಂದಿನ ಈ ಎಲ್ಲಾ ಬೆಳವಣಿಗೆ ಆಡಳಿತ ಪಕ್ಷದಲ್ಲಿ ಅಧ್ಯಕ್ಷದಲ್ಲಿ ಒಮ್ಮತ ಇಲ್ಲ ಎಂಬುವುದು ಬೆಳಕಿಗೆ ಬಂದಿದೆ.
ಆರೋಗ್ಯಕರ ಚರ್ಚೆ ನಡೆಸಿ ಪುರಸಭೆಯ ಅಭಿವೃದ್ಧಿಯ ಕುರಿತಂತೆ ಚರ್ಚಿಸಬೇಕಾದ ಆಡಳಿತ ಪಕ್ಷದ ಸದಸ್ಯರು ವೈಯಕ್ತಿಕ ಪ್ರತಿಷ್ಠೆ ಮೆರೆಯುತ್ತಿರುವುದುರಿಂದ ಮೂರು ತಿಂಗಳಿಂದ ನಡೆಯುತಿದ್ದ ಸಭೆ ನೆಗೆಪಾಟಿಲು ಗೀಡಾಗುತ್ತಿದೆ.
ಶಾಸಕರೂ ಗೈರು: ಶಾಸಕರು ಸಭೆಗೆ ಹಾಜರಾಗುವ ಬಗ್ಗೆ ತಮ್ಮ ಕಾರ್ಯಕ್ರಮ ವೇಳಾ ಪಟ್ಟಿಯಲ್ಲಿ ತಿಳಿಸಿದ್ದರೂ, ಸಭೆಗೆ ಹಾಜರಾಗಲಿಲ್ಲ. ಆಡಳಿತ ಸದಸ್ಯರ ಮಧ್ಯೆ ವೈಯಕ್ತಿಕ ಪ್ರತಿಷ್ಠೆಯಿಂದ ಸಮಯ ವ್ಯರ್ಥ ಆಗುತ್ತಿರುವುದು ಕಂಡು ಬಂದಿದೆ.
ಸಭೆಗೆ ಮೆಸ್ಕಾಂ, ಕೃಷಿ ಹಾಗೂ ಆರೋಗ್ಯ ಇಲಾಖೆಯಿಂದ ಅಧಿಕಾರಿಗಳು ಬಂದಿದ್ದರೂ, ಸಮಸ್ಯೆಯ ಬಗ್ಗೆ ತಿಳಿಸಲು ಸದಸ್ಯರ ಕೊರತೆಯಿಂದ ಕೆಲ ಸಮಸ್ಯೆಯನ್ನು ಮುಖ್ಯಾಧಿಕಾರಿಗಳೇ ಅಧಿಕಾರಿಗಳ ಗಮನಕ್ಕೆ ತಂದರು.
ಈ ವೇಳೆ ಸದಸ್ಯ ಶೈಲೇಶ್ ಅಮೀನ್, ಮಳೆಗಾಲದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಅಭಿವೃದ್ಧಿಯಾಗಬೇಕಾದರೆ ಒಗ್ಗಟ್ಟು ಬೇಕು. ಈತರ ಸದಸ್ಯರು ಗೈರಾಗಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಈ ಬಗ್ಗೆ ಮಾತನಾಡುವಂತೆ ಅಧ್ಯಕ್ಷರನ್ನು ಒತ್ತಾಯಿಸಿದರು.
ಈ ವಿಚಾರದಲ್ಲಿ ಮಾತನಾಡಿದ ಹಿರಿಯ ಸದಸ್ಯ ಅರುಣ್ ಶೆಟ್ಟಿ ಪಾದೂರು, ಈ ಬಗ್ಗೆ ವಿಚಾರ ಮಾಡಬೇಕಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿ ಒಮ್ಮತ ಇರಬೇಕಾಗಿದೆ. ಆರೋಗ್ಯಕರ ಚರ್ಚೆ ಆಗಬೇಕು. ಹೊಂದಾಣಿಕೆ ವ್ಯವಸ್ಥೆ ಸದಸ್ಯರ ಮತ್ತು ಅಧಿಕಾರಿ ವರ್ಗದ ಮಧ್ಯೆ ಸದಸ್ಯರು ಬಾರದೆ ಇರಬೇಕಾದ ಕಾರಣಗಳ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ಈ ರೀತಿ ಆದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಜನ ನಮ್ಮ ಮೇಲೆ ವಿಶ್ವಾಸ ಇರಿಸಿ ಸದಸ್ಯರನ್ನಾಗಿ ಆರಿಸಿದ್ದಾರೆ. ಈ ರೀತಿ ಆದರೆ ಮತ್ತಷ್ಟು ವೈಮನಸ್ಸು ಉಂಟಾಗುತ್ತದೆ. ಮುಂದೆ ಈ ರೀತಿ ಆಗದೆ ರೀತಿಯಲ್ಲಿ ನೋಡಿಕೊಂಡು ಆರೋಗ್ಯವಂತ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.
ಶಾಸಕರ ಹಸ್ತಕ್ಷೇಪ : ಸಭೆಗೆ ಬಹಿಷ್ಕಾರ
ಕಾಪು ಪುರಸಭೆಯ ಸಾಮಾನ್ಯ ಸಭೆಗೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸುವ ಸಂಪೂರ್ಣ ಅಧಿಕಾರವನ್ನು ಕೌನ್ಸಿಲ್ ಅಧ್ಯಕ್ಷರು ಹೊಂದಿದ್ದಾರೆ. ಇದರಲ್ಲಿ ಶಾಸಕರ ಹಸ್ತಕ್ಷೇಪ ಅನುಕೂಲವಾಗುವಂತೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಕೊಂಡು ಪುರಸಭೆಯ ಸಾಮಾನ್ಯ ಸಭೆ ಕರೆದಿರುವುದು ಆಕ್ಷೇಪಾರ್ಹ. ಅಲ್ಲದೆ ಪುರಸಭೆಯ ಹಕ್ಕು ಮತ್ತು ಘನತೆಗೆ ವಿರುದ್ಧ ವಾಗಿದೆ. ಈ ಬಗ್ಗೆ ತೀರ್ಮಾನಿಸಿ, ಬುಧವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷದ ಕಾಂಗ್ರೆಸ್ ಚುನಾಯಿತ ಮತ್ತು ನಾಮ ನಿರ್ದೇಶಿತ ಸದಸ್ಯರುಗಳು ಭಾಗವಹಿಸದೇ ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಫರ್ಜಾನ ಸಂಜಯ್ ತಿಳಿಸಿದರು.

