ಕಾಪು ಹೊಸ ಶ್ರೀ ಮಾರಿಗುಡಿ : ವ್ಯವಸ್ಥಾಪನಾ ಸಮಿತಿಗೆ ಮೊಗವೀರ ಪ್ರತಿನಿಧಿ ಅತಿ ಶೀಘ್ರ ನೇಮಿಸಿ – ಜಿತೇಂದ್ರ ಶೆಟ್ಟಿ
(Kaup)ಕಾಪು : ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನವು ಊರ ಮತ್ತು ಪರವೂರ ಭಕ್ತರ ನೆರವಿನಿಂದ ಭವ್ಯ ಮಂದಿರದ ನಿರ್ಮಾಣಗೊಂಡಿದೆ. ಈ ದೇವಸ್ಥಾನಕ್ಕೆ ಸರಕಾರ ವ್ಯವಸ್ಥಾಪನಾ ಸಮಿತಿಯನ್ನು ಮಾಜಿ ಸಚಿವರ ಶಿಫಾರಸ್ಸಿನ ಮೇರೆಗೆ ರಚಿಸಿದ್ದು, ಸದ್ರಿ ಸಮಿತಿಯಲ್ಲಿ ಮೊಗವೀರ ಸಮಾಜದ ಶ್ರೀಧರ ಕಾಂಚನ್ ರವರು ನೇಮಕಗೊಂಡ, ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿರುತ್ತಾರೆ. ಇವರ ತೆರವಾದ ಸ್ಥಾನಕ್ಕೆ ಮೊಗವೀರ ಸಮಾಜದ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕಾಗಿದ್ದು ಸಾಮಾಜಿಕ ನ್ಯಾಯವಾಗಿದೆ ಎಂದು ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ ಆಗ್ರಹಿಸಿದ್ದಾರೆ.
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಧಾರ್ಮಿಕತೆಯನ್ನೇ ಮೈಗೂಡಿಸಿಕೊಂಡು ಬಂದ ಮೊಗವೀರ ಸಮಾಜದ ಪ್ರತಿನಿಧಿಗೆ ಅವಕಾಶ ನೀಡದೆ ಬೇರೆ ಜಾತಿಯ ಪ್ರತಿನಿಧಿಯನ್ನು ರಾಜ್ಯ ಸರಕಾರದ ಸದಸ್ಯ ಕಾರ್ಯದರ್ಶಿ ರಾಜ್ಯ ಧಾರ್ಮಿಕ ಪರಿಷತ್ತು ಹಾಗೂ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ, ಬೆಂಗಳೂರು ಆದೇಶಿಸಿರುವುದು ಖಂಡನೀಯ.
ಕಾಪು ಕ್ಷೇತ್ರದ ಎಲ್ಲಾ ದೇವಸ್ಥಾನ ಮತ್ತು ಅಧಿಕಾರಿ ವರ್ಗವನ್ನು ತನ್ನ ಶಿಫಾರಸ್ಸಿನಂತೆ ಕಾರ್ಯನಿರ್ವಹಿಸಬೇಕೆಂದು ಸೂಚಿಸುತ್ತಿರುವ ಮಾಜಿ ಸಚಿವರಿಗೆ ಹೊಸಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯ ಸದಸ್ಯರ ನೇಮಕವನ್ನು ಕಾಂಗ್ರೆಸ್ ಸರಕಾರವೇ ನಿಯುಕ್ತಿಗೊಳಿಸಿದ್ದು ತಿಳಿದಿಲ್ಲ ಎನ್ನುವ ಮಾತು ನಂಬಲು ಸಾಧ್ಯವಿಲ್ಲ.
ಕೆಲವು ಕಾಂಗ್ರೆಸ್ ನಾಯಕರುಗಳು ಕಾಂಗ್ರೆಸ್ ಪಕ್ಷದ ನಾಯಕರ ಒಣ ಪ್ರತಿಷ್ಠೆಯಿಂದ ಈ ನೇಮಕ ನಡೆದಿದೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದು, ಕಾಂಗ್ರೆಸ್ ಪಕ್ಷದ ಯಾವ ನಾಯಕರು ಈ ಒಣ ಪ್ರತಿಷ್ಠೆಯಿಂದ ದೊಡ್ಡ ಸಮುದಾಯವಾದ ಮೊಗವೀರ ಸಮಾಜವನ್ನು ಅವಗಣಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಕಾಂಗ್ರೆಸ್ ಪಕ್ಷದ ಭಿನ್ನಾಭಿಪ್ರಾಯದಿಂದ ಮತ್ತು ನಾಯಕರ ಹೊಂದಾಣಿಕೆಯ ಕೊರತೆಯಿಂದಾಗಿ ಇಂತಹ ಬಾಲಿಷ ಹೇಳಿಕೆಗಳನ್ನು ನೀಡಿ ಹಿಂದೂ ಧರ್ಮದ ಏಕತೆಯಲ್ಲಿ ಜಾತಿ-ಜಾತಿಗಳ ನಡುವೆ ವೈಮನಸ್ಸನ್ನು ಮೂಡಿಸುವ ಬದಲು ಮೊಗವೀರ ಸಮಾಜದ ಪ್ರತಿನಿಧಿಯನ್ನು ಶೀಘ್ರವಾಗಿ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ನೇಮಿಸಿ ರಾಜ್ಯ ಸರಕಾರದಿಂದ ಆದೇಶಿಸುವಂತೆ ವಿನಂತಿಸುತ್ತೇವೆ.
ಇಲ್ಲವಾದಲ್ಲಿ ಮೊಗವೀರ ಮಹಾಸಭಾ ಕೈಗೊಳ್ಳುವ ನಿರ್ಣಯಕ್ಕೆ ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರ ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದು ಜಿತೇಂದ್ರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

